ಕವಿಯಾದವನು ಅನಭಿಷಕ್ತ ದೊರೆ: ಗುಬ್ಬಿಗೂಡಿ ರಮೇಶ್

KannadaprabhaNewsNetwork |  
Published : Jan 12, 2025, 01:17 AM IST
೧೧ಕೆಎಂಎನ್‌ಡಿ-೫ಮಂಡ್ಯದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಂಕ್ರಾಂತಿ ಕವಿಗೋಷ್ಠಿಯನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಸಾಹಿತಿ ಗುಬ್ಬಿಗೂಡು ರಮೇಶ್ ಉದ್ಘಾಟಿಸಿದರು. | Kannada Prabha

ಸಾರಾಂಶ

ರಸಕಾವ್ಯ ಸೃಷ್ಠಿ ಮಾಡುವವರೆಲ್ಲ ಕವಿಗಳಾಗಿ ಉಳಿಯುವುದು ಸುಳ್ಳು. ಭಾರತೀಯ ಕಾಲಮೀಮಾಂಸೆ ಹೇಳಿದಂತೆ ಪಾರಮಾರ್ಥಿಕ ಪ್ರತಿಭೆ, ನಿರಪಾರ್ಥಿಕ ಪ್ರತಿಭೆ ವಿಭಾಗಗಳಿವೆ. ಕೆಲವರು ಯಾವುದೇ ಅಧ್ಯಯನ, ಅಭ್ಯಾಸ ಇಲ್ಲದಿದ್ದರೂ ಕಾವ್ಯ ಬರೆಯುತ್ತಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕವಿಯಾದವನು ಅನಭಿಷಕ್ತ ದೊರೆ ಇದ್ದಂತೆ. ಆತನಿಗೆ ಯಾವುದೇ ಇತಿ-ಮಿತಿಗಳಿರುವುದಿಲ್ಲ. ಎಲ್ಲದರ ಬಗ್ಗೆಯೂ ಮಾತನಾಡುವ ಹಾಗೂ ಕವಿತೆಯ ರೂಪಕ್ಕಿಳಿಸುವ ಶಕ್ತಿ ಇರುತ್ತದೆ ಎಂದು ಸಾಹಿತಿ ಗುಬ್ಬಿಗೂಡು ರಮೇಶ್ ಅಭಿಪ್ರಾಯಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಕನ್ನಡ ಭವನದಲ್ಲಿ ನಡೆದ ಸಂಕ್ರಾಂತಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ರಸಕಾವ್ಯ ಸೃಷ್ಠಿ ಮಾಡುವವರೆಲ್ಲ ಕವಿಗಳಾಗಿ ಉಳಿಯುವುದು ಸುಳ್ಳು. ಭಾರತೀಯ ಕಾಲಮೀಮಾಂಸೆ ಹೇಳಿದಂತೆ ಪಾರಮಾರ್ಥಿಕ ಪ್ರತಿಭೆ, ನಿರಪಾರ್ಥಿಕ ಪ್ರತಿಭೆ ವಿಭಾಗಗಳಿವೆ. ಕೆಲವರು ಯಾವುದೇ ಅಧ್ಯಯನ, ಅಭ್ಯಾಸ ಇಲ್ಲದಿದ್ದರೂ ಕಾವ್ಯ ಬರೆಯುತ್ತಾರೆ. ಸಾಹಿತ್ಯ ಪ್ರಾಕಾರಗಳಲ್ಲಿ ಎಲ್ಲ ರೀತಿಯ ಬರಹಗಾರರೂ ಪದ್ಯಕ್ಕೆ ಹೋಲಿಕೆಯಾಗುವ ಹತ್ತಾರು ಕಾವ್ಯಗಳನ್ನು ಸೃಷ್ಠಿ ಮಾಡದೆ ಹೋದವರು ಕೂಡ ಯಾರೂ ಇಲ್ಲ ಎಂದರು.

ಕಾವ್ಯ ತುಂಬಾ ಪರಿಣಾಮಕಾರಿ ಹಾಗೂ ಅತ್ಯಂತ ಆಕರ್ಷಕವಾಗಿ ಸೆಳೆಯುವ ಮಾಧ್ಯಮ. ಪಂಪ, ರನ್ನನಂತಹವರೂ ಸಹ ಮಹಾಕಾವ್ಯಕ್ಕೆ ಆಕರ್ಷಿತರಾದವರು. ಪ್ರಾಚೀನ ಕವಿಗಳೆಲ್ಲ ಕಾವ್ಯಕ್ಕೆ ತಮ್ಮನ್ನು ತಾನು ಒಪ್ಪಿಸಿಕೊಂಡುಬಿಟ್ಟರು ಎಂದು ವಿಶ್ಲೇಷಿಸಿದರು.

ಕಾವ್ಯಗಳಲ್ಲಿ ವಚನವೂ ಒಂದು ವಚನ ಎಂದರೆ ಅರ್ಥ ಏನೆಲ್ಲ ಇರಬಹುದು. ಆದರೆ, ಅದರಲ್ಲಿ ಕಾವ್ಯ, ವ್ಯಾಖ್ಯಾನ ಎಲ್ಲವೂ ಇದೆ. ಬದುಕಿನ ಎಲ್ಲ ವಿಚಾರಗಳನ್ನೂ ವಚನದ ರೂಪದಲ್ಲಿ ಹೇಳಲಾಗುತ್ತದೆ ಎಂದರು.

ಜಾಗತೀಕರಣದ ಭೂಪಟದಲ್ಲಿ ನಮ್ಮ ಅಸ್ಮಿತೆ ಹುಟ್ಟುವುದಿಲ್ಲ. ನಮ್ಮ ಮೊರ, ತೊಟ್ಟಿಲು, ನಾವು ಬಳಸುವಂತಹ ದೇಸೀತನ ಇದರಲ್ಲಿ ಇದ್ದರೆ ಅದೇ ನಮ್ಮ ಅಸ್ಮಿತೆ. ಕಾವ್ಯದಲ್ಲೂ ಸಹ ದೇಸಿತನ ಇದ್ದರೆ ಚೆನ್ನ ಎಂದರು.

೨ ಸಾವಿರ ವರ್ಷಗಳ ಚರಿತ್ರೆಯಲ್ಲಿ ಕಾವ್ಯದ ಪಲ್ಲಟಗಳು ಹೇಗಾಯಿತು. ಕನ್ನಡದ ಸಮುದಾಯಕ್ಕೆ ಏನೆಲ್ಲಾ ಕೊಟ್ಟಿದೆ ಎಂಬುದರ ಬಗ್ಗೆಯೂ ಮಾತನಾಡುವ ಅವಶ್ಯಕತೆ ಇದೆ. ಕಾವ್ಯಕ್ಕೆ ಸಂಬಂಧಿಸಿದಂತೆ ಮಾತನಾಡಬೇಕಾಗಿದೆ. ಪ್ರಸ್ತುತ ಕಾವ್ಯ ಎಲ್ಲಿಗೆ ಬಂದು ನಿಂತಿದೆ ಎಂದರೆ ಬ್ಲಾಗ್, ಪೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಬಂದಿದೆ. ಜಗತ್ತಿನ ಎಲ್ಲ ಜಾಗತಿಕ ತಾಣಗಳನ್ನೂ ತಲುಪುವ ನಿಟ್ಟಿನಲ್ಲಿ ಕಾವ್ಯ ಪ್ರಯೋಗ ಆಗುತ್ತಿದೆ. ಜಗತ್ತಿನ ಎಲ್ಲ ಕವಿಗಳಿಗೂ ತಲುಪುವಂತಹ ಮಟ್ಟಕ್ಕೆ ಬಂದು ನಿಂತಿದೆ ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ. ಜಿ.ಟಿ. ವೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕಿ ಮೀರಾ ಶಿವಲಿಂಗಯ್ಯ ಆಶಯ ನುಡಿಯನ್ನಾಡಿದರು. ಮಾಜಿ ಅಧ್ಯಕ್ಷ ಎ.ವಿ. ಧರಣೇಂದ್ರಯ್ಯ ಕವಿಗಳಿಗೆ ನೆನಪಿನ ಕಾಣಿಕೆ ವಿತರಿಸಿದರು.

ಕಸಾಪ ಮಾಜಿ ಅಧ್ಯಕ್ಷರಾದ ತೈಲೂರು ವೆಂಕಟಕೃಷ್ಣ, ಡಿ.ಪಿ.ಸ್ವಾಮಿ, ಪ್ರೊ. ಜಯಪ್ರಕಾಶಗೌಡ, ಎಚ್.ವಿ. ಜಯರಾಂ, ಡಾ. ಎಚ್.ಎಸ್.ಮುದ್ದೇಗೌಡ, ಸಾಹಿತಿ ಕೆ.ಪಿ. ಮೃತ್ಯುಂಜಯ, ಚಂದ್ರಲಿಂಗು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ಕವಿಗಳು ತಮ್ಮ ಕವನಗಳನ್ನು ವಾಚಿಸಿದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ