ನಿವೃತ್ತ ನೌಕರನ ಪಿಂಚಣಿ ಖಾತೆಗೂ ಕನ್ನ!

KannadaprabhaNewsNetwork |  
Published : Nov 21, 2026, 02:15 AM IST
ಫೋಟೋ ಶೀರ್ಷಿಕೆ: ಫೇಸ್‌ಬುಕ್‌ನಲ್ಲಿ ಯೂನಿಯನ್ ಬ್ಯಾಂಕ್ ಹೆಸರಿನಲ್ಲಿ ಪ್ರಕಟವಾಗಿರುವ ನಕಲಿ ಜಾಹೀರಾತು. | Kannada Prabha

ಸಾರಾಂಶ

ಫೇಸ್‌ಬುಕ್‌ನಲ್ಲಿ ಬಂದ ಬ್ಯಾಂಕ್ ಜಾಹೀರಾತನ್ನು ನಂಬಿದ ಕೊಪ್ಪಳ ನಗರದ ನಿವೃತ್ತ ಉಪನ್ಯಾಸಕರೊಬ್ಬರು ಬರೋಬ್ಬರಿ ₹1.20 ಲಕ್ಷ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಸೈಬರ್ ವಂಚಕರ ಜಾಲ ದಿನೇ ದಿನೇ ವಿಸ್ತರಿಸುತ್ತಿದ್ದು, ಇದೀಗ ನಿವೃತ್ತ ನೌಕರರ ಪಿಂಚಣಿ ಖಾತೆಗಳಿಗೂ ಕನ್ನ ಹಾಕಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ಬಂದ ಬ್ಯಾಂಕ್ ಜಾಹೀರಾತನ್ನು ನಂಬಿದ ಕೊಪ್ಪಳ ನಗರದ ನಿವೃತ್ತ ಉಪನ್ಯಾಸಕರೊಬ್ಬರು ಬರೋಬ್ಬರಿ ₹1.20 ಲಕ್ಷ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ ನಿವಾಸಿ ನಿವೃತ್ತ ಉಪನ್ಯಾಸಕ ಮಹಾಂತೇಶ ಮಲ್ಲನಗೌಡ್ರ ವಂಚನೆಗೆ ಒಳಗಾದವರು. ಇವರ ಬ್ಯಾಂಕ್ ಖಾತೆಯಿಂದ ಐದು ಬಾರಿ ಹಣ ವರ್ಗಾವಣೆ ಮಾಡಿರುವ ವಂಚಕರು, ಒಟ್ಟು ₹1.20 ಲಕ್ಷವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.

ಆಗಿದ್ದೇನು?: ಮಹಾಂತೇಶ ಮಲ್ಲನಗೌಡ್ರ ಅವರು ಫೇಸ್‌ಬುಕ್ ವೀಕ್ಷಿಸುತ್ತಿದ್ದಾಗ ಯೂನಿಯನ್ ಬ್ಯಾಂಕ್ ಹೆಸರಿನಲ್ಲಿರುವಂತೆ ಕಾಣುವ ಜಾಹೀರಾತೊಂದು ಕಾಣಿಸಿಕೊಂಡಿದೆ. ನಿವೃತ್ತ ನೌಕರರು ಪ್ರತಿವರ್ಷ ಸಲ್ಲಿಸಬೇಕಾದ ಜೀವಂತ ಪ್ರಮಾಣಪತ್ರವನ್ನು ಇನ್ನು ಮುಂದೆ ಬ್ಯಾಂಕಿಗೆ ತೆರಳಿ ಸಲ್ಲಿಸುವ ಅಗತ್ಯವಿಲ್ಲ. ಆನ್‌ಲೈನ್ ಮೂಲಕವೇ ಅಪ್‌ಲೋಡ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಜಾಹೀರಾತಿನಲ್ಲಿ ನೀಡಿರುವ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿತ್ತು.

ಇದನ್ನು ನಂಬಿದ ಮಹಾಂತೇಶ ಅವರು ಜಾಹೀರಾತಿನಲ್ಲಿ ನೀಡಿದ್ದ ಸಂಖ್ಯೆಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದವರು ಕೇಳಿದ ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ನೀಡಿದ್ದಾರೆ. ಈ ಮಾಹಿತಿಗಳನ್ನು ಪಡೆದುಕೊಂಡ ವಂಚಕರು, ಇವರ ಗಮನಕ್ಕೆ ಬಾರದಂತೆ ಐದು ಹಂತಗಳಲ್ಲಿ ಖಾತೆಯಿಂದ ₹1.20 ಲಕ್ಷವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.

ಬಳಿಕ ಮೊಬೈಲ್‌ಗೆ ಬಂದ ಹಣ ವರ್ಗಾವಣೆಯ ಸಂದೇಶಗಳನ್ನು ಗಮನಿಸಿದಾಗ ವಂಚನೆಯಾಗಿರುವುದು ಗೊತ್ತಾಗಿದೆ. ತಕ್ಷಣ ಯೂನಿಯನ್ ಬ್ಯಾಂಕ್‌ಗೆ ತೆರಳಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಇಂತಹ ವೈಯಕ್ತಿಕ ಮಾಹಿತಿಯನ್ನು ಬ್ಯಾಂಕ್ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿ, ಮುನ್ನೆಚ್ಚರಿಕೆ ಕ್ರಮವಾಗಿ ಖಾತೆಯ ವಹಿವಾಟನ್ನು ಸ್ಥಗಿತಗೊಳಿಸಿದ್ದಾರೆ.

ದೂರು ದಾಖಲು: ಬ್ಯಾಂಕ್ ಅಧಿಕಾರಿಗಳ ಸೂಚನೆಯಂತೆ ಸೈಬರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್ ಹೆಸರಿನ ನಕಲಿ ಜಾಹೀರಾತುಗಳ ಬಗ್ಗೆ ಎಚ್ಚರ!: "ಬ್ಯಾಂಕಿನವರೇ ಜಾಹೀರಾತು ನೀಡಿದ್ದಾರೆ ಎಂದು ನಂಬಿ ಮೋಸ ಹೋಗಿದ್ದೇನೆ. ಇಂತಹ ವಂಚನೆಗೆ ಯಾರೂ ಬಲಿಯಾಗಬಾರದು. ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿನ ಜಾಹೀರಾತುಗಳನ್ನು ನಂಬದೆ, ನೇರವಾಗಿ ಬ್ಯಾಂಕಿಗೆ ತೆರಳಿ ಮಾಹಿತಿ ಪಡೆಯಬೇಕು " ಎಂದು ಸಂತ್ರಸ್ತ ನಿವೃತ್ತ ಉಪನ್ಯಾಸಕ ಮಹಾಂತೇಶ ಮಲ್ಲನಗೌಡ್ರ ಮನವಿ ಮಾಡಿದ್ದಾರೆ.ತನಿಖೆ ನಡೆಸಲಾಗುವುದು: ವಂಚನೆಯಾಗಿರುವ ಕುರಿತು ಮಾಹಿತಿ ನೀಡಿದ್ದು, ಆನ್‌ಲೈನ್‌ನಲ್ಲಿಯೂ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಕೊಪ್ಪಳ ಸೈಬರ್ ಪೊಲೀಸ್ ಠಾಣೆ ಪಿಐ ಆಂಜನೇಯ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಗೆ ನೀರು ಆಪೋಶನ: ಜಲಕ್ಷಾಮ ಭೀತಿ !
371ಜೆ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳ ಅಭೂತಪೂರ್ವ ಬೆಂಬಲ