ಶರಾವತಿ ಮುಳುಗಡೆ ಸಂತ್ರಸ್ತ ರೈತರ ತೀರದ ಸಂಕಷ್ಟ

KannadaprabhaNewsNetwork |  
Published : Jun 19, 2025, 12:35 AM IST
ಪೋಟೋ: 18ಎಸ್ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ರೈತಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಮಾತನಾಡಿದರು. | Kannada Prabha

ಸಾರಾಂಶ

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶರಾವತಿ ಮುಳುಗಡೆ ಸಂತಸ್ತರಿಗೆ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತ ಅನುಸರಿಸುತ್ತಿರುವ ನೀತಿ ಅವೈಜ್ಞಾನಿಕವಾಗಿದೆ. ಎಲ್ಲಾ ಸಂತ್ರಸ್ತರ ಸಾಗುವಳಿ ಭೂಮಿಯನ್ನೂ ಸಕ್ರಮಕ್ಕೆ ಪರಿಗಣಿಸಬೇಕೆಂದು ಆಗ್ರಹಿಸಿ ಜೂ.23 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ತಿಳಿಸಿದರು.

ಶಿವಮೊಗ್ಗ: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶರಾವತಿ ಮುಳುಗಡೆ ಸಂತಸ್ತರಿಗೆ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತ ಅನುಸರಿಸುತ್ತಿರುವ ನೀತಿ ಅವೈಜ್ಞಾನಿಕವಾಗಿದೆ. ಎಲ್ಲಾ ಸಂತ್ರಸ್ತರ ಸಾಗುವಳಿ ಭೂಮಿಯನ್ನೂ ಸಕ್ರಮಕ್ಕೆ ಪರಿಗಣಿಸಬೇಕೆಂದು ಆಗ್ರಹಿಸಿ ಜೂ.23 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅರಣ್ಯ ಮತ್ತು ಕಂದಾಯ ಇಲಾಖೆಗಳು ಹಿಂದಿನ ಸರ್ಕಾರದ ಅವಧಿಯಲ್ಲಿ ೨೦೨೨ರಂದು ಮಾಡಿರುವ ಬ್ಲಾಕ್‌ಗಳ ಅನುಸಾರ ಈಗಲೂ ಸರ್ವೆ ಮಾಡಲಾಗಿದೆ. ಆದರೆ ಆ ಬ್ಲಾಕ್‌ಗಳಲ್ಲಿ ಮೂಲ ಶರಾವತಿ ಸಂತಸ್ತರೇ ಬಿಟ್ಟು ಹೋಗಿದ್ದಾರೆ. ಕೆಲವು ಕಡೆ ದಟ್ಟ ಅರಣ್ಯವನ್ನೂ ಬ್ಲಾಕ್‌ಗೆ ಸೇರಿಸಲಾಗಿದೆ. 1960ರಲ್ಲೇ ಮಂಜೂರಾಗಿ ಸಾಗುವಳಿಮಾಡುತ್ತಿರುವ ರೈತರನ್ನು ಕೈಬಿಡಲಾಗಿದೆ. ಈ ಬಗ್ಗೆ ಸಂಸದರು, ಸಚಿವರು, ಅಧಿಕಾರಿಗಳ ಬಳಿ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕಿವಿಮೇಲೆ ಹಾಕಿಕೊಳ್ಳುತ್ತಿಲ್ಲ. ಈಗಾಗಲೇ ಮಾಡಿರುವ ಬ್ಲಾಕ್‌ಗಳಿಂದ ದಾಖಲೆಗಳಿರುವ ಸಂತ್ರಸ್ತರ ಭೂಮಿಯನ್ನು ಕೈ ಬಿಟ್ಟಿದ್ದು, ಇದನ್ನು ಸರಿಪಡಿಸಿ ಸುಪ್ರೀಂ ಕೋರ್ಟ್‌ಗೆ ವರದಿ ನೀಡುವಂತೆ ಆಗ್ರಹಿಸಿ ಜೂ.23 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುತ್ತೇವೆ ಎಂದರು.

2017ರಲ್ಲಿ ಸಂತ್ರಸ್ತರ ಭೂಮಿಯನ್ನು ಜಂಟಿ ಸರ್ವೆ ಮಾಡಿ ಡಿನೋಟಿಫಿಕೇಶನ್ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ಡಿನೋಟಿಫಿಕೇಶನ್ ಮಾಡಲಾಗಿದೆ ಎಂಬ ಕಾರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಇದರಿಂದಾಗಿ ಹಿಂದಿನ ಬಿಜೆಪಿ ಸರ್ಕಾರ ಎಲ್ಲಾ ಸರ್ಕಾರಿ ಆದೇಶವನ್ನು ರದ್ದುಪಡಿಸಿತ್ತು ಎಂದರು.

ಪುನಃ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳು ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದರಂತೆ ಈಗ ಜಿಲ್ಲೆಯಲ್ಲಿನ ಶರಾವತಿ ಮುಳುಗಡೆ ಸಂತ್ರಸ್ತರ ಸಾಗುವಳಿ ಭೂಮಿ ಜಂಟಿ ಸರ್ವೆ ಮಾಡಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಸರ್ವೇ ಕಾರ್ಯ ಮುಗಿದಿದೆ ಎಂದರು.

2022ರಲ್ಲಿ ಸರ್ವೆ ಮಾಡಿ ಬ್ಲಾಕ್‌ಗಳನ್ನು ಸಿದ್ಧಪಡಿಸಲಾಗಿದೆ. ಈ ಬ್ಲಾಕ್‌ಗಳಲ್ಲಿ 1962-63 ರಲ್ಲಿ ಕಂದಾಯ ಇಲಾಖೆಯಿಂದ ಜಮೀನು ಮಂಜೂರು ಮಾಡಿದವರ ಹಾಗೂ ಆ ಬಳಿಕ ಖಾತೆ ಪಡೆದವರ ಸಾಗುವಳಿ ಭೂಮಿಯನ್ನು ವಿವಿಧ ಸರ್ವೇ ನಂಬರ್‌ಗಳಲ್ಲಿ ಕೈಬಿಡಲಾಗಿದೆ. ಬ್ಲಾಕ್‌ಗಳನ್ನು ಮಾರ್ಪಡಿಸುವಂತೆ ಮನವಿ ಮಾಡಿದರೂ ಜಿಲ್ಲಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಡಿಡಿಎಲ್‌ಆರ್ ಸ್ಪಂದನೆ ಮಾಡುತ್ತಿಲ್ಲ ಎಂದು ದೂರಿದರು.

ಸಂತ್ರಸ್ತ ಕೆರೆಹಳ್ಳಿ ರಾಮಪ್ಪ ಮಾತನಾಡಿ, 1950ರ ದಶಕದಲ್ಲಿ ವಿವಿಧ ಸರ್ಕಾರಿ ಆದೇಶಗಳಲ್ಲಿ ಬಿಡುಗಡೆ ಮಾಡಿರುವ 9129 ಎಕರೆಯನ್ನು ಈಗ ಡಿನೋಟಿಫಿಕೇಶನ್ ಮಾಡಿ ಸಂತ್ರಸ್ತರಿಗೆ ಕೊಟ್ಟರೆ ಹೆಚ್ಚುವರಿಯಾಗಿ ಭೂಮಿ ಮಂಜೂರಾತಿ ಮಾಡಲು ಸಾಧ್ಯವೆಂದು ಹೇಳಲಾಗುತ್ತಿದೆ. ಹೀಗಾಗಿ ದಾಖಲೆ ಇರುವ ಸಂತಸ್ತರ ಭೂಮಿಯನ್ನು ಮೊದಲ ಆದ್ಯತೆಯಲ್ಲಿ ಬ್ಲಾಕ್ ಒಳಗೆ ಸೇರಿಸಬೇಕಿತ್ತು. ಆದರೆ ಆ ರೀತಿ ಮಾಡಿಲ್ಲ ಎಂದರು.

೨೦೨೨ರಲ್ಲಿ ಸಿದ್ಧಪಡಿಸಿರುವ ಬ್ಲಾಕ್‌ಗಳನ್ನು ಸರ್ಕಾರಿ ಕಚೇರಿಯಲ್ಲಿ ಮಾಡಿದಂತಿಲ್ಲ. ಬದಲಾಗಿ ಯಾವುದೋ ಖಾಸಗಿ ಕಚೇರಿಯಲ್ಲಿ ಸಿದ್ಧಪಡಿಸಿದಂತಿದೆ. ಸರ್ಕಾರವೇ ಕೊಟ್ಟಿರುವ ದಾಖಲೆಗಳನ್ನು ನೀಡಿದರೂ ಅಂತಹವರ ಭೂಮಿಯನ್ನು ಬ್ಲಾಕ್ ಮಾಡಿಲ್ಲ. ಬದಲಾಗಿ ದಾಖಲೆ ಇಲ್ಲದವರು ಜಮೀನು, ಕಾಡು ಇರುವ ಜಾಗವನ್ನು ಬ್ಲಾಕ್ ಒಳಗೆ ಸೇರಿಸಲಾಗಿದೆ. ಹೀಗಾಗಿ ಬ್ಲಾಕ್‌ಗಳನ್ನು ಸರಿಯಾಗಿ ಮಾರ್ಪಡಿಸಿ ದಾಖಲೆ ಇರುವವರಿಗೆ ಮೊದಲ ಆದ್ಯತೆ ನೀಡುವಂತೆ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ಥ ಮುಖಂಡರಾದ ಜಿ.ನಾರಾಯಣಗೌಡ, ಗೋವಿಂದಪ್ಪ ಹಾರೋಹಿತ್ತಲು, ಕೃಷ್ಣಪ್ಪ, ಷಣ್ಮುಖಪ್ಪ ಕಂಚಾಳಸರ, ಕೆ.ಸಿ.ನಾಗರಾಜ್, ರಮೇಶ್ ಮಲೆಶಂಕರ, ರಾಜುಶೆಟ್ಟಿ, ಬ್ಯಾಡನಾಳ ಪವೀಣ್, ಸುಧಾಕರ್ ಶೆಟ್ಟಿಹಳ್ಳಿ, ಸುಧೀರ್ ಸಂಕ್ಲಾಪುರ, ಶ್ರೀನಿವಾಸ್, ಪ್ರವೀಣ್ ಬ್ಯಾಡನಾಳ ಇತರರಿದ್ದರು.

ಶರಾವತಿ ಸಂತ್ರಸ್ತರು ಸರ್ಕಾರದಿಂದ ಬಿಕ್ಷೆ ಕೇಳುತ್ತಿಲ್ಲ. ಅವರು ತಮ್ಮ ಹಕ್ಕು ಕೇಳುತ್ತಿದ್ದಾರೆ. ಜನಪ್ರತಿನಿಧಿಗಳು ಕ್ರೆಡಿಟ್‌ಗೆ ಹೋರಾಟ ಮಾಡದೆ, ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕು. ಸುಪ್ರೀಂ ಕೋರ್ಟ್ ಸಮಸ್ಯೆ ಬಗೆಹರಿಸಿ ಎಂದು ಹೇಳಿದೆಯೇ ವಿನಾಃ ಬರೀ 9200 ಎಕರೆ ಎಂದು ಹೇಳಿಲ್ಲ.

- ತೀನಾ ಶ್ರೀನಿವಾಸ್, ಸಂಚಾಲಕ, ಮಲೆನಾಡು ರೈತ ಹೋರಾಟ ಸಮಿತಿ.

ಆರು ದಶಕಗಳ ಹಿಂದೆ ಆದ ಅನ್ಯಾಯ ಈಗ ಸರಿ ಮಾಡಲು ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ. ಒಂಬತ್ತು ಸಾವಿರ ಎಕರೆ ಅಂದು ಸಾಗುವಳಿ ಆಗಿದ್ದು, ಈಗ ಅದು ನಾಲ್ಕು ಪಟ್ಟು ಸಾಗುವಳಿಯನ್ನು ರೈತರು ಮಾಡಿಕೊಂಡಿದ್ದಾರೆ. ಎಲ್ಲಾ ಶರಾವತಿ ಸಂತ್ರಸ್ತರ ಕುಟುಂಬಗಳ ಗಣತಿ ಮತ್ತು ಜಿಪಿಎಸ್ ಸರ್ವೆ ಮಾಡಿ ಅವರ ಭೂಮಿಗೆ ಹಕ್ಕುದಾರಿಕೆ ಕೊಡಬೇಕು. ಈ ವಿಸ್ತೃತ ವರದಿಯನ್ನು ಸುಪ್ರೀಂ ಕೋರ್ಟಿಗೆ ಕಳಿಸಬೇಕು.- ಕೆ.ಸಿ.ನಾಗರಾಜ್, ಸಂತ್ರಸ್ತ ರೈತ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ