ವಿಶ್ವಕರ್ಮ ಸಮಾಜದವರು ಶ್ರಮ ಜೀವಿಗಳು

KannadaprabhaNewsNetwork |  
Published : Sep 30, 2024, 01:15 AM IST
ಲೋಕಾಪುರ | Kannada Prabha

ಸಾರಾಂಶ

ವಿಶ್ವಕರ್ಮ ಸಮಾಜದವರು ಶ್ರಮ ಜೀವಿಗಳು. ವಿಶ್ವಕರ್ಮ ಬಾಂಧವರು ಸಮಾಜ ಸಂಘಟನೆಯಲ್ಲಿ ಕೈ ಜೋಡಿಸಿ ಎಲ್ಲ ರಂಗಗಳಲ್ಲಿ ಮುಂದುವರೆಯಬೇಕು ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ವಿಶ್ವಕರ್ಮ ಸಮಾಜದವರು ಶ್ರಮ ಜೀವಿಗಳು. ವಿಶ್ವಕರ್ಮ ಬಾಂಧವರು ಸಮಾಜ ಸಂಘಟನೆಯಲ್ಲಿ ಕೈ ಜೋಡಿಸಿ ಎಲ್ಲ ರಂಗಗಳಲ್ಲಿ ಮುಂದುವರೆಯಬೇಕು ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಹೇಳಿದರು.

ಭಾನುವಾರ ಪಟ್ಟಣದ ಲೋಕೇಶ್ವರ ದೇವಸ್ಥಾನ ಆವರಣದಲ್ಲಿ ಸೃಷ್ಟಿಕರ್ತ ವಿಶ್ವಕರ್ಮ ಯುವಕ ಸಂಘ ಲಕ್ಷಾನಟ್ಟಿ, ಲೋಕಾಪುರ ಹಾಗೂ ಅರಳಿಕಟ್ಟಿ ಸಹಯೋಗದಲ್ಲಿ ಶ್ರೀ ವಿಶ್ವಕರ್ಮ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಲ್ಪಗಳ ಕೆತ್ತನೆ, ದೇವರ ಮೂರ್ತಿಗಳ ತಯಾರಿಕೆ, ಚಿನ್ನಾಭರಣ ತಯಾರಿಕೆಯಲ್ಲಿ ಅತ್ಯುತ್ತಮ ಕೌಶಲ್ಯವನ್ನು ಹೊಂದಿರುವ ವಿಶ್ವಕರ್ಮರಿಗೆ ಯಾರೂ ಸರಿಸಾಟಿಯಾಗಲಾರರು ಎಂದರು.

ಕರ್ನಾಟಕ ಸಹಕಾರ ಕುರಿ ಮಹಾಮಂಡಳ ಉಪಾಧ್ಯಕ್ಷ ಕಾಶಿನಾಥ ಹುಡೇದ ಮಾತನಾಡಿ, ಸಮಾಜದ ಪ್ರತಿಯೊಂದು ಕೆಲಸಕ್ಕೂ ವಿಶ್ವಕರ್ಮ ಸಮಾಜದವರು ಬೇಕು. ಅಸ್ತ್ರಗಳು, ಸಾಧನ-ಸಲಕರಣೆಗಳು, ರಥಗಳು, ಮಹಲುಗಳು, ಶಿಲ್ಪಗಳು ಸೇರಿದಂತೆ ಈ ಜಗತ್ತಿಗೆ ಬೇಕಾದ ಎಲ್ಲವನ್ನೂ ಸೃಷ್ಟಿಸಿದ್ದು ವಿಶ್ವಕರ್ಮರು. ಜಗತ್ತಿಗಷ್ಟೇ ಅಲ್ಲ ಶಿವ, ವಿಷ್ಣು, ಇಂದ್ರ ಮತ್ತಿತರ ದೇವರುಗಳಿಗೆ ಅಸ್ತ್ರ ಹಾಗೂ ರಥಗಳನ್ನು ಮಾಡಿಕೊಟ್ಟು, ದುಷ್ಟರ ವಧೆಗೆ ಕಾರಣರಾದ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ವಿಶ್ವಕರ್ಮ ಸಮಾಜ ಬಾಂಧವರು ಸಂಘಟಿತರಾಗಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಪಿ.ಬಿ. ಬಡಿಗೇರ ಮಾತನಾಡಿ, ಇತಿಹಾಸ ಅರಿತುಕೊಂಡು ಸಮಾಜ ಸಂಘಟನೆಯಲ್ಲಿ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಕೈ ಜೋಡಿಸಿದರೇ ಮಾತ್ರ ಸಮಾಜ ಏಳಿಗೆ ಆಗಲು ಸಾಧ್ಯ. ವಿಶ್ವಕರ್ಮ ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದರ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದಲ್ಲಿ ಪ್ರತಿಭಾವಂತರನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರನ್ನು ಹಾಗೂ ಸೃಷ್ಟಿಕರ್ತ ವಿಶ್ವಕರ್ಮ ಯುವಕ ಸಂಘ, ಭುವನೇಶ್ವರಿ ಮಹಿಳಾ ಸಂಘ, ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷರಿಗೆ ವಿಶ್ವಕರ್ಮ ಸಮಾಜ ಬಾಂಧವರಿಂದ ಸನ್ಮಾನಿಸಲಾಯಿತು.

ಈ ವೇಳೆ ಶಿರೂರ ಶ್ರೀಮದ್ ಆನೆಗುಂದಿ ಸಿಂಹಾಸನ ಬ್ರಹ್ಮಾಂಡ ಭೇರಿ ಮಠದ ಶ್ರೀ ರಾಜೇಂದ್ರ ಮಹಾಸ್ವಾಮಿಜಿ ಹಾಗೂ ಲಕ್ಷಾನಟ್ಟಿಯ ಜ್ಞಾನಾಶ್ವರಮ ಶಿವಾನಂದ ಮಠದ ಶ್ರೀ ಶಿವಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಗತಿ ಪರ ರೈತ ಲೋಕಣ್ಣ ಕೊಪ್ಪದ, ಹೆಸ್ಕಾಂ ಅಧಿಕಾರಿ ಮೌನೇಶ ಬಡಿಗೇರ, ಮಲ್ಲಪ್ಪ ಕಂಬಾರ, ಸುಭಾಸ ಕಂಬಾರ, ವಿ.ಎ.ಗೌಡರ, ಗುರುನಾಥ ಪಾಟೀಲ, ಗೋಪಾಲಗೌಡ ಪಾಟೀಲ, ಅರ್ಜುನ ಕೊಪ್ಪದ, ರಂಗನಗೌಡ ಪಾಟೀಲ, ಭೀಮನಗೌಡ ಪಾಟೀಲ, ರಂಗಪ್ಪ ನ್ಯಾಮಗೌಡ್ರ, ಕಾಳಪ್ಪ ಕಂಬಾರ, ಮಾನಪ್ಪ ಪತ್ತಾರ, ಹಾಗೂ ಲಕ್ಷಾನಟ್ಟಿ, ಲೋಕಾಪುರ, ಅರಳಿಕಟ್ಟಿ ವಿಶ್ವಕರ್ಮ ಸಮಾಜ ಬಾಂಧವರು, ಸೃಷ್ಟಿಕರ್ತ ವಿಶ್ವಕರ್ಮ ಯುವಕ ಸಂಘ ಪದಾಧಿಕಾರಿಗಳು, ಮಹಿಳೆಯರು ಇದ್ದರು. ಶಿಕ್ಷಕ ಕೆ.ಪಿ. ಯಾದವಾಡ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ
ಹಳೆ ದ್ವೇಷ: ರಸ್ತೆಯಲ್ಲಿ ಅಟ್ಟಾಡಿಸಿ ಅಪ್ಪ, ಮಗನ ಮೇಲೆ ಹಲ್ಲೆ ನಡೆಸಿ ಪರಾರಿ