ಕನ್ನಡಪ್ರಭ ವಾರ್ತೆ ಘಟಪ್ರಭಾ
ಪಟ್ಟಣದ ಮಹಾಂತೇಶ ನಗರ, ಡಾ.ನಾಯಿಕವಾಡಿ ಆಸ್ಪತ್ರೆ ಹಿಂಭಾಗ, ಗೋಂಧಳಿ ಗಲ್ಲಿ, ಪೇಟಕರ ಗಲ್ಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ತೋಟ ಪಟ್ಟಿಗಳ ಹಾದಿಗಳಲ್ಲಿ ಬೀದಿ ನಾಯಿಗಳ ಹಾವಳಿ ತೀರಾ ಹೆಚ್ಚಾಗಿದೆ. ಮಹಿಳೆಯರು, ಮಕ್ಕಳು ಒಂಟಿಯಾಗಿ ಅಡ್ಡಾಡುವುದು ಕಠಿಣವಾಗಿದೆ. ಏಕಾಏಕಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಮಹಿಳೆಯರು, ಮಕ್ಕಳು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ.
ಸದ್ಯ ಪಟ್ಟಣದಲ್ಲಿ ರೋಗ ಪೀಡಿತ ಹುಚ್ಚು ನಾಯಿಯೊಂದು ಓಡಾಡುತ್ತಿದ್ದು, ಜನರಲ್ಲಿ ಮತ್ತಷ್ಟು ಭಯದ ವಾತಾವರಣ ಹುಟ್ಟುಹಾಕಿದೆ. ಬುಧವಾರ ಚಿತ್ರದುರ್ಗದಲ್ಲಿ ಟ್ಯೂಷನ್‌ಗೆ ತೆರಳಿದ್ದ 11 ವರ್ಷದ ಬಾಲಕಿ ಬೀದಿನಾಯಿಗಳ ದಾಳಿಗೆ ಬಲಿಯಾದ ಘಟನೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿಯೂ ಪೋಷಕರು ಮಕ್ಕಳ ಸುರಕ್ಷತೆ ಬಗ್ಗೆ ಆತಂಕಿತರಾಗಿದ್ದಾರೆ. ಆ ಹುಚ್ಚು ನಾಯಿ ಬೇರೆ ಬೀದಿ ನಾಯಿಗಳ ಜೊತೆ ಸೇರಿಕೊಂಡಿದ್ದು, ಪಟ್ಟಣದಲ್ಲಿ ಹುಚ್ಚು ನಾಯಿಗಳ ಸಂಖ್ಯೆ ಹೆಚ್ಚಾಗುವ ಜೊತೆಗೆ ರೋಗ ಹರಡುವ ಭೀತಿ ಹೆಚ್ಚಾಗಿದೆ.ಈ ಬಗ್ಗೆ ಅನೇಕ ಬಾರಿ ಪುರಸಭೆ ಸ್ವಚ್ಛತಾ ಸಿಬ್ಬಂದಿ ಹಾಗೂ ಆರೋಗ್ಯ ಶಾಖೆ ಸಿಬ್ಬಂದಿಗೆ ಹೇಳಿದರೂ ಸಹ ಪ್ರಯೋಜನವಾಗಿಲ್ಲ. ಜನರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕು ಹಾಗೂ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಮಹಾಜನ ಆಗ್ರಹಿಸಿದ್ದಾರೆ.