ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ನಗರದಲ್ಲಿರುವ ಮೂರ್ನಾಲ್ಕು ಪ್ರಮುಖ ರಸ್ತೆಗಳಲ್ಲಿ ನಗರಸಭೆ , ಪೊಲೀಸ್ ಇಲಾಖೆ ನಿರ್ಲಕ್ಷ್ಯದಿಂದಾಗಿ ಪಾದಚಾರಿ ಮಾರ್ಗಗಳೇ ನಾಪತ್ತೆಯಾಗಿವೆ. ಇದರಿಂದಾಗಿ ಪಾದಚಾರಿಗಳು ಫುಟ್‌ಪಾತ್‌ಗಳಲ್ಲಿ ಸರ್ಕಸ್ ಮಾಡುವಂತಾಗಿದೆ. ನಾಗರಿಕ ಸೌಲಭ್ಯಗಳ ಕೊರತೆ
ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿ ನಾಗರಿಕರಿಗೆ ಸುರಕ್ಷಿತ ಸಂಚಾರಕ್ಕೆ ಯೋಗ್ಯವಾದ ಪಾದಚಾರಿ ಮಾರ್ಗಗಳಾಗಲಿ, ಪ್ರಯಾಣಿಕರಿಗೆ ಬಸ್ ತಂಗುದಾಣಗಳಾಗಲಿ, ವಿಶ್ರಾಂತಿ ಪಡೆಯಲು ನೆರವಾಗುವ ಉದ್ಯಾನವನಗಳಾಗಲಿ, ಪಾರ್ಕಿಂಗ್ ವ್ಯವಸ್ಥೆಯಾಗಲಿ ಇಲ್ಲ. ಇಂತಹ ಅಗತ್ಯ ನಾಗರಿಕ ಸೌಲಭ್ಯ ಕಲ್ಪಿಸಬೇಕೆಂಬ ಚಿಂತನೆಯೂ ಅಧಿಕಾರಸ್ಥರಿಗಿಲ್ಲ.ಇದೇ ಕಾರಣಕ್ಕೆ ಪಾದಚಾರಿಗಳಿಗೆ ಕಿರಿಕಿರಿಯಾಗುವುದು ಗೊತ್ತಿದ್ದರೂ ವಾಹನ ಸವಾರರು ತಮ್ಮ ದಿಚಕ್ರ, ತ್ರಿಚಕ್ರ ವಾಹನಗಳನ್ನು ರಸ್ತೆ ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿ ನಿಲ್ಲಿಸಿ ಸುಗಮ ಸಂಚಾರಕ್ಕೆ ತೊಂದರೆ ಕೊಡುತ್ತಿದ್ದಾರೆ. ನಗರದ ಅಭಿವೃದ್ದಿಗೆ ಕೈಜೋಡಿಸಿ ಜಿಲ್ಲಾ ಕೇಂದ್ರದ ಅಂದವನ್ನು ಹೆಚ್ಚಿಸಬೇಕಿದ್ದ ನಗರಾಡಳಿತಕ್ಕೆ ಈ ಬಗ್ಗೆ ಗಮನ ಹರಿಸುವ ವ್ಯವದಾನವಾಗಲಿ, ದೂರದೃಷ್ಟಿಯಾಗಲಿ ಇಲ್ಲವಾಗಿದೆ.
ನಗರದ ಬೀದಿಗಳಲ್ಲಿ ಕಸದರಾಶಿ, ಎಲ್ಲೆಂದರಲ್ಲಿ ಮೂತ್ರವಿಸರ್ಜನೆ, ಹಬ್ಬ ಹರಿದಿನಗಳು ಬಂತೆಂದರೆ ಸಾಕು ಮೂರ್ನಾಲ್ಕು ದಿನಗಳ ಸತತ ಕಸದ ರಾಶಿಯ ದರ್ಶನ ಎದ್ದು ಕಾಣುತ್ತದೆ. ನಗರ ಸಭೆಯ ಪೌರ ಕಾರ್ಮಿಕ ಸಿಬ್ಬಂದಿ ತಮಗೆ ವಹಿಸಿದ ಕೆಲಸ ಮಾಡುತ್ತಿದ್ದರೂ ಹೆಚ್ಚುವರಿಯಾಗಿ ಬೀಳುವ ಕಸದಿಂದಾಗಿ ಬೀದಿಯಲ್ಲೇ ಕೊಳೆಯುವಂತಾಗಿದೆ. .ಪ್ಲಾಸ್ಟಿಕ್‌ಗೆ ನಿಷೇಧ ಹೇರಿದ್ದರೂ ಕಸದಲ್ಲಿ ಮುಕ್ಕಾಲು ಪಾಲು ಅದೇ ಇದೆ. ಪಾದಚಾರಿ ಮಾರ್ಗಗಳನ್ನು ಅಂಗಡಿಗಳ ಮಾಲಿಕರು ಒತ್ತುವರಿ ಮಾಡಿಕೊಂಡರೂ ತುಟಿ ಬಿಚ್ಚಿ ಕೇಳದಷ್ಟು ಆಲಸ್ಯತನ ಇಲ್ಲಿನ ಅಧಿಕಾರಿ ಸಿಬ್ಬಂದಿಗೆ ಬಂದಿದೆ.ಅವ್ಯಸ್ಥೆಗಳು ಕಣ್ಣಿಗೆ ರಾಚುತ್ತಿದ್ದರೂ ಕಂಡೂ ಕಾಣದಂತೆ ಜಾಣಕುರುಡುತನ ಪ್ರದರ್ಶಿಸುತ್ತಿರುವುದು ನಗರವಾಸಿಗಳ ಅಸಹನೆಗೆ ಕಾರಣವಾಗಿದೆ.ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ
ಈಗಲಾದರೂ ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಗರದಲ್ಲಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಂಡು ನಾಗರಿಕಕು ನೆಮ್ಮದಿಂದ ಸಂಚರಿಸಲು ಅನುವು ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.