ಹುಬ್ಬಳ್ಳಿ: ಭಾನುವಾರ ಸಂಜೆ ಅರ್ಧಗಂಟೆಗೂ ಹೆಚ್ಚುಕಾಲ ರಭಸದ ಮಳೆ ಸುರಿದ ಹಿನ್ನೆಲೆಯಲ್ಲಿ ಸವಾರರು, ಜನರು ತತ್ತರಿಸುವಂತಾಯಿತು. ದಿಢೀರ್ ಆಗಮಿಸಿದ ಮಳೆಯಿಂದಾಗಿ ಕೂಲಿಕಾರರು, ಗ್ರಾಮೀಣ ಭಾಗದ ಜನರು, ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಯಿತು.
ಮನೆಗೆ ನುಗ್ಗಿದ ನೀರು
ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಭಾನುವಾರ ಸುರಿದ ಭಾರಿ ಮಳೆಯಿಂದ ಹಲವು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ದವಸ, ಧಾನ್ಯ ಹಾಳಾದ ಘಟನೆ ನಡೆದಿದೆ. ಗ್ರಾಮದ ಎಸ್‌ಸಿ, ಎಸ್‌ಟಿ ಕಾಲನಿಯಲ್ಲಿರುವ ಹಲವು ಮನೆಗಳಿಗೆ ಮಳೆನೀರು ನುಗ್ಗಿ ಜನತೆ ತೊಂದರೆ ಅನುಭವಿಸುವಂತಾಯಿತು. ರಾತ್ರಿಯಿಡೀ ಮನೆಯೊಳಗೆ ನುಗ್ಗಿದ್ದ ನೀರು ಹೊರಹಾಕುವಲ್ಲಿ ನಿವಾಸಿಗಳು ಹರಸಾಹಸ ಪಟ್ಟರು.ಧಾರವಾಡದಲ್ಲಿ ಉತ್ತಮ ಮಳೆಧಾರವಾಡ: ಎರಡ್ಮೂರು ದಿನಗಳ ಕಾಲ ಬಿಸಿಲಿನ ವಾತಾವರಣ ಹೊಂದಿದ್ದ ಧಾರವಾಡದಲ್ಲಿ ಭಾನುವಾರ ಏಕಾಏಕಿ ತೀವ್ರವಾಗಿ ಮೋಡ ಕವಿದು ಅಬ್ಬರದ ಮಳೆ ಸುರಿಯಿತು. ಸಂಜೆ 6ರ ನಂತರ ಶುರುವಾದ ಮಳೆಯು ಸುಮಾರು ಒಂದು ಗಂಟೆ ಕಾಲ ಗುಡುಗು-ಮಿಂಚಿನೊಂದಿಗೆ ಜೋರಾಗಿಯೇ ಸುರಿಯಿತು. ತಗ್ಗು ಪ್ರದೇಶಗಳ ಕೆಲವು ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಬೇಕಾಯಿತು. ಗಟಾರು ತುಂಬಿ ರಸ್ತೆಗಳಲ್ಲಿ ನೀರು ಹರಿದ ಕಾರಣ ವಾಹನ ಸವಾರರಿಗೆ ಸಂಚಾರಕ್ಕೆ ಅಡೆತಡೆಯಾಯಿತು. ಪ್ರತಿ ಸಲದಂತೆ ಕೋರ್ಟ್ ವೃತ್ತ, ಎನ್‌ಟಿಟಿಎಫ್, ಟೋಲನಾಕಾ ಬಳಿ ನೀರು ನಿಂತು ವಾಹನ ಸವಾರರರು ಸಮಸ್ಯೆಗೆ ಒಳಗಾದರು.
ಬಿಸಿಲಿದ್ದ ಕಾರಣದಿಂದ ತಾವು ಬೆಳೆದಿದ್ದ ಹೆಸರು, ಉದ್ದು, ಸೋಯಾ, ಶೇಂಗಾ ಅಂತಹ ಮುಂಗಾರು ಬೆಳೆಗಳನ್ನು ಒಣಗಲು ಹಾಕಿದ್ದು, ಏಕಾಏಕಿ ಮಳೆಯಿಂದ ಅವುಗಳನ್ನು ರಕ್ಷಿಸಲು ರೈತರು ಪರದಾಡಬೇಕಾಯಿತು.