ಕನ್ನಡಪ್ರಭ ವಾರ್ತೆ ಮಂಡ್ಯ
ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಜಾಗವನ್ನು ಜಿಲ್ಲಾಡಳಿತ ಬಹುತೇಕ ಅಂತಿಮಗೊಳಿಸಿದೆ. ನಗರದ ಹೊರವಲಯದಲ್ಲಿ ಮೂರು ಜಾಗಗಳ ವೀಕ್ಷಣೆ ನಡೆಸಿದ್ದರಲ್ಲಿ ನಗರದ ಉಮ್ಮಡಹಳ್ಳಿ ಗೇಟ್ ಸಮೀಪವಿರುವ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಜಾಗ ಬಹುತೇಕ ಅಂತಿಮಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.ಮಂಡ್ಯದ ಚಿಕ್ಕಮಂಡ್ಯ ಸಮೀಪ, ಕಿರಗಂದೂರು ಗೇಟ್ ಸಮೀಪ ಹಾಗೂ ಸ್ಯಾಂಜೋ ಆಸ್ಪತ್ರೆ ಹಿಂಭಾಗ ಮೂರು ಜಾಗಗಳನ್ನು ಸಮ್ಮೇಳನ ಆಯೋಜನೆಗೆ ವೀಕ್ಷಣೆ ನಡೆಸಲಾಗಿತ್ತು. ಇದರಲ್ಲಿ ಚಿಕ್ಕಮಂಡ್ಯ ಮತ್ತು ಕಿರಗಂದೂರು ಗೇಟ್ ಬಳಿಯ ಜಾಗಗಳನ್ನು ವೀಕ್ಷಿಸಿದಾಗ ಅಲ್ಲಿ ತೇವಾಂಶ ಹೆಚ್ಚಾಗಿದ್ದು, ಭೂಮಿ ಜಿಗುಟು ಮಣ್ಣಿನಿಂದ ಕೂಡಿರುವುದು ಕಂಡುಬಂದಿದೆ. ಈ ಜಾಗಗಳಲ್ಲಿ ಸಮ್ಮೇಳನ ಆಯೋಜನೆ ಮಾಡುವುದು ಅಷ್ಟು ಸೂಕ್ತವಲ್ಲವೆಂದು ಎಂಜಿನಿಯರ್‌ಗಳು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
60 ಎಕರೆ ಜಾಗ ಸಿಗುವ ವಿಶ್ವಾಸ:ಸ್ಯಾಂಜೋ ಆಸ್ಪತ್ರೆ ಹಿಂಭಾಗ ನೋಡಲಾದ ಸ್ಥಳ ಈ ಎರಡು ಜಾಗಗಳಿಗಿಂತಲೂ ಉತ್ತಮವಾಗಿದೆ. ಈ ಜಾಗವು ಗಟ್ಟಿ ನೆಲದಿಂದ ಕೂಡಿದೆ. ಸಮಾನಾಂತರವಾಗಿದ್ದು, ಸುಮಾರು 60 ಎಕರೆಯಷ್ಟು ಜಾಗ ದೊರೆಯಲಿದೆ. ಇದರಲ್ಲಿ ಸುಮಾರು 30 ಎಕರೆ ಜಾಗದಲ್ಲಿ ರೈತರು ಕಬ್ಬು ಬೆಳೆದಿದ್ದಾರೆ. ಅವರಿಗೆ ಪರಿಹಾರ ನೀಡಿ ಜಾಗವನ್ನು ಪಡೆದುಕೊಂಡರೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಈಗಾಗಲೇ ಸಚಿವ ಎನ್.ಚಲುವರಾಯಸ್ವಾಮಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ, ಜಿಲ್ಲಾಧಿಕಾರಿ ಡಾ.ಕುಮಾರ, ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ ಮೀರಾ ಶಿವಲಿಂಗಯ್ಯ ಸೇರಿದಂತೆ ಇತರರು ಜಾಗವನ್ನು ವೀಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಅದೇ ಜಾಗವನ್ನು ಅಂತಿಮಗೊಳಿಸುವುದಕ್ಕೆ ಹೆಚ್ಚು ಆಸಕ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.ಪಾರ್ಕಿಂಗ್ ವ್ಯವಸ್ಥೆ:
ಉಮ್ಮಡಹಳ್ಳಿ ಗೇಟ್‌ನಿಂದ ಮರಕಾಡುದೊಡ್ಡಿ, ಬೇಲೂರು ಕಡೆಗೆ ಹೋಗುವ ಜಾಗದಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡುವುದು. ಶಶಿಕಿರಣ ಕನ್ವೆನ್ಷನ್ ಹಾಲ್ ಬಳಿ ಹೆದ್ದಾರಿ ದಾಟುವುದಕ್ಕೆ ಅನುಕೂಲವಾಗುವಂತೆ ಸ್ಕೈವಾಕ್ ನಿರ್ಮಿಸುವುದಕ್ಕೆ ನಿರ್ಧರಿಸಿದ್ದು, ಇಲ್ಲಿ ಸಮ್ಮೇಳನ ಆಯೋಜಿಸುವುದರಿಂದ ಯಾರಿಗೂ ಯಾವುದೇ ವಿಧವಾದ ತೊಂದರೆಯಾಗುವುದಿಲ್ಲ. ಸಮ್ಮೇಳನಕ್ಕೆ ಬರುವ ಲಕ್ಷಾಂತರ ಜನರಿಗೆ ಊಟ-ಉಪಹಾರದ ವ್ಯವಸ್ಥೆ, ಸಮ್ಮೇಳನ ನಡೆಯುವುದಕ್ಕೆ ಉಪವೇದಿಕೆ, ಸಮಾನಾಂತರ ವೇದಿಕೆಗಳ ನಿರ್ಮಾಣಕ್ಕೂ ಹೆಚ್ಚು ಉಪಯುಕ್ತವಾಗಲಿದೆ. ಈ ಜಾಗವನ್ನು ಬಿಟ್ಟು ಬೇರೆಡೆ ಮಾಡುವುದರಿಂದ ಅನಾನುಕೂಲಗಳು ಎದುರಾಗುವುದನ್ನು ಮನಗಂಡು ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಜಾಗವನ್ನೇ ಅಂತಿಮಗೊಳಿಸುವುದಕ್ಕೆ ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ.ರೈತರಿಗೆ ಪರಿಹಾರ:
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ರೈತರಿಂದ ಸುಮಾರು 30 ಎಕರೆ ಜಾಗವನ್ನು ಪಡೆದುಕೊಳ್ಳುವುದಕ್ಕೆ ಜಿಲ್ಲಾಡಳಿತ ಮುಂದಾಗಿರುವುದಾಗಿ ತಿಳಿದುಬಂದಿದೆ. ಆ ಜಾಗದಲ್ಲಿ ರೈತರು ಕಬ್ಬು ಬೆಳೆಯನ್ನು ಬೆಳೆದಿದ್ದಾರೆ. ಸಮ್ಮೇಳನಕ್ಕೆ ಆ ಜಮೀನನ್ನು ಸ್ವಚ್ಛಗೊಳಿಸಬೇಕಿರುವುದರಿಂದ ಅವರಿಗೆ ಪರಿಹಾರ ರೂಪದಲ್ಲಿ ಹಣ ಕೊಟ್ಟು ಜಮೀನನ್ನು ಸ್ವಚ್ಛಗೊಳಿಸುವುದಕ್ಕೆ ನಿರ್ಧಾರ ಮಾಡಿದ್ದಾರೆ ಎಂದು ಗೊತ್ತಾಗಿದೆ.ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಗಣ್ಯರಿಗೆ ನಗರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವುದಕ್ಕೆ ಅಲ್ಲಿಂದ ಸಮ್ಮೇಳನ ಜಾಗಕ್ಕೆ ಬರುವುದಕ್ಕೆ ಹೆಚ್ಚು ಅನುಕೂಲವಾಗಲಿದೆ. ಕಿರಗಂದೂರು ಗೇಟ್ ಮತ್ತು ಚಿಕ್ಕಮಂಡ್ಯ ಬಳಿ ಆಯೋಜನೆಯಿಂದ ನಗರದ ಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ ಹೊರಗಿನಿಂದ ಬರುವವರಿಗೆ ಮರಕಾಡುದೊಡ್ಡಿ-ಬೇಲೂರು ಮಾರ್ಗದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಜಾಗ ನಿಗದಿಪಡಿಸಿ ಅಲ್ಲಿಂದ ಸಮ್ಮೇಳನದ ಜಾಗಕ್ಕೆ ನಡೆದುಕೊಂಡು ಬರುವಂತೆ ಮಾಡುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.
ಸಮ್ಮೇಳನ ನಡೆಸುವುದಕ್ಕೆ ವೀಕ್ಷಣೆ ನಡೆಸಿದ ಮೂರು ಜಾಗಗಳ ಪೈಕಿ ಸ್ಯಾಂಜೋ ಆಸ್ಪತ್ರೆ ಹಿಂಭಾಗ ನೋಡಿರುವ ಜಾಗ ಹೆಚ್ಚು ಅನುಕೂಲಕರವೆಂದು ಕಂಡುಬಂದಿರುವುದರಿಂದ ಅಲ್ಲೇ ಸಮ್ಮೇಳನ ನಡೆಸುವುದಕ್ಕೆ ಸಚಿವರು, ಜಿಲ್ಲಾಡಳಿತ ಸೇರಿದಂತೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿರುವುದಾಗಿ ತಿಳಿದುಬಂದಿದೆ.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಸ್ಯಾಂಜೋ ಆಸ್ಪತ್ರೆಯ ಹಿಂಭಾಗದ ಜಾಗ ಹೆಚ್ಚು ಸೂಕ್ತವೆಂದು ಕಂಡುಬಂದಿದೆ. ಅಲ್ಲಿ ಸುಮಾರು 60 ಎಕರೆಯಷ್ಟು ಜಾಗ ಸಿಗಲಿದೆ. ಉಪವೇದಿಕೆ, ಸಮಾನಾಂತರ ವೇದಿಕೆ, ಊಟ-ಉಪಹಾರ ವ್ಯವಸ್ಥೆಗೂ ಅನುಕೂಲಕರವಾಗಿದೆ. ಹಾಗಾಗಿ ಸಚಿವರು, ಜಿಲ್ಲಾಧಿಕಾರಿಗಳು, ಕೇಂದ್ರ ಪರಿಷತ್ ಅಧ್ಯಕ್ಷರು ವೀಕ್ಷಿಸಿ ಸಹಮತ ವ್ಯಕ್ತಪಡಿಸಿದ್ದಾರೆ. ಅಲ್ಲೇ ಸಮ್ಮೇಳನ ನಡೆಸುವುದು ಉತ್ತಮ ಎನ್ನುವುದು ಎಲ್ಲರ ಅಭಿಪ್ರಾಯವೂ ಆಗಿದೆ.- ಡಾ. ಮೀರಾ ಶಿವಲಿಂಗಯ್ಯ, ಅಧ್ಯಕ್ಷರು, ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ