ನಾರಾಯಣಗುರು, ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ
ಮಹಾಪುರುಷರು ಮತ್ತು ಶರಣರ ತತ್ವಾದರ್ಶಗಳು ಸಾರ್ವಕಾಲಿಕವಾಗಿದೆ. ಅವರು ತೋರಿದ ಸಮಾನತೆ ಹಾಗೂ ಕಾಯಕ ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಬೇಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಪಟ್ಟಣದ ಬಾಲಭವನದಲ್ಲಿ ತಾಲೂಕು ಆಡಳಿತ, ತಾಪಂ, ಪಪಂ ಹಾಗೂ ತಾಲೂಕು ನಾಮಧಾರಿ ಸಮಾಜದ ಸಹಯೋಗದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಹಾಗೂ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಶ್ವಮಾನವ ಸಂದೇಶ ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿದ್ದ ಅಸ್ಪೃಶ್ಯತೆ ಹಾಗೂ ಅಸಮಾನತೆಯ ವಿರುದ್ಧ ಶಿಕ್ಷಣ ಮತ್ತು ಆಧ್ಯಾತ್ಮದ ಮೂಲಕ ಕ್ರಾಂತಿ ಮಾಡಿದವರು. ಶಿಕ್ಷಣದಿಂದ ಸಮಾಜದ ಸುಧಾರಣೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಕಾಯಕವೇ ಕೈಲಾಸ ತತ್ವಕ್ಕೆ ಬದ್ದರಾಗಿ ಜೀವಿಸಿದ ಶರಣ ನುಲಿಯ ಚಂದಯ್ಯನವರು ಶ್ರಮ, ಸಂಸ್ಕೃತಿಗೆ ಸಾಟಿ ಇಲ್ಲದ ಗೌರವ ತಂದುಕೊಟಿದ್ದಾರೆ. ಅವರ ನಿಷ್ಠೆ ಹಾಗೂ ಪ್ರಾಮಾಣಿಕತೆ ಇಂದಿನ ಯುವಪೀಳಿಗೆಗೆ ಮಾರ್ಗದರ್ಶನವಾಗಿದೆ. ಇಂತಹ ಮಾಹಾಪುರುಷರ ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೇ ಅವರ ಆದರ್ಶಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಾಮರಸ್ಯ ಬೆಳೆಯಲು ಸಾಧ್ಯ ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ತಾಲೂಕು ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್, ವಿ.ಎನ್. ನಾಯ್ಕ, ತಾಪಂ ಇಒ ದೇವರಾಜ್ ಎಂ.ಹಿತ್ತಲಕೊಪ್ಪ, ಸಿಪಿಐ ಸೀತಾರಾಮ ಜೆ.ಬಿ., ಪಪಂ ಮುಖ್ಯಾಧಿಕಾರಿ ಮಹ್ಮದ್ ಯಾಕೂಬ್ ಶೇಖ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪೂರ್ವದಲ್ಲಿ ಪಟ್ಟಣದ ತಹಸೀಲ್ದಾರ ಕಚೇರಿಯಿಂದ ಡೊಳ್ಳು ಕುಣಿತ ಮತ್ತು ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ನಾರಾಯಣ ಗುರುಗಳ ರಥ ಯಾತ್ರೆ ಬಾಲಭವನದವರೆಗೆ ನಡೆಯಿತು.