ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಡ್ಯ ವಿಶ್ವವಿದ್ಯಾಲಯ, ಪಟೇಲ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಗಾಂಧಿ ಎಂಬ ವರ್ತಮಾನ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಖಗೋಳ ಶಾಸ್ತ್ರ, ತತ್ವಶಾಸ್ತ್ರಕ್ಕೆ ಅಂತಿಮ ಸತ್ಯ ಎನ್ನುವುದಿಲ್ಲ. ಅದೇ ರೀತಿ ಸತ್ಯಶೋಧನೆಗೂ ಕೊನೆ ಎಂಬುದಿಲ್ಲ. ಗಾಂಧಿಯವರು ನಮ್ಮ ಜೀವನವೇ ಒಂದು ಸತ್ಯಶೋಧನೆಯಾಗಬೇಕು. ಸತ್ಯದ ಹಾದಿಯಲ್ಲೇ ಮುನ್ನಡೆಯುವಂತೆ ಸಂದೇಶ ನೀಡಿದರು. ಅದೇ ರೀತಿ ಅವರ ಹೋರಾಟಗಳಿಗೆಲ್ಲಾ ಸತ್ಯಾಗ್ರಹ ಎಂದೇ ಹೆಸರಿಟ್ಟರು. ಭಾರತ ಒಂದು ದೊಡ್ಡ ರಾಷ್ಟ್ರವಾಗಿದ್ದು, ಮೂರು ಸಾವಿರ ವರ್ಷಗಳ ಪರಂಪರೆಯನ್ನು ಹೊಂದಿದೆ. ನೀವು ಬಂದು ಯುದ್ಧ ಮಾಡಿ ಗೆದ್ದಿದ್ದೀರಿ. ಆದರೆ, ನಮ್ಮನ್ನು ಸಾರ್ವಕಾಲಿಕವಾಗಿ ಆಳುವ ಹಕ್ಕು ನಿಮಗಿಲ್ಲ ಎಂದು ಬ್ರಿಟಿಷರಿಗೂ ಸತ್ಯವನ್ನು ಅರ್ಥಮಾಡಿಸಿದರು ಎಂದು ಹೇಳಿದರು.ಗಾಂಧಿ ಇಪ್ಪತ್ತನೇ ಶತಮಾನ ಕಂಡಂತಹ ಕ್ರಾಂತಿಕಾರಿ ಮನುಷ್ಯ. ಗಾಂಧೀಜಿ ಕೊಡುಗೆ ಕೇವಲ ಸ್ವಾತಂತ್ರ್ಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅದನ್ನು ಮೀರಿ ಕೊಡುಗೆಯನ್ನು ನೀಡಿದ್ದಾರೆ. ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳಿಗೆ ಗಾಂಧಿ ವಿಚಾರ, ಚಿಂತನೆಗಳಲ್ಲಿ ಪರಿಹಾರವಿದೆ. ಅದಕ್ಕಾಗಿ ಗಾಂಧಿ ವಿಚಾರಧಾರೆಗಳು ಸಾರ್ವಕಾಲಿಕವಾಗಿ ಉಳಿದುಕೊಂಡಿವೆ ಎಂದು ತಿಳಿಸಿದರು.
೧೯೧೪ ರಿಂದ ೧೯೪೮ರವರೆಗೆ ವೈಚಾರಿಕತೆಯ ಪರಿಕಲ್ಪನೆಯ ಮೇಲೆ ಸಮಾಜ ಹೇಗಿರಬೇಕೆಂಬ ಕನಸನ್ನು ಕಂಡಿದ್ದಂತಹ ಮಹಾನ್ ವ್ಯಕ್ತಿಯಾಗಿದ್ದರು. ಗಾಂಧಿ ಸುಲಭವಾಗಿ ಯಾರಿಗೂ ಅರ್ಥವಾಗುವುದಿಲ್ಲ. ಗಾಂಧಿಯನ್ನು ಅರ್ಥ ಮಾಡಿಕೊಳ್ಳುವ ಮೊದಲು ಭಾರತದ ಇತಿಹಾಸ, ಪರಂಪರೆಯನ್ನು ಓದಿಕೊಂಡಿರಬೇಕು. ೧೯೧೪ ರಿಂದ ೧೯೪೮ರ ಕಾಲಘಟ್ಟವನ್ನು ಅರ್ಥಮಾಡಿಕೊಂಡಿರಬೇಕು. ವಿಶ್ವದ ಎಲ್ಲಾ ಧಾರ್ಮಿಕ ಪರಂಪರೆ, ಇತಿಹಾಸವನ್ನು ಅರ್ಥೈಸಿಕೊಂಡಿರಬೇಕು. ಇವೆಲ್ಲವನ್ನೂ ಗಾಂಧೀಜಿಯವರ ಕಾಲಘಟ್ಟದಲ್ಲಿರಿಸಿ ಜೊತೆಗೂಡಿಸಿಕೊಂಡಾಗ ಗಾಂಧಿ ನಮಗೆ ಅರ್ಥವಾಗುತ್ತಾರೆ ಎಂದು ವಿವರಿಸಿದರು.ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಪುಟ್ಟರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯಾಧ್ಯಕ್ಷ ಎನ್.ಆರ್.ವಿಶುಕುಮಾರ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ ಇದ್ದರು.
‘ಗಾಂಧೀಜಿ ಅವರ ಸತ್ಯ, ಶಾಂತಿ, ಅಹಿಂಸೆಯನ್ನು ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರು ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ಜೀವನಕ್ಕೆ ಬರುತ್ತಾರೆ, ಆ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ವಿದ್ಯಾರ್ಥಿಗಳಿಗೆ ನೆರವಾಗುತ್ತಾರೆ. ಮಕ್ಕಳ ದಿಸೆಯಲ್ಲಿಯೇ ಸ್ವಲ್ಪವಾದರೂ ಗಾಂಧಿ ತತ್ವ ಅಳವಡಿಸಿಕೊಂಡರೆ ಈ ವಿಚಾರ ಸಂಕಿರಣ ಸಾರ್ಥಕ ಎನಿಸುತ್ತದೆ.’- ಎನ್.ಆರ್.ವಿಶುಕುಮಾರ್, ಕಾರ್ಯಾಧ್ಯಕ್ಷರು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ
-------- ಸಹಿಷ್ಣುತೆಯ ಬದುಕಿಗೆ ಗಾಂಧಿ ಮಾದರಿ: ಎಸ್.ತುಕಾರಾಂಕನ್ನಡಪ್ರಭ ವಾರ್ತೆ ಮಂಡ್ಯ
ವೈಯಕ್ತಿಕ ಹೊಣೆಗಾರಿಕೆ, ಸಾಮೂಹಿಕ ಜವಾಬ್ದಾರಿ, ಸ್ವಾಭಿಮಾನ ಮತ್ತು ಸಹಿಷ್ಣುತೆಯ ಬದುಕಿಗೆ ಗಾಂಧಿ ಮಾದರಿಯಾಗಿದ್ದಾರೆ ಎಂದು ರಾಜ್ಯ ಸಂಪನ್ಮೂಲ ಕೇಂದ್ರದ ನಿವೃತ್ತ ನಿರ್ದೇಶಕ ಎಸ್.ತುಕಾರಾಂ ಹೇಳಿದರು.ಗಾಂಧಿ ವಿಚಾರ ಸಂಕಿರಣದಲ್ಲಿ ಗಾಂಧೀಜಿ ಮತ್ತು ಶಿಕ್ಷಣ ಕುರಿತ ವಿಷಯ ಮಂಡಿಸಿದ ಅವರು, ಗಾಂಧಿ ಎಂಬ ಹೆಸರನ್ನು ಲಘುವಾಗಿ ಅರ್ಥೈಸುವುದು ಬೇಡ. ಆ ಹೆಸರಿಗೆ ವಿಶೇಷವಾದ ಶಕ್ತಿ- ಮಹತ್ವವಿದೆ. ಅದನ್ನು ಅರ್ಥೈಸಿಕೊಳ್ಳಬೇಕು. ಅವರ ಮಾರ್ಗದಲ್ಲಿ ಮುನ್ನಡೆದು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ಅವರನ್ನು ಪೂರ್ಣವಾಗಿ ತಿಳಿದುಕೊಳ್ಳಿ. ಏಕೆಂದರೆ, ಅಪೂರ್ಣವಾಗಿ ತಿಳಿದುಕೊಂಡು ಟೀಕಿಸುವುದನ್ನು ಮೊದಲು ಬಿಡಬೇಕು. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಇವರ ಬಗ್ಗೆ ಪೂರ್ಣವಾಗಿ ಹೇಳುವುದನ್ನು ಶಿಕ್ಷಣ ಏಕೆ ಮಾಡುತ್ತಿಲ್ಲ? ಅದನ್ನು ಶಿಕ್ಷಕರು ಸಮರ್ಪಕವಾಗಿ ತಿಳಿಸುವ ಕೆಲಸ ಮಾಡಬೇಕು. ಕೇವಲ ಫೋಟೋ, ಗಂಧದ ಕಡ್ಡಿ ಹೊತ್ತಿಸಿ ಹೂ ಹಾಕಿದರೆ ಪ್ರಯೋಜನವಿಲ್ಲ ಎಂದರು.