- ಯಡಿಯೂರಪ್ಪ ಪುತ್ರನೆಂದು ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿಲ್ಲ: ಬಿಜೆಪಿ ಅತೃಪ್ತ ಗುಂಪಿಗೆ ತಿರುಗೇಟು
ಯಾರೋ ನಾಲ್ಕಾರು ಜನ ದಾರಿ, ಬೀದಿಯಲ್ಲಿ ಹೇಳಿದಾಕ್ಷಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಿಜೆಪಿ ಅತೃಪ್ತ ಗುಂಪಿಗೆ ತಿರುಗೇಟು ನೀಡಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ವಿಜಯೇಂದ್ರ ರಾಜೀನಾಮೆ ನೀಡುವುದಿಲ್ಲ. ಬಿ.ಎಸ್.ಯಡಿಯೂರಪ್ಪ ಪುತ್ರ ಅಂತಾ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿಲ್ಲ ಎಂದರು.ವಿಜಯೇಂದ್ರ ಪಕ್ಷ ಸಂಘಟನೆ, ಹೋರಾಟ, ಉಪ ಚುನಾವಣೆಯಲ್ಲಿ ತೋರಿಸಿದ ಸಾಧನೆ ಗುರುತಿಸಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ, ಅದು ಬಿಜೆಪಿ ಕೇಂದ್ರ ನಾಯಕರಿಗೆ ಅವಮಾನಿಸಿದಂತೆ ಎಂದು ಅವರು ಹೇಳಿದರು.
ವಿಜಯೇಂದ್ರ ಪಾದಯಾತ್ರೆ ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿಯೇ ಅಲುಗಾಡುತ್ತಿದ್ದು, ರಾಜೀನಾಮೆಗೆ ಎಲ್ಲಾ ಕಡೆಯಿಂದಲೇ ಒತ್ತಾಯ ಕೇಳಿಬರುತ್ತಿದೆ. ನಾವೆಲ್ಲರೂ ವಿಜಯೇಂದ್ರ ಪರವಾಗಿ ನಿಲ್ಲುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
- - -
* ಕಾಂಗ್ರೆಸ್ಸಲ್ಲಿ ಸಿಎಂ ಆಗಲು ಸೂಟ್ ಹೊಲೆಸಿ, ಕಾಯ್ತಿದ್ದಾರೆ!ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದ್ದು, ಮುಖ್ಯಮಂತ್ರಿಯಾಗಲು ಸೂಟ್ ಹೊಲೆಸಿಕೊಂಡು ಅನೇಕರು ಕಾಯುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಿಜೆಪಿ ಅತೃಪ್ತರಿಗೆ ಮನವಿ ಮಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಸಚಿವ ಎಂ.ಬಿ.ಪಾಟೀಲ ಜೊತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವುದು ಯಾರು? ನನಗೆ ಅಲ್ಲಿನ ಮುಖಂಡರೇ ಕರೆ ಮಾಡಿ, ಮಾಹಿತಿ ನೀಡಿದ್ದಾರೆ. ಆಡಿಯೋ ರೆಕಾರ್ಡ್ ಸಹ ನನ್ನ ಬಳಿ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಟವೆಲ್, ಟಿಶ್ಯೂ ಪೇಪರ್ ಹಾಕಿಕೊಂಡು ಕಾಯುತ್ತಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. 3-4 ತಿಂಗಳಿನಿಂದ ಸಿಎಂ, ಸಚಿವರು ಜನರ ಕೈಗೆ ಸಿಗುತ್ತಿಲ್ಲ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ದೂರಿದರು.
- - -
ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.