ಪ್ರತಿದಿನವೂ ಅಪಾಯದಲ್ಲಿ ವಿದ್ಯಾರ್ಥಿಗಳ ಸಂಚಾರ । ಇದು ಅರೆಗದ್ದೆ–ತೆಂಗಿನಮಡಗಿ ಗ್ರಾಮಸ್ಥರ ಅಳಲಿನ ವ್ಯಥೆ
ರಾಘು ಕಾಕರಮಠಕನ್ನಡಪ್ರಭ ವಾರ್ತೆ ಅಂಕೋಲಾ
ಈ ವಿದ್ಯಾರ್ಥಿಗಳು ಶಾಲೆಗೆ ಬರಬೇಕೆಂದರೆ ರೈಲ್ವೆ ಹಳಿ ದಾಟಿಯೇ ಬರಬೇಕು. ಕೈಯಲ್ಲಿ ಜೀವ ಹಿಡಿದುಕೊಂಡು ಆತಂಕದಿಂದಲೇ ತಮ್ಮ ತಮ್ಮ ಮಕ್ಕಳನ್ನು ರೈಲ್ವೆ ಹಳಿ ದಾಟಿಸಿ ವಾಪಸ್ ಕರೆದುಕೊಂಡು ಬರುವುದೇ ಈ ಗ್ರಾಮದ ಜನರಿಗೆ ಬಹುದೊಡ್ಡ ಕೆಲಸವಾಗಿದೆ.ಇದು ಹಟ್ಟಿಕೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಅರೆಗದ್ದೆ, ತೆಂಗಿನ ಮಡಗಿ ಗ್ರಾಮಸ್ಥರ ವ್ಯಥೆ. ಇಲ್ಲಿರುವ 90ಕ್ಕೂ ಹೆಚ್ಚು ಮನೆಗಳಿಂದ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮೀಪದ ಸಕಲಬೇಣ ಗ್ರಾಮದ ಶಾಲೆಗೆ ತೆರಳುತ್ತಾರೆ. ಆದರೆ ಅವರಿಗೆ ರೈಲ್ವೆ ಹಳಿ ದಾಟುವುದೇ ಒಂದು ದೊಡ್ಡ ಸವಾಲಾಗಿದೆ.
ಕೊಂಕಣ ರೈಲ್ವೆ ನಿರ್ಮಾಣಗೊಳ್ಳುವ ಪೂರ್ವ ಇಲ್ಲಿ ಕಾಲಸಂಕ ಇತ್ತು. ಯೋಜನೆ ಬಂದಾಗ ಈ ಭಾಗದ ಭೂ-ಸ್ವಾಧೀನ ಪಡಿಸಿಕೊಂಡಾಗ ಕಾಲುಸಂಕ ಯೋಜನೆಗೆ ಬಲಿಯಾಯಿತು. ನಾಗರಿಕರಿಗೆ ಸಂಚರಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಮಾತ್ರ ಮರು ಸೇತುವೆ ನಿರ್ಮಿಸಿ ಕೊಡದೆ ನಮ್ಮನ್ನು ಅತಂತ್ರರನ್ನಾಗಿಸಿತು ಎನ್ನುವುದು ನಾಗರಿಕರ ಅಳಲು.ಇನ್ನು ರೈಲ್ವೆ ಹಳಿಯನ್ನು ತಪ್ಪಿಸಿಕೊಂಡು ಬೇರೆ ದಾರಿಯಿಂದ ಶಾಲೆಗೆ ಬರಬೇಕೆಂದರೆ 4 ಕಿಮೀ ರಾಷ್ಟ್ರೀಯ ಹೆದ್ದಾರಿಯಲ್ಲೆ ನಡೆದು ಬಂದು ಶಾಲೆಗೆ ಬರಬೇಕಾದ ಅನಿವಾರ್ಯತೆ ಇದೆ. ಹಾಗೆ ರೈಲ್ವೆ ಸೇತುವೆಯಿಂದ ಕೆಳಗಡೆ ಹಳ್ಳ ಇದ್ದು ಅದನ್ನು ದಾಟುವುದು ಕೂಡ ಕಷ್ಟ ಸಾಧ್ಯವಾಗಿದ್ದು, ವಿದ್ಯಾರ್ಥಿಗಳು ಭಯದಿಂದಲೆ ಹಳ್ಳ ದಾಟಬೇಕಾದ ಪರಿಸ್ಥಿತಿ.
ನಮಗೆ ಹಳ್ಳ ಹಾಗೂ ರೈಲ್ವೆ ಹಳಿ ದಾಟುವ ನಡೆಯಿಂದ ಮುಕ್ತವಾಗಲು ಕಿರು ಸಂಕ ನಿರ್ಮಿಸಿ ಕೊಡಿ ಎಂದು ಹತ್ತಾರು ಬಾರಿ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ. ಆದರೆ ಇಲಾಖೆಯಿಂದ ಮಾತ್ರ ಯಾವುದೇ ಕ್ರಮವಾಗಿಲ್ಲ. ಜೊತೆಗೆ ಈ ಗ್ರಾಮಗಳ ಜನತೆಗೆ ಓಡಾಡಲು ಸರಿಯಾದ ರಸ್ತೆ ಕೂಡ ಇಲ್ಲ, ಹಗಲು ರಾತ್ರಿ ಎನ್ನದೇ ಪ್ರಾಣವನ್ನು ಪಣಕ್ಕಿಟ್ಟು ರೈಲ್ವೆ ಹಳಿಯನ್ನು ದಾಟಿ ತಮ್ಮ ಗ್ರಾಮಗಳಿಗೆ ತಲುಪಬೇಕಿದೆ. ದ್ವಿಚಕ್ರ ವಾಹನಗಳು ಸಂಚರಿಸಲು ಸಾಧ್ಯವಾಗದ ಕಾರಣ, ರೈಲ್ವೆ ಮಾರ್ಗದ ದಾರಿ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ರೈಲು ಹಳಿ ದಾಟಿ ಗ್ರಾಮಗಳಿಗೆ ತೆರಳಬೇಕಿದೆ.ರೈಲ್ವೆ ಇಲಾಖೆಗೆ ಪ್ರಸ್ತಾವನೆ:ಪೂರ್ವಜರ ಕಾಲದಿಂದಲೂ ಇಲ್ಲಿನ ನಾಗರಿಕರು ರಸ್ತೆಯಿಂದ ಓಡಾಟ ನಡೆಸುತ್ತಿದ್ದರು. ಕೊಂಕಣ ರೈಲ್ವೆ ಯೋಜನೆಯು ಇರುವ ಕಾಲು ಸಂಕವನ್ನು ಕೂಡ ನುಂಗಿ ಹಾಕಿದೆ. ದೊಡ್ಡ ಮಟ್ಟದಲ್ಲಿ ಅಪಾಯ ಎದುರಾಗುವ ಪೂರ್ವ ಸಂಬಂಧಪಟ್ಟವರು ಎಚ್ಚೆತ್ತು, ಕಿರು ಸೇತುವೆ ನಿರ್ಮಿಸಿ ಕೊಡುವ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಗ್ರಾಪಂನಿಂದಲೂ ಈ ಬಗ್ಗೆ ಪ್ರಸ್ತಾವನೆಯನ್ನು ರೈಲ್ವೆ ಇಲಾಖೆಗೆ ಕಳುಹಿಸಲಾಗಿದೆ ಎಂದು ಹಟ್ಟಿಕೇರಿ ಗ್ರಾಪಂ ಸದಸ್ಯ ವಿನೋದ ನಾಯ್ಕ ತಿಳಿಸಿದ್ದಾರೆ.