ಹಳಿಯಾಳ ಪಟ್ಟಣವಾಯಿತು ಈಗ ಗ್ರಾಮಾಂತರ ಭಾಗದಲ್ಲಿ ಕಂಡು ಬಂತು ಹುಳುಕು
ತಾಲೂಕಿನ ಯಡೋಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನುಶಿ ಹಿಡಿದ ಕಳಪೆ ತೊಗರಿ ಬೆಳೆ ಪತ್ತೆಯಾಗಿದ್ದು, ಶಾಲಾ ಬಿಸಿಯೂಟದ ಗುಣಮಟ್ಟ ಮತ್ತೊಮ್ಮೆ ಪ್ರಶ್ನಾರ್ಥಕವಾಗಿದೆ.
ಕಳೆದ ತಿಂಗಳಾಂತ್ಯದಲ್ಲಿ ಹಳಿಯಾಳ ಪಟ್ಟಣದ ದೇಶಪಾಂಡೆ ಆಶ್ರಯ ನಗರದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಉರ್ದು ಪ್ರಾಥಮಿಕ ಶಾಲೆಯಲ್ಲಿ ನುಷಿ ಹುಳಗಳಿದ್ದ ತೊಗರಿ ಬೆಳೆ ಕಂಡು ಬಂದ ಹಿನ್ನೆಲೆ ಶಾಲಾಭಿವೃದ್ಧಿಯ ಸಮಿತಿಯ ಸದಸ್ಯರು ಆಕ್ಷೇಪಿಸಿದ್ದರಿಂದ ಈ ಸುದ್ದಿ ಇಡಿ ತಾಲೂಕಿನೆಲ್ಲೆಡೆ ಸದ್ದು ಮಾಡಿತ್ತು. ಇನ್ನೂ ಈ ಸುದ್ದಿ ಮರೆ ಮಾಚುವ ಮುನ್ನ ಈಗ ಇಂತಹುದೇ ಪ್ರಕರಣವೊಂದು ಯಡೋಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮರುಕಳಿಸಿದ್ದು, ಮಂಗಳವಾರ ಎಸ್‌ಡಿಎಂಸಿ ಸದಸ್ಯರು ಮತ್ತು ಸಾರ್ವಜನಿಕರು ಕಳಪೆ ತೊಗರಿ ಬೆಳೆಯ ಪ್ರಕರಣ ಬೆಳಕಿಗೆ ತಂದಿದ್ದಾರೆ.ಮಕ್ಕಳಿಗೆ ಕಳಪೆ ನುಶಿ ಮಿಶ್ರಿತ ತೊಗರಿ ಬೆಳೆಯಿಂದ ಸಿದ್ಧಪಡಿಸಿದ ಸಾರು ಮಾಡಿ ಬಡಿಸಲಾಗುತ್ತಿರುವ ಸುದ್ದಿ ತಿಳಿದು ಪಾಲಕರು ಶಾಲೆಗೆ ದಾವಿಸಿ ಪರಿಶೀಲನೆ ನಡೆಸಿದಾಗ ತೊಗರಿ ಬೆಳೆಯ ಹುಳುಕು ಹೊರಬಿದ್ದಿದೆ.
ಕಳಪೆ ತೊಗರಿ ಬೆಳೆಯಿಂದ ಬಿಸಿಯೂಟ ಸಿದ್ಧಪಡಿಸಿದ ಕುರಿತು ಶಾಲಾ ಮುಖ್ಯೋಧ್ಯಾಕರು ಹಾಗೂ ಬಿಸಿಯೂಟದ ಸಹಾಯಕಿ ನೀಡಿದ ಉತ್ತರ ತದ್ವಿರುದ್ಧವಾಗಿರುವುದು ಪ್ರಕರಣದ ಪರಿಶೀಲನೆಗೆ ಬಂದ ಪಾಲಕ ಹಾಗೂ ಪೋಷಕರನ್ನು ಕೆರಳಿಸಿದೆ.
ವಿದ್ಯಾರ್ಥಿಗಳ ಪೋಷಕರು ಸಾರ್ವಜನಿಕವಾಗಿ ಶಾಲೆಯು ತೋರಿಸುವುದು ಒಳ್ಳೆಯ ಧಾನ್ಯ, ಅಡುಗೆಗೆ ಬಳಸುವುದು ಹಾಳಾದ ತೊಗರಿ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಮಧ್ಯೆ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಇಲಾಖೆ ಮತ್ತು ಅಕ್ಷರದಾಸೋಹ ವಿಭಾಗದ ಪ್ರತಿನಿಧಿಗಳ ನಿಯೋಗವು ಪರಿಶೀಲನೆ ನಡೆಸಿ ಶಾಲಾ ಮತ್ತು ಬಿಸಿಯೂಟದ ಸಿಬ್ಬಂದಿ ಹೇಳಿಕೆಯನ್ನು ದಾಖಲು ಮಾಡಿ ಬಿಇಒಗೆ ಸಲ್ಲಿಸಿದೆ.