ಮುಂಡಗೋಡ: ಬುಧವಾರ ಪಟ್ಟಣದಲ್ಲಿ ರಂಗು ಗುಂಗಿನ ರಂಗಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಕ್ಕಳು ಮಹಿಳೆಯರು, ವೃದ್ಧರು ಎಂಬ ಭೇದ-ಭಾವ ಇಲ್ಲದೆ ಪರಸ್ಪರ ಬಣ್ಣ ಎರಚಿ ಓಕುಳಿ ಆಟವಾಡಿದರು. ಪರಿಚಯಸ್ಥರ ಮನೆಗೆ ತೆರಳಿ ಪರಸ್ಪರ ಬಣ್ಣ ಎರಚಿದ್ದು, ಬಣ್ಣದ ಆಟಕ್ಕೆ ಮತ್ತಷ್ಟು ಮೆರುಗು ನೀಡಿದಂತಿತ್ತು. ಪಟ್ಟಣದ ಯಾವುದೇ ಮೂಲೆಗೆ ಹೋದರೂ ಹಲಿಗೆ ಸದ್ದು ಕೇಳಿ ಬರುತ್ತಿತ್ತು. ಈ ಬಾರಿ ಹಲಿಗೆ ಬಾರಿಸುವವರ ಸಂಖ್ಯೆ ಕೂಡ ಹೆಚ್ಚಿತ್ತು.
ಹೋಳಿ ಪ್ರಯುಕ್ತ ನಗರದ ಅಂಗಡಿ ಮುಂಗ್ಗಟ್ಟುಗಳು ಬಂದ್ ಆಗಿದ್ದವು. ಇದರಿಂದ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು. ಯಾವ ಕಡೆ ನೋಡಿದರೂ ಎಲ್ಲೆಂದರಲ್ಲಿ ಬಣ್ಣದ ಓಕುಳಿ ಆಡುವವರದ್ದೇ ಕಾರುಬಾರು ಕಂಡು ಬರುತ್ತಿತ್ತು.ಜೋಷ್ ಹೆಚ್ಚಿಸಿದ ರೇನ್ ಡ್ಯಾನ್ಸ್: ಪಟ್ಟಣದ ಹೊಸ ಓಣಿ, ನೆಹರು ನಗರ, ಗಾಂಧಿನಗರ, ಬಸವನಬೀದಿ, ಗಣೇಶನಗರ, ಮೇದಾರ ಓಣಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ರೇನ್ ಡ್ಯಾನ್ಸ್ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಡಿಜೆ ಸದ್ದು ಜೋರಾಗಿತ್ತು. ಇದು ಕುಣಿಯುವವರ ಜೋಶ್ ಹೆಚ್ಚಿಸಿತ್ತು.
ಮಡಿಕೆ ಒಡೆಯುವ ಕಾರ್ಯಕ್ರಮ: ಪಟ್ಟಣದ ಕೆಲವು ಬಡಾವಣೆಗಳಲ್ಲಿ ಸುಮಾರ ೩೦ ಅಡಿ ಎತ್ತರದಲ್ಲಿ ಮಣ್ಣಿನ ಮಡಕೆ ಕಟ್ಟಿ ತಂಡ ರಚಿಸಿಕೊಂಡು ಒಬ್ಬರ ಮೇಲೊಬ್ಬರು ಹತ್ತಿ ಮಡಕೆ ಒಡೆಯುವ ಶಾಸ್ತ್ರ ನಡೆಸಲಾಯಿತು. ಬಳಿಕ ಸಂಪ್ರದಾಯದಂತೆ ವಿಧಿ-ವಿಧಾನಗಳನ್ನು ಪೂರೈಸಿ ರತಿ-ಕಾಮನ ಮೂರ್ತಿಗಳನ್ನು ದಹಿಸುವ ಮೂಲಕ ರಂಗ ಪಂಚಮಿ ಸಂಪನ್ನಗೊಳಿಸಲಾಯಿತು.ಮೆರವಣಿಗೆ: ಮಧ್ಯಾಹ್ನದ ಆನಂತರ ಪಟ್ಟಣದ ಪ್ರತಿಸ್ಠಾಪಿಸಲಾದ ರತಿ-ಕಾಮನ ಮೂರ್ತಿಯ ಮೆರವಣಿಗೆಯನ್ನು ಆಯಾ ಬಡಾವಣೆಗಳಲ್ಲಿ ನಡೆಸಲಾಯಿತು.
ಬಿಗಿ ಪೊಲೀಸ ಬಂದೋಬಸ್ತ್: ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು. ಕಾಯ್ದಿಟ್ಟ ತುರ್ತು ಪೊಲೀಸ್ ತುಕಡಿಗಳು ಹಾಗೂ ನೂರಾರು ಪೊಲೀಸರು ಕಾರ್ಯನಿರ್ವಹಿಸಿದರು.