ಸಂಭ್ರಮದ ಯುಗಾದಿಗೆ ಮಹಾನಗರದ ಜನತೆ ಸಜ್ಜು

KannadaprabhaNewsNetwork | Published : Apr 9, 2024 12:56 AM

ಸಾರಾಂಶ

ಯುಗಾದಿ ಎಂದರೆ ಎಲ್ಲರಿಗೂ ಹೊಸತನ. ಈ ಹಬ್ಬದಂದು ವಾಹನ ಖರೀದಿ, ಹೊಸ ನಿವೇಶನ, ಮನೆ ಖರೀದಿ ಹೆಚ್ಚಾಗಿರುತ್ತವೆ. ಹಾಗಾಗಿ ಸೋಮವಾರದಂದು ಮಹಾನಗರದಲ್ಲಿರುವ ವಾಹನ ಶೋರೂಂಗಳು ಗ್ರಾಹಕರಿಂದ ತುಂಬಿ ಹೋಗಿದ್ದವು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹಿಂದುಗಳ ಪಾಲಿಗೆ ಹೊಸ ವರ್ಷದ ದಿನವಾದ ಯುಗಾದಿ ಹಬ್ಬದಂಗವಾಗಿ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂತು.

ಹಬ್ಬಕ್ಕೆ ಬೇಕಾದ ಹಣ್ಣು, ಹೂವು ಸೇರಿದಂತೆ ಅಗತ್ಯ ವಸ್ತುಗಳನ್ನು ಜನ ಖರೀದಿಸಿದರು. ಅಮಾವಾಸ್ಯೆ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಮಾರುಕಟ್ಟೆಗಳೆಲ್ಲ ಜನರಿಂದ ತುಂಬಿ ಹೋಗಿತ್ತು. ಇಲ್ಲಿನ ದುರ್ಗದಬೈಲ್‌ ಮಾರುಕಟ್ಟೆ, ಜನತಾ ಬಜಾರ್‌, ಸಿಬಿಟಿ, ಹಳೇ ಹುಬ್ಬಳ್ಳಿ, ಕೇಶ್ವಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಜನತೆ ಹಬ್ಬಕ್ಕೆ ಬೇಕಾದ ಹಣ್ಣು, ಹೂವು ಸೇರಿದಂತೆ ಪೂಜಾ ಸಾಮಗ್ರಿ ಖರೀದಿಸಿದರು.

ಯುಗಾದಿ ಎಂದರೆ ಎಲ್ಲರಿಗೂ ಹೊಸತನ. ಈ ಹಬ್ಬದಂದು ವಾಹನ ಖರೀದಿ, ಹೊಸ ನಿವೇಶನ, ಮನೆ ಖರೀದಿ ಹೆಚ್ಚಾಗಿರುತ್ತವೆ. ಹಾಗಾಗಿ ಸೋಮವಾರದಂದು ಮಹಾನಗರದಲ್ಲಿರುವ ವಾಹನ ಶೋರೂಂಗಳು ಗ್ರಾಹಕರಿಂದ ತುಂಬಿ ಹೋಗಿದ್ದವು. ಯುಗಾದಿ ಪೂಜೆಗೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಬೇಕಾದ ಮಲ್ಲಿಗೆ ಹೂ, ಸೇವಂತಿಗೆ ಹಾಗೂ ಗುಲಾಬಿ ಹೂವು ಸೇರಿದಂತೆ ತಳಿರು-ತೋರಣಗಳ ಖರೀದಿ ಭರ್ಜರಿಯಾಗಿ ನಡೆಯಿತು. ಪೂಜೆಗೆ ಬೇಕಾದ ಹಣ್ಣು, ಹೂವು ಹಾಗೂ ಮಂಟಪದ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಗ್ರಾಹಕರು ಖರೀದಿಸಿದರು. ಸೋಮವಾರ ಸಂಜೆಯೇ ಹಲವು ಅಂಗಡಿ, ಶೋರೂಂಗಳಲ್ಲಿ ಮಂಗಳವಾರದ ಯುಗಾದಿ ಹಬ್ಬಕ್ಕೆ ಬೇಕಾದ ಅಗತ್ಯ ಸಿದ್ಧತೆ ಕೈಗೊಂಡಿರುವುದು ಕಂಡುಬಂದಿತು.

ಬೆಲೆ ಏರಿಕೆಯ ಬಿಸಿಹಬ್ಬದ ಖರೀದಿಗೆ ಆಗಮಿಸಿದ್ದ ಮಹಾನಗರದ ಜನತೆಗೆ ಬೆಲೆ ಏರಿಕೆಯ ಕೊಂಚ ಬಿಸಿ ತಾಗಿತು. ಸಾಮಾನ್ಯ ದಿನಗಳಲ್ಲಿ ಒಂದು ಮಾರು ಸೇವಂತಿಗೆ ಹೂವಿಗೆ ₹20-25 ಇರುತ್ತದೆ. ಆದರೆ, ಹಬ್ಬದ ಅಂಗವಾಗಿ ಸೇವಂತಿಗೆ ಹೂವಿನ ಬೆಲೆ ₹70ರಿಂದ ₹80, ಮಲ್ಲಿಗೆ ಹೂವು ₹90-100 ಹಾಗೂ ಗುಲಾಬಿ ಹೂ ಒಂದಕ್ಕೆ ₹10, 2ಕ್ಕೆ ₹15 ನಿಗದಿಗೊಳಿಸಿರುವುದು ಕಂಡುಬಂದಿತು. ಹಣ್ಣು-ತರಕಾರಿ ಬೆಲೆಯಲ್ಲಿಯೂ ಕೊಂಚ ಏರಿಕೆಯಾಗಿರುವುದು ಕಂಡುಬಂದಿತು. ಪೂಜೆಗೆ ಬೇಕಾದ 5 ಬಗೆಯ ಹಣ್ಣುಗಳ ಬುಟ್ಟಿಗೆ ₹300ರಿಂದ ₹500ರ ವರೆಗೆ ಮಾರಾಟವಾದವು.

ಆಕರ್ಷಕ ಕೊಡುಗೆ

ಮಹಿಳೆಯರಿಗೆ ಪ್ರಿಯವಾದ ವಸ್ತು ಬಂಗಾರದ ಆಭರಣ. ಹಬ್ಬದ ಹಿನ್ನೆಲೆಯಲ್ಲಿ ಹಲವು ಆಭರಣ ಮಳಿಗೆಗಳಲ್ಲಿ ಆಕರ್ಷಕ ಕೊಡುಗೆ. ಗಿಫ್ಟ್‌ ಹ್ಯಾಂಪರ್‌ ಸೇರಿದಂತೆ ಹಲವು ರಿಯಾಯ್ತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಆಭರಣದ ಅಂಗಡಿಗಳೆಲ್ಲ ಜನರಿಂದ ತುಂಬಿಹೋಗಿದ್ದವು. ಇದರೊಂದಿಗೆ ದ್ವಿಚಕ್ರ, ಆಟೋ, ಕಾರ್‌ ಶೋರೂಂಗಳಲ್ಲೂ ಆಕರ್ಷಕ ಕೊಡುಗೆ, ರಿಯಾಯಿತಿ ಘೋಷಿಸಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಶೋರೂಂಗೆ ಬಂದು ತಮ್ಮಿಷ್ಟದ ವಾಹನಗಳನ್ನು ಬುಕ್‌ ಮಾಡುತ್ತಿರುವುದು ಕಂಡುಬಂದಿತು.

ಗ್ರಹಣದಿಂದ ಬೆಳಗ್ಗೆ ಮಾರಾಟ ಇಳಿಕೆ

ವರ್ಷದ ಮೊದಲ ಸೂರ್ಯಗ್ರಹಣವು ಸೋಮವಾರವೇ ಬಂದ ಹಿನ್ನೆಲೆಯಲ್ಲಿ ಬೆಳಗ್ಗೆ ಗ್ರಾಹಕರು ಅಂಗಡಿಗಳಿಗೆ ತೆರಳಿ ವಸ್ತುಗಳನ್ನು ಖರೀದಿಸಲು ಮುಂದಾಗಲಿಲ್ಲ. ಮಧ್ಯಾಹ್ನ 2ಗಂಟೆಯ ನಂತರ ಸೂರ್ಯಗ್ರಹಣ ಪೂರ್ಣಗೊಂಡ ನಂತರ ಜನರು ಸ್ನಾನಮಾಡಿ ಮನೆಯಲ್ಲಿರುವ ಹಾಗೂ ಮಂದಿರಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಸಂಜೆಯ ವೇಳೆ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಿರುವುದು ಕಂಡುಬಂದಿತು.ಸಂಜೆ ಉತ್ತಮ ವ್ಯಾಪಾರ

ಸೂರ್ಯಗ್ರಹಣ ಹಿನ್ನೆಲೆ ಬೆಳಗ್ಗೆ ವ್ಯಾಪಾರವೇ ಇರಲಿಲ್ಲ. ಮಧ್ಯಾಹ್ನ 3 ಗಂಟೆಯ ನಂತರ ಹೆಚ್ಚಿನ ಜನ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಸಂಜೆಯ ವೇಳೆಗೆ ಉತ್ತಮ ವ್ಯಾಪಾರವಾಗಿದೆ. ರಾತ್ರಿಯೂ ಹೆಚ್ಚಿನ ವ್ಯಾಪಾರವಾಗಲಿದೆ.

- ಸಂಜೀವಕುಮಾರ ಹೂಗಾರ, ಹೂ ಮಾರಾಟಗಾರ

ಬಜೆಟ್‌ಗೆ ತಕ್ಕಂತೆ ಖರೀದಿ

ಬೆಲೆ ಏರಿಕೆ ನೋಡಿದರೆ ಪೂಜಾ ಸಾಮಗ್ರಿಗಳನ್ನು ಕೊಂಡುಕೊಳ್ಳುವುದೇ ಬೇಡ ಅನ್ನಿಸುತ್ತಿದೆ. ಭರ್ಜರಿಯಾಗಿ ಹಬ್ಬ ಆಚರಿಸದೇ ಇದ್ದರೂ ಬಜೆಟ್‌ ತಕ್ಕಂತೆ ಪೂಜಾ ಸಾಮಗ್ರಿ ಖರೀದಿಸಿ ಪೂಜೆಗೆ ಯುಗಾದಿ ಹಬ್ಬದ ಸಿದ್ಧತೆ ಮಾಡಿಕೊಂಡಿದ್ದೇವೆ.

- ನಿರ್ಮಲಾ ಮಾನಪ್ಪನವರ, ಹುಬ್ಬಳ್ಳಿ ನಿವಾಸಿ

Share this article