ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ವಿವಿಧ ಭಾಗಗಳಲ್ಲಿ ಯುವಕರು ಡಿಜೆ ಸಂಗೀತಕ್ಕೆ ತಾಳಮೇಳ ಹಾಕಿ ಕುಣಿದು ಕುಪ್ಪಳಿಸಿದರು. ಕೆಲವೆಡೆ ಸಾಂಪ್ರದಾಯಿಕವಾಗಿ ಹೋಳಿ ಕಡ್ಡಿ ದಹನ ಕಾರ್ಯಕ್ರಮಗಳು ಕೂಡ ಜರುಗಿದವು. ಪೊಲೀಸರು ನಗರದ ಆಯಕಟ್ಟಿನ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆಯನ್ನು ಕೈಗೊಂಡಿದ್ದರು. ಹೀಗಾಗಿ, ಯಾವುದೇ ಅಹಿತಕರ ಘಟನೆಗಳ ಬಗ್ಗೆ ವರದಿಯಾಗಿಲ್ಲ. ಬಣ್ಣ, ಭಕ್ತಿ ಮತ್ತು ಬಾಂಧವ್ಯದ ಸಮ್ಮಿಲನವಾಗಿ ಬೆಳಗಾವಿಯಲ್ಲಿ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಹಾಗೂ ಶಾಂತಿಯುತವಾಗಿ ಆಚರಿಸಲಾಯಿತು. ಹಬ್ಬದ ಸಂಭ್ರಮ ನಗರದೆಲ್ಲೆಡೆ ಸಡಗರ ಮೂಡಿಸಿತ್ತು. ಎಲ್ಲೆಡೆ ಪರಸ್ಪರರು ಬಣ್ಣವನ್ನು ಹಚ್ಚಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಬೆಳಗಾವಿ ನಗರದಲ್ಲಿ ಹೋಳಿ ಹಬ್ಬದ ಸಂಭ್ರಮ ಜೋರಾಗಿದ್ದರೂ, ಚಂದ್ರಗ್ರಹಣದ ಪರಿಣಾಮ ಧಾರ್ಮಿಕ ಕಾರ್ಯಕ್ರಮಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಕಂಡು ಬಂದಿತು. ನಗರದ ಪಾಂಗುಳ ಗಲ್ಲಿಯಲ್ಲಿ ಇರುವ ಐತಿಹಾಸಿಕ ಅಶ್ವತ್ಥಾಮ ಮಂದಿರದಲ್ಲಿ ಪ್ರತಿವರ್ಷ ಹೋಳಿ ಅಂಗವಾಗಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯುವ ಉರುಳುಸೇವೆಗೆ ಈ ಬಾರಿ ಸಮಯ ಬದಲಾವಣೆ ಮಾಡಲಾಗಿತ್ತು. ದೇವಾಲಯ ಆಡಳಿತ ಮಂಡಳಿ ಚಂದ್ರ ಗ್ರಹಣ ಹಿನ್ನೆಲೆ ಮುಂಜಾಗ್ರತೆಯಿಂದ ಬೆಳಗ್ಗೆಯೇ ಉರುಳುಸೇವೆ ಆರಂಭಿಸಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಕ್ತಿಭಾವದಿಂದ ಸೇವೆಯಲ್ಲಿ ಪಾಲ್ಗೊಂಡರು. ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನಕ್ಕೆ ವಿಶೇಷ ಪೌರಾಣಿಕ ಮಹತ್ವವಿದೆ. ಪಾಂಡವರ ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ಶಾಪಗ್ರಸ್ತನಾದ ಅಶ್ವತ್ಥಾಮ ಇಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಸ್ಥಳೀಯರಲ್ಲಿ ಇದೆ. ಅಶ್ವತ್ಥಾಮನನ್ನು ನೋಡುವುದು ದುರಾದೃಷ್ಟ ಎನ್ನುವ ಮಾತು ಪ್ರಚಲಿತದಲ್ಲಿದ್ದರೂ, ಹೋಳಿ ಹುಣ್ಣಿಮೆ ದಿನ ಇಲ್ಲಿ ವಿಶೇಷ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ.ಹಬ್ಬದ ಅಂಗವಾಗಿ ನಗರದೆಲ್ಲೆಡೆ ಬಣ್ಣದೋಕುಳಿ ಕಣ್ಮನ ಸೆಳೆಯಿತು. ಯುವಕರು, ಮಹಿಳೆಯರು ಮತ್ತು ಮಕ್ಕಳು ಪರಸ್ಪರ ಬಣ್ಣ ಎರಚುತ್ತ ಸಂಭ್ರಮಿಸಿದರು. ಶಾಸಕ ಅಭಯ ಪಾಟೀಲ ಅವರ ಪ್ರಾಯೋಜಕತ್ವದಲ್ಲಿ ಟಿಳಕವಾಡಿ ವ್ಯಾಕ್ಸಿನ್ ಡಿಪೋದಲ್ಲಿ ನಡೆದ ಹೋಳಿ ಮಿಲನ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಜನರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಹಬ್ಬದ ಮಹತ್ವವನ್ನು ಸಾರುವ ಮಾತುಗಳು ಕೇಳಿಬಂದವು. ಸಮಾಜದಲ್ಲಿ ಐಕ್ಯತೆ, ಸಹೋದರತ್ವ ಮತ್ತು ಸ್ನೇಹಭಾವ ಬೆಳೆಸುವ ಹಬ್ಬವಾಗಿ ಹೋಳಿಯನ್ನು ಆಚರಿಸಬೇಕು ಎಂಬ ಸಂದೇಶವನ್ನು ವಕ್ತಾರರು ನೀಡಿದರು. ಸಂಗೀತ, ನೃತ್ಯ ಹಾಗೂ ಡಿಜೆ ಕಾರ್ಯಕ್ರಮಗಳು ಹಬ್ಬದ ಕಳೆ ಹೆಚ್ಚಿಸಿತ್ತು. ಅಲ್ಲದೇ, ವಿವಿಧ ಸಂಘ-ಸಂಸ್ಥೆಗಳು ಕೂಡ ಅಲ್ಲಲ್ಲಿ ಹೋಳಿ ಉತ್ಸವ ಆಚರಣೇ ಕಾರ್ಯಕ್ರಮ ಆಯೋಜಿಸುವ ಮೂಲಕ ರಂಗಿನಾಟಕ್ಕೆ ಮೆರಗು ನೀಡಿದವು.
ಗ್ರಹಣದ ಪರಿಣಾಮಗಳ ನಡುವೆ ಭಕ್ತಿಭಾವ ಮತ್ತು ಬಣ್ಣದ ಸಂಭ್ರಮ ಎರಡನ್ನೂ ಸಮತೋಲನದಲ್ಲಿಟ್ಟುಕೊಂಡು ಬೆಳಗಾವಿಯಲ್ಲಿ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಮತ್ತು ಅದ್ಧೂರಿಯಾಗಿ ಆಚರಿಸಲಾಯಿತು.