ಕೋತಿಗಳ ಉಪಟಳಕ್ಕೆ ಬೇಸತ್ತ ಹಾನಗಲ್ಲ ಜನ

KannadaprabhaNewsNetwork |  
Published : Jul 26, 2025, 12:30 AM IST
ಫೋಟೋ : 25ಎಚ್‌ಎನ್‌ಎಲ್6 | Kannada Prabha

ಸಾರಾಂಶ

ಬಹುತೇಕ ಕೆಂಪು ಮೋತಿ ಮಂಗಗಳದ್ದೇ ಕಾರುಬಾರು ನಡೆದಿದೆ. ಉಳಿದ ಜಾತಿಯ ಮಂಗಗಳ ಸಂಖ್ಯೆ ಕಡಿಮೆ ಇದೆ. ಹಲವೆಡೆ ವಾಹನ ಚಾಲಕರಿಗೂ ಆತಂಕ ಮೂಡಿಸಿವೆ. ಮೋಟಾರು ವಾಹನಗಳ ಮೇಲೆ ಕುಳಿತು ದಾರಿಹೋಕರಿಗೆ ಬೆದರಿಸುತ್ತಿವೆ.

ಹಾನಗಲ್ಲ: ಪಟ್ಟಣದಲ್ಲಿ ಮಂಗಗಳ ವಿರಾಟ ಸ್ವರೂಪದ ಕಿರುಕುಳಕ್ಕೆ ಜನ ಬೇಸತ್ತಿದ್ದು, ಮನೆಗೆ ನುಗ್ಗಿ ಆಹಾರ ಪದಾರ್ಥ ಹೊತ್ತೊಯ್ಯುವ, ಮಕ್ಕಳಿಗೆ ಪೀಡಿಸುವ ಘಟನೆಗಳು ನಡೆಯುತ್ತಿವೆ.ಪಟ್ಟಣದಲ್ಲಿ ಬೆಳಗಾದರೆ ಮನೆ ಮೇಲೆ ಕುಳಿತು ಆಹಾರಕ್ಕಾಗಿ ಹೊಂಚು ಹಾಕುವ ಮಂಗಗಳು ಮನೆಗೆ ನುಗ್ಗಿ ಆಹಾರದ ಪೊಟ್ಟಣಗಳನ್ನು ಕಿತ್ತೊಯ್ಯುತ್ತಿವೆ. ಮಕ್ಕಳ ಕೈಯಲ್ಲಿನ ಆಹಾರದ ಪೊಟ್ಟಣ, ವಸ್ತುಗಳನ್ನು ಕಿತ್ತೊಯ್ಯುತ್ತಿರುವುದು ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಗುಂಪು ಗುಂಪಾಗಿರುವ ಮಂಗಗಳು ಮಕ್ಕಳು ಹೊಡೆಯಲು ಹೊದರೆ ಬೆನ್ನಟ್ಟುತ್ತಿವೆ. ಗುರ್ ಎಂದು ಬೆದರಿಸುತ್ತಿವೆ. ಕೆಂಪು ಮೋತಿ ಮಂಗಗಳು: ಬಹುತೇಕ ಕೆಂಪು ಮೋತಿ ಮಂಗಗಳದ್ದೇ ಕಾರುಬಾರು ನಡೆದಿದೆ. ಉಳಿದ ಜಾತಿಯ ಮಂಗಗಳ ಸಂಖ್ಯೆ ಕಡಿಮೆ ಇದೆ. ಹಲವೆಡೆ ವಾಹನ ಚಾಲಕರಿಗೂ ಆತಂಕ ಮೂಡಿಸಿವೆ. ಮೋಟಾರು ವಾಹನಗಳ ಮೇಲೆ ಕುಳಿತು ದಾರಿಹೋಕರಿಗೆ ಬೆದರಿಸುತ್ತಿವೆ. ಮನೆಗಳ ಮೇಲಿರುವ ಸಿಂಟೆಕ್ಸ್‌ಗಳ ಕ್ಯಾಪ್ ತೆಗೆದು ನೀರು ಕುಡಿಯಲು ಯತ್ನಿಸುವುದು ಒಂದಾದರೆ, ಅಲ್ಲಿ ಗಲೀಜು ಮಾಡಿ ಮನೆ ಮಾಲೀಕರ ಕಿರಿಕಿರಿಗೆ ಕಾರಣವಾಗುತ್ತಿವೆ.ತಾಲೂಕಿನ ಕೆಲವು ಹಳ್ಳಿಗಳಲ್ಲಿ ಕೂಡ ಮಂಗಗಳ ಇಂತಹ ಕಿರಿಕಿರಿ ಕೇಳಿ ಬಂದಿತ್ತು. ಕೆಲವೊಮ್ಮೆ ಒಂದೇ ಮಂಗ ಇಡೀ ಊರಿನ ಜನರಿಗೆ ಭಯ ಹುಟ್ಟಿಸಿದ ಸಂಗತಿಗಳು ಇವೆ. ಅಂತಹ ಮಂಗಗಳನ್ನು ಹಿಡಿದು ಕಾಡಿಗೆ ಸಾಗಿಸಲಾಗಿದೆ.ಹೊಲ ಗದ್ದೆ, ಕಾಡು ಮೇಡುಗಳಲ್ಲಿ ಇನ್ನೂ ಹಣ್ಣು, ಪೈರು ಇಲ್ಲದ ಕಾರಣದಿಂದ ಮಂಗಗಳಿಗೆ ಆಹಾರವಿಲ್ಲ. ಆ ಕಾರಣಕ್ಕಾಗಿ ಊರಿನಲ್ಲಿ ಬೀಡು ಬಿಟ್ಟು ಆಹಾರಕ್ಕಾಗಿ ಪರದಾಡುತ್ತಿವೆ ಎನ್ನಲಾಗಿದೆ.

ಕಾಟ ಹೆಚ್ಚಾಗಿದೆ: ಮಂಗಗಳ ಕಾಟ ಹೆಚ್ಚಾಗಿದೆ. ಮಕ್ಕಳಿಗೆ ಮಂಗಗಳು ತೊಂದರೆ ಕೊಡುತ್ತಿವೆ. ಗುಂಪು ಗುಂಪಾಗಿ ಬಂದು ಮನೆಯಲ್ಲಿಯೇ ಪ್ರವೇಶಿಸಿ ಆಹಾರ ಕಸಿದೊಯ್ಯುತ್ತಿವೆ. ವಾಹನಗಳ ಮೇಲೆ ಬಂದು ಚಾಲಕರನ್ನೂ ಕಾಡುತ್ತಿವೆ. ಮನೆಯ ಬಾಗಿಲು ತೆರೆಯುವುದೇ ಕಷ್ಟವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಎಂ.ಬಿ. ಕಲಾಲ ತಿಳಿಸಿದರು.

ಮಂಗ ಮುಕ್ತ ಮಾಡಲು ಕ್ರಮ: ಮಂಗಗಳ ಹಾವಳಿಯ ಬಗೆಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಮಂಗಗಳನ್ನು ಹಿಡಿದು ಕಾಡಿಗೆ ಸಾಗಿಸಲು ಪ್ರಯತ್ನ ನಡೆದಿದೆ. ಮಂಗಗಳನ್ನು ಹಿಡಿಯುವವರನ್ನು ಕರೆಸಿ ಕೂಡಲೇ ಹಾನಗಲ್ಲ ಮಂಗ ಮುಕ್ತ ಮಾಡಲು ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ತಿಳಿಸಿದರು.

PREV

Recommended Stories

ನವೆಂಬರ್‌-ಡಿಸೆಂಬರ್‌ನಲ್ಲಿ 5 ಪಾಲಿಕೆ ಚುನಾವಣೆ: ಡಿಸಿಎಂ
ಹಿಪ್ಪರಗಿ ಜಲಾಶಯಕ್ಕೆ ೧,೧೯,೨೦೦ ಕ್ಯುಸೆಕ್‌ ಒಳಹರಿವು