ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಇಲ್ಲಂದ್ರೆ ಏನರ್ಥ?: ಮಧು ಬಂಗಾರಪ್ಪ

KannadaprabhaNewsNetwork |  
Published : Nov 21, 2026, 02:15 AM IST
ಕೊಪ್ಪಳ ನಗರದ ಜಿಪಂ ಜೆ.ಎಚ್. ಪಟೇಲ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಶಾಲಾ ಶಿಕ್ಷಣ ಇಲಾಖೆಯ 2026–27ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆ ಸಚಿವ ಎಸ್. ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಜರುಗಿತು. | Kannada Prabha

ಸಾರಾಂಶ

ಕೊಪ್ಪಳ ನಗರದ ಜಿಪಂ ಜೆ.ಎಚ್. ಪಟೇಲ ಸಭಾಂಗಣದಲ್ಲಿ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಶಾಲಾ ಶಿಕ್ಷಣ ಇಲಾಖೆಯ 2026–27ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಕೊಪ್ಪಳ: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಇಲ್ಲಂದ್ರೆ ಏನರ್ಥ ಎಂದು ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಅಧಿಕಾರಿಗಳಿಗೆ ಪ್ರಶ್ನಿಸಿದರು.

ನಗರದ ಜಿಪಂ ಜೆ.ಎಚ್. ಪಟೇಲ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಶಾಲಾ ಶಿಕ್ಷಣ ಇಲಾಖೆಯ 2026–27ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ದಾಖಲಾತಿ ಹೆಚ್ಚಳವನ್ನು ಅಧಿಕಾರಿಗಳು ಒಂದು ಆಂದೋಲನದಂತೆ ಪರಿಗಣಿಸಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಒಂದನೇ ತರಗತಿ ದಾಖಲಾತಿ ವಯೋಮಿತಿ ನಿಯಮದ ಬದಲಾವಣೆಯಿಂದಾಗಿ ಕಳೆದ ಸಾಲಿಗಿಂತ ಈ ಬಾರಿ ಸುಮಾರು 6,000 ಮಕ್ಕಳ ದಾಖಲಾತಿ ಕಡಿಮೆಯಾಗಿರುವ ಕುರಿತು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಸರ್ಕಾರದಿಂದ ಉಚಿತ ವಿದ್ಯುತ್, ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್, ಅತಿಥಿ ಶಿಕ್ಷಕರು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೂ ಮಕ್ಕಳು ಸರ್ಕಾರಿ ಶಾಲೆಗಳಿಗೆ ಬಾರದಿದ್ದರೆ ನಮ್ಮ ಮೇಲಿನ ವಿಶ್ವಾಸ ಕಡಿಮೆಯಾಗುತ್ತದೆ‌. ಹಾಗಾಗಿ ಜಿಲ್ಲೆಯಲ್ಲಿ ಆರಂಭಿಸಲಾಗಿರುವ 203 ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಹೆಚ್ಚಿನ ಮಕ್ಕಳನ್ನು ದಾಖಲಿಸಿಕೊಳ್ಳುವ ಮೂಲಕ ಒಂದನೇ ತರಗತಿಯ ದಾಖಲಾತಿ ತಾನಾಗಿಯೇ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಪರೀಕ್ಷೆಗೆ ಗೈರಾಗುವ ಮಕ್ಕಳ ಮನೆಗೆ ಭೇಟಿ ನೀಡಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದರೂ ಸುಮಾರು 1,631 ಮಕ್ಕಳು ಪರೀಕ್ಷೆಗೆ ಗೈರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಪರೀಕ್ಷಾ ಸಮಯದಲ್ಲಿ ಶಿಕ್ಷಕರು ಮತ್ತು ಅಧಿಕಾರಿಗಳು ಗೈರಾಗುವ ಮಕ್ಕಳ ಮನೆಗೆ ಖುದ್ದು ಭೇಟಿ ನೀಡಿ, ಪೋಷಕರ ಮನವೊಲಿಸಿ, ಆ ಮಕ್ಕಳಿಗೆ ಪರೀಕ್ಷೆ ಬರೆಯುವಂತೆ ಪ್ರೇರೇಪಿಸಬೇಕು. ಇದರ ಜತೆಗೆ ದ್ವಿತೀಯ ಪಿಯುಸಿಯಲ್ಲಿ ''''''''ಮಿಷನ್ 60'''''''' ಗುರಿ ತಲುಪಲು ವಿಶೇಷ ತರಗತಿಗಳನ್ನು ನಡೆಸಬೇಕು ಹಾಗೂ ಮೌಲ್ಯ ಶಿಕ್ಷಣಕ್ಕೆ ಒತ್ತು ನೀಡಬೇಕು. ಮಕ್ಕಳ ಪಾಲಕರ ಮತ್ತು ಶಿಕ್ಷಕರ ಸಭೆಗಳನ್ನು ಸಹ ನಿಯಮಿತವಾಗಿ ಹಮ್ಮಿಕೊಳ್ಳಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಜೂನ್‌ನಿಂದ ಪ್ರತ್ಯೇಕ ಉಚಿತ ಬಸ್: ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ (ಕೆಪಿಎಸ್) ಒಂದೇ ಸೂರಿನಡಿ 14 ವರ್ಷಗಳ ಸಮಗ್ರ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಬಸ್‌ಗಳಲ್ಲಿ ಮಕ್ಕಳಿಗೆ ಆಗುತ್ತಿರುವ ಸಮಯದ ವ್ಯತ್ಯಯ ತಪ್ಪಿಸಲು ಮುಂದಿನ ಜೂನ್ ತಿಂಗಳಿನಿಂದ ಕೆಪಿಎಸ್ ಶಾಲಾ ಮಕ್ಕಳಿಗಾಗಿಯೇ ಸರ್ಕಾರದಿಂದ ಪ್ರತ್ಯೇಕ ಉಚಿತ ಬಸ್ ಸೌಲಭ್ಯ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.

ಅಲ್ಲದೆ, ಮುಂದಿನ ಶೈಕ್ಷಣಿಕ ವರ್ಷದಿಂದ 1ರಿಂದ 12ನೇ ತರಗತಿ ವರೆಗಿನ ಎಲ್ಲ ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಿಸಲಾಗುವುದು. ಪಠ್ಯಪುಸ್ತಕಗಳ ಭಾಗ-1 ಮತ್ತು ಭಾಗ-2ನ್ನು ಒಟ್ಟಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಶೇಖರಪ್ಪ ಹೊರಪೇಟಿ ಮಾತನಾಡಿ, ಜಿಲ್ಲೆಯ 49 ಕೆಪಿಎಸ್ ಶಾಲೆಗಳ ಪೈಕಿ 26 ಶಾಲೆಗಳಿಗೆ ಕೆಕೆಆರ್‌ಡಿಬಿ ಹಾಗೂ 14 ಶಾಲೆಗಳಿಗೆ ಎಡಿಬಿ ಅನುದಾನ ಮಂಜೂರಾಗಿದೆ ಎಂದು ವಿವರಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜಶೇಖರ ಪಾಟೀಲ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಶೇ. 40ಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಾಗೂ ಆಯ್ದ 7 ಕಾಲೇಜುಗಳಲ್ಲಿ ಸಿಇಟಿ ಮತ್ತು ನೀಟ್ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಪ್ರಾಚಾರ್ಯ ಎಲ್.ಡಿ ಜೋಶಿ ಮಾತನಾಡಿ, ಯೂಟ್ಯೂಬ್ ಲೈವ್ ಮೂಲಕ ಶಿಕ್ಷಕರಿಗೆ ಪಾಠ ಆಧಾರಿತ ಮೌಲ್ಯಮಾಪನ ತರಬೇತಿ ನೀಡಲಾಗಿದ್ದು, ಜಿಲ್ಲೆಯ ಶೇ. 95ರಷ್ಟು ಸರ್ಕಾರಿ ಶಾಲೆಗಳು ಇದನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿವೆ ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಪಂ ಉಪ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಗೆ ನೀರು ಆಪೋಶನ: ಜಲಕ್ಷಾಮ ಭೀತಿ !
371ಜೆ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳ ಅಭೂತಪೂರ್ವ ಬೆಂಬಲ