14 ತಿಂಗಳಿಂದ ಪೌರಾಯುಕ್ತ ಹುದ್ದೆ ಖಾಲಿ.. !

KannadaprabhaNewsNetwork | Published : Oct 21, 2024 12:47 AM

ಸಾರಾಂಶ

ಕೆಳ ಹಂತದ ಸಿಬ್ಬಂದಿ ಎಲ್ಲ ಕಾಗದ ಪತ್ರಗಳನ್ನು ಸಿದ್ಧ ಮಾಡಿದ್ದರೂ ಪೌರಾಯುಕ್ತರ ಸಹಿಗಾಗಿ ನಾಲ್ಕೈದು ದಿನ ಕಾಯಲೇಬೇಕಾದ ಅನಿವಾರ್ಯತೆ ನಿರ್ಮಾಣ

ಶಿವಕುಮಾರ ಕುಷ್ಟಗಿ ಗದಗ

ಗದಗ-ಬೆಟಗೇರಿ ಅವಳಿ ನಗರದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ನಗರಸಭೆಯಲ್ಲಿ ಪೌರಾಯುಕ್ತರ ಹುದ್ದೆ ಖಾಲಿ ಬಿದ್ದು ವರ್ಷ ಗತಿಸಿ ಹೋಗಿದೆ. ಆದರೂ ಇದುವರೆಗೂ ಕಾಯಂ ಪೌರಾಯುಕ್ತರು ಬಾರದ ಹಿನ್ನೆಲೆಯಲ್ಲಿ ಸಾರ್ವಜನಿಕರು ವ್ಯಾಪಕ ಸಮಸ್ಯೆ ಎದುರಿಸುತ್ತಿದ್ದು, ದಾಖಲೆ ಪಡೆದುಕೊಳ್ಳಲು ಪರದಾಡುವಂತಾಗಿದೆ.

31-8-2023 ರಂದು ಅಂದು ಪೌರಾಯುಕ್ತರಾಗಿದ್ದ ರಮೇಶ ಸುಣಗಾರ ನಿವೃತ್ತಿಯಾದ ನಂತರ ಇದುವರೆಗೂ (14 ತಿಂಗಳಿಂದ) ಕೇವಲ ಪ್ರಭಾರ ಅಧಿಕಾರಿಗಳೇ ಕಾರ್ಯಭಾರ ನಿರ್ವಹಿಸಿದ್ದಾರೆ. ಆದರೆ ಪೂರ್ಣ ಪ್ರಮಾಣ ಅಧಿಕಾರಿಗಳು ಇರದೇ ಇರುವುದರಿಂದ ಮಹತ್ವದ ಯಾವ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ.ಮುಖ್ಯವಾಗಿ ಸರ್ಕಾರದೊಂದಿಗಿನ ಸಂವಹನಕ್ಕೂ ನಗರಸಭೆಯ ಕೆಳಹಂತದ ಸಿಬ್ಬಂದಿ ಪರದಾಡುತ್ತಿದ್ದಾರೆ.

ಕೆಲಸಗಳೇ ಆಗುತ್ತಿಲ್ಲ: ಅವಳಿ ನಗರ ವ್ಯಾಪ್ತಿಯಲ್ಲಿ 2 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ನಿತ್ಯವೂ ನೂರಾರು ಜನ ಮನೆ ಕಟ್ಟಿಸುವವರು, ಇರುವ ಮನೆಗಳ ಮೇಲೆ ಸಾಲ ಪಡೆದುಕೊಳ್ಳುವವರು. ನಿವೇಶನ ಖರೀದಿಸುವವರು, ಮಾರಾಟ ಮಾಡುವವರು ಇದರೊಟ್ಟಿಗೆ ಬ್ಯಾಂಕ್ ಸಾಲಗಳಿಗೆ ಬೇಕಾಗುವ ಫಾರಂ ನಂಬರ್ 3 ಗಳಿಗಾಗಿ (ಡಿಜಿಟಲ್ ಉತಾರ) ಸಾರ್ವಜನಿಕರು ನಿತ್ಯವೂ ನಗರಸಭೆಗೆ ಅಲೆಯುವಂತಾಗಿದೆ.ಇದರಿಂದ ಸಾರ್ವಜನಿಕರು ರೋಸಿ ಹೋಗಿದ್ದು, ನಮ್ಮ ಕೆಲಸಗಳೇ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಕಾಯುವುದು ಅನಿವಾರ್ಯ: ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ನಿತ್ಯವೂ ನಗರಸಭೆಗೆ ಬಂದು ಕಾಯವುದು ಅನಿವಾರ್ಯ, ಕಾರಣ ಕೆಳ ಹಂತದ ಸಿಬ್ಬಂದಿ ಎಲ್ಲ ಕಾಗದ ಪತ್ರಗಳನ್ನು ಸಿದ್ಧ ಮಾಡಿದ್ದರೂ ಪೌರಾಯುಕ್ತರ ಸಹಿಗಾಗಿ ನಾಲ್ಕೈದು ದಿನ ಕಾಯಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇದಕ್ಕೆ ಮುಖ್ಯ ಕಾರಣ ಬೇರೆ ಇಲಾಖೆಯ ಅಧಿಕಾರಿಗಳಿಗೆ ಪೌರಾಯುಕ್ತರ ಹುದ್ದೆಯನ್ನು ಪ್ರಭಾರವಾಗಿ ನೀಡಿದ ಹಿನ್ನೆಲೆಯಲ್ಲಿ ನಗರಸಭೆಯ ಸಿಬ್ಬಂದಿಗಳು ಪ್ರಭಾರ ಹುದ್ದೆ ಹೊಂದಿರುವ ಅಧಿಕಾರಿಗಳ ಮೂಲ ಕಚೇರಿಗೆ ತೆರಳಿ ಸಹಿ ಪಡೆಯಬೇಕಿದೆ.

ಅಭಿವೃದ್ಧಿ ಕೆಲಸಗಳೇ ಇಲ್ಲ:

ಪ್ರಸಕ್ತ ಸಾಲಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವಳಿ ನಗರದ ಎಲ್ಲ ರಸ್ತೆಗಳು ಕೆಸರಿನ ಹೊಂಡಗಳಾಗಿ ಮಾರ್ಪಟ್ಟಿದ್ದು, ಅವುಗಳ ತಾತ್ಕಾಲಿಕ ದುರಸ್ತಿ ಕೂಡಾ ಆಗುತ್ತಿಲ್ಲ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಕನಿಷ್ಠ ಮಣ್ಣು ಕೂಡಾ ಹಾಕಲು ಬೇಕಾದ ಕ್ರಮ ಈಗಿರುವ ಪ್ರಭಾರ ಪೌರಾಯುಕ್ತರು ತೆಗೆದುಕೊಳ್ಳುತ್ತಿಲ್ಲ. ಇನ್ನು ಕಾಯಂ ಅಭಿವೃದ್ಧಿ ಕೆಲಸಗಳಂತೂ ಇಲ್ಲವೇ ಇಲ್ಲ.

ಪ್ರತಿಭಟನೆ ಎಚ್ಚರಿಕೆ: ಗದಗ-ಬೆಟಗೇರಿ ನಗರಸಭೆಯ ಆಡಳಿತ ಎಷ್ಟೊಂದು ಗಬ್ಬೆದ್ದು ಹೋಗಿದೆ ಎಂದರೆ, ನಗರಸಭೆಯಲ್ಲಿ ಕಳೆದೊಂದು ವರ್ಷದಿಂದ ಕೆರೆದಿರುವ ಟೆಂಡರ್ ಓಪನ್ ಮಾಡಿಲ್ಲ ಇದರಿಂದ ಟೆಂಡರ್ ಹಾಕಿರುವ ಗುತ್ತಿಗೆದಾರರಿಗೆ ಕೆಲಸ ಸಿಗುತ್ತಿಲ್ಲ, ಇನ್ನು ಓಪನ್ ಮಾಡಿರುವ ನಾಲ್ಕೈದು ಕೆಲಸ ಇಎಂಡಿ ಮರಳಿಸದೇ ಇರುವುದು ಸೇರಿದಂತೆ ನಗರಸಭೆಯಲ್ಲಿನ ವ್ಯವಸ್ಥೆ ಖಂಡಿಸಿ ನಗರಸಭೆಯ ಸಿವಿಲ್ ಗುತ್ತಿಗೆದಾರರು ಇತ್ತೀಚೆಗೆ ಹಿರಿಯ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿ15 ದಿನಗಳಲ್ಲಿ ಸಮಸ್ಯೆ ಸರಿಪಡಿಸದೇ ಇದ್ದಲ್ಲಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ತಿಳಿಸಿರುವುದು ನಗರಸಭೆಯ ಅವ್ಯವಸ್ಥೆಗೆ ಉತ್ತಮ ಸಾಕ್ಷಿಯಾಗಿದೆ.

ಪ್ರಭಾರ ಅಧಿಕಾರಿಗಳಿಂದ ಗದಗ ಬೆಟಗೇರಿ ಅವಳಿ ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಪ್ರಭಾರ ಅಧಿಕಾರಿಗಳು ಇಲ್ಲಿ ಕೇಳಿದರೆ ಅಲ್ಲಿ ಇದ್ದೇವೆ, ಮೂಲ ಇಲಾಖೆಯಲ್ಲಿ ಕೇಳಿದರೆ ಇಲ್ಲಿ ಇದ್ದೇವೆ ಎನ್ನುವ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಈ ಗಂಭೀರ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್.ಗೋವಿಂದಗೌಡ್ರ ಹೇಳಿದರು.

Share this article