ಕನ್ನಡಪ್ರಭ ವರದಿ ಉಲ್ಲೇಖಿಸಿ ದಿಶಾ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಗರಂ । ಅಧಿಕಾರಿಗಳ ನಡೆಗೆ ತೀವ್ರ ಅಸಮಧಾನ । ಕೊಳಚೆಯಿಂದ ದಲಿತರ ಮುಕ್ತಿಗೊಳಿಸಲು ಹದಿನೈದು ದಿನಗಳ ಗಡವುಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಹಿರಿಯೂರು ತಾಪಂ ಕಾರ್ಯನಿರ್ವಾಹಕರ ಅಧಿಕಾರಿ ಮೇಲೆ ಸಂಸದ ಗೋವಿಂದ ಕಾರಜೋಳ ಮನುಷ್ಯತ್ವ ನೆನಪು ಮಾಡಿದ ಬಗೆಯಿದು. ಕನ್ನಡಪ್ರಭದಲ್ಲಿ ಬಂದ ವರದಿ ಅವರಲ್ಲಿ ಇಂತಹದ್ದೊಂದು ಆಕ್ರೋಶ ಮೂಡಲು ಕಾರಣವಾಗಿತ್ತು. ಕಳೆದ ಜುಲೈ 5ರಂದು ಕೊಳಚೆಯಲ್ಲಿ ಮುಳುಗಿದ ಜನತಾ ಕಾಲೋನಿ ಎಂಬ ತಲೆಬರಹದಡಿ ಕನ್ನಡಪ್ರಭ ವರದಿ ಪ್ರಕಟಿಸಿತ್ತು. ದಿಶಾ ಸಭೆ ಆರಂಭದಲ್ಲಿ ಪತ್ರಿಕಾ ವರದಿ ತುಣುಕು ಹಿಡಿದು ನೇರವಾಗಿ ತಾಪಂ ಇಒ ಮೇಲೆ ಹರಿಹಾಯ್ದ ಅವರು ಸ್ಥಳಕ್ಕೆ ಹೋಗಿದ್ದಿರಾ, ಅಲ್ಲಿಯ ಜನರ ಬದುಕು ನೋಡಿದ್ದೀರಾ ಎಂದು ಪ್ರಶ್ನಿಸಿದರು.
ಈ ಮಾತಿಗೆ ಮಧ್ಯ ಪ್ರವೇಶಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್, ಅಲ್ಲಿನ ಜನರು ಕೊಳಚೆ ಸಂಬಂಧಿಸಿದಂತೆ ತಮ್ಮ ಬಳಿಗೆ ಬಂದು ಹೋಗಿ ತಿಂಗಳಾಗಿದೆ. ಅವತ್ತೇ ಕ್ರಿಯಾ ಯೋಜನೆ ರೂಪಿಸುವಂತೆ ಸೂಚಿಸಿದ್ದೇನೆ. ಚರಂಡಿ ನೀರು ಸುಗಮವಾಗಿ ಹರಿಯುವಂತೆ ಮಾಡಲು ಇರುವ ಸಮಸ್ಯೆಯಾದರೂ ಏನು. ಪೊಲೀಸರ ಸಹಾಯ ಪಡೆದು ಸಮಸ್ಯೆ ನಿವಾರಣೆ ಮಾಡುವಂತೆ ತಾಕೀತು ಮಾಡಿದರು.ತಾಪಂ ಇಒ ಡಾ.ಪ್ರಮೋದ್ ಮಾತನಾಡಿ, ಕಾಲೋನಿ ಮುಂದೆ ಖಾಸಗಿಯೋರ್ವರ ಜಮೀನು ಇದೆ. ಚರಂಡಿ ನೀರು ಹೋಗಲು ಅವರು ಅವಕಾಶ ಮಾಡಿಕೊಡುತ್ತಿಲ್ಲ. ನೀರು ಹೋಗದಂತೆ ಮಣ್ಣು ಅಡ್ಡ ಹಾಕಿದ್ದಾರೆ ಎಂದರು.
ಜಿಲ್ಲೆಯ ಬಹುತೇಕ ಶಾಲೆಗಳಲ್ಲಿನ ಶೌಚಾಲಯಗಳ ನಿರ್ಮಾಣ, ದುರಸ್ತಿ ಹಾಗೂ ನಿರ್ವಹಣೆ ಕೆಲಸವನ್ನು ಹತ್ತು ವರ್ಷ ತೆಗೆದುಕೊಳ್ಳುತ್ತೀರ, ಅದೇನು ಅಣೆಕಟ್ಟು ನಿರ್ಮಾಣವೇ ಎಂದು ಸಂಸದರು ಪ್ರಶ್ನಿಸಿದರು. ಜಿಲ್ಲೆಯ ವಿವಿಧ ಶಾಲೆಗಳು, ವಿವಿಧ ಸ್ಥಳಗಳಲ್ಲಿ ಒಟ್ಟು 3,866 ಶೌಚಾಲಯಗಳಿದ್ದು, ಅವುಗಳ ಪೈಕಿ ಬರೋಬ್ಬರಿ 1,140 ಶೌಚಾಲಯಗಳು ಬಂದ್ ಆಗಿವೆ. ಶೌಚಾಲಯಗಳ ದುರಸ್ತಿಗೆ ಹಣ ಬಿಡುಗಡೆಯಾಗಿದ್ದರೂ ಇಷ್ಟು ವರ್ಷಗಳ ಕಾಲ ವಿಳಂಬ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ತಾಂತ್ರಿಕ ಕಾರಣಗಳ ಮುಂದಿಟ್ಟುಕೊಂಡು ಮಕ್ಕಳ ಮೂಲ ಸೌಕರ್ಯಗಳನ್ನು ನಿರ್ಲಕ್ಷಿಸಬೇಡಿ. ಕೂಡಲೇ ಈ ಎಲ್ಲಾ 1,140 ಶೌಚಾಲಯಗಳನ್ನು ಸರಿಪಡಿಸಿ ಬಳಕೆಗೆ ಯೋಗ್ಯವಾಗಿಸಬೇಕು ಎಂದು ತಾಕೀತು ಮಾಡಿದರು.
ಶಾಲಾ ಶೌಚಾಲಯಗಳ ಸ್ವಚ್ಛತೆ ಹಾಗೂ ನಿರ್ವಹಣೆಗೆ ಪ್ರತಿ ಶಾಲೆ ವರ್ಷಕ್ಕೆ ರು.10 ಸಾವಿರ ಶಾಲಾನುದಾನ ನಿರ್ವಹಣೆಗೆ ನೀಡಲಾಗುತ್ತಿದೆ. ಆದರೆ ಈ ಹಣವನ್ನು ಎಷ್ಟು ಶಾಲೆಗಳ ಮುಖ್ಯ ಶಿಕ್ಷಕರು ಸರಿಯಾಗಿ ಬಳಕೆ ಮಾಡಿದ್ದಾರೆ ಎಂಬುದುದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳ ಸಂಪೂರ್ಣ ಮಾಹಿತಿ ಪಡೆದು ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್ ಮಾತನಾಡಿ, ಜಿಲ್ಲೆಯ ಒಟ್ಟು 92 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ 216 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು ಎಂದು ಅಂದಾಜಿಸಲಾಗಿತ್ತು. ತೀವ್ರ ಸಮಸ್ಯೆ ಎದುರಾದ 49 ಜನವಸತಿ ಪ್ರದೇಶಗಳಲ್ಲಿ ಈಗಾಗಲೇ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಚಿತ್ರದುರ್ಗ ತಾಲೂಕು ಮಠದ ಕುರುಬರಹಟ್ಟಿ ಗ್ರಾಮದ ಕರಡಿಗುಡ್ಡದ ಪ್ರದೇಶದ ವ್ಯಾಪ್ತಿಯಲ್ಲಿ 4 ಕಲ್ಲು ಗಣಿ ಗುತ್ತಿಗೆಗಳಿದ್ದು, ಇವು ಅವೈಜ್ಞಾನಿಕವಾಗಿರುವುದರಿಂದ ಕೂಡಲೇ ಕಲ್ಲು ಗಣಿಗಾರಿಕೆ ನಿಲ್ಲಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.