ಕನ್ನಡಪ್ರಭ ವಾರ್ತೆ ಮಂಡ್ಯ
ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿ ಅವರಿಗೆ ನಗರಸಭೆ ಆಯುಕ್ತರ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಅವರಿಗೂ ಕಾರ್ಯಭಾರದ ಒತ್ತಡವಿರುವುದರಿಂದ ವಾರದಲ್ಲಿ ಒಮ್ಮೆಯೋ ಎರಡು ಬಾರಿಯೋ ಬಂದು ಹೋದರೆ ಅದೇ ಹೆಚ್ಚು. ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆ, ಪ್ರಮುಖ ಪ್ರಕರಣಗಳಲ್ಲಿ ತೀರ್ಮಾನಗಳನ್ನು ಕೈಗೊಳ್ಳುವುದು, ಕಚೇರಿಯ ಬಹುಮುಖ್ಯ ಕಡತಗಳನ್ನು ಓದಿ ಅರ್ಥೈಸಿಕೊಂಡು ಸಹಿ ಹಾಕುವುದು, ಕಚೇರಿಯ ಕೆಲಸ-ಕಾರ್ಯಗಳು ಸುಗಮವಾಗಿ ನಡೆಯಲು, ಆಸ್ತಿ ದಾಖಲೆಗಳ ವಿಚಾರವಾಗಿ ಜನರಿಗಿರುವ ಸಮಸ್ಯೆಗಳು, ಗೊಂದಲಗಳಿಗೆ ಪರಿಹಾರ ಸೂಚಿಸಲು ಹಾಗೂ ಸಾರ್ವಜನಿಕ ಕೆಲಸಗಳಿಗೆ ಸಂಬಂಧಿಸಿದಂತೆ ನೌಕರರು-ಸಿಬ್ಬಂದಿಗೆ ಮ ಮಾರ್ಗದರ್ಶನ ಮಾಡಲು ಆಯುಕ್ತರಿಲ್ಲದೆ ಎಲ್ಲವೂ ಅಸ್ತವ್ಯಸ್ತಗೊಂಡಿದೆ.
ಕೆಲಸದಲ್ಲಿ ಆಸಕ್ತಿ ಇಲ್ಲ:ಆಯುಕ್ತರಿಲ್ಲದಿರುವುದರಿಂದ ಕಚೇರಿ ಸಿಬ್ಬಂದಿಯೂ ಕೆಲಸದಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಸಾರ್ವಜನಿಕರು ಆಸ್ತಿ, ಖಾತೆ, ದಾಖಲೆಗಳಲ್ಲಿರುವ ವ್ಯತ್ಯಾಸಗಳು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಆಯುಕ್ತರನ್ನು ಹುಡುಕಿಕೊಂಡು ನಿತ್ಯವೂ ಕಚೇರಿಗೆ ಎಡತಾಕುತ್ತಿದ್ದರೂ ಆಯುಕ್ತರ ಕಚೇರಿ ಬಾಗಿಲು ಸದಾ ಮುಚ್ಚಿರುವುದನ್ನು ಕಂಡು ನಿರಾಸೆಯಿಂದ ವಾಪಸಾಗುತ್ತಿದ್ದಾರೆ.
ಕಚೇರಿ ಅಲೆಯುವುದು ಸಾಮಾನ್ಯ:
ಕಚೇರಿ ಅಧಿಕಾರಿಗಳು, ನೌಕರರು, ಸಿಬ್ಬಂದಿ ಕೂಡ ಜನರಿಗೆ ಆಯುಕ್ತರಿಲ್ಲದಿರುವ ನೆಪ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಆಸ್ತಿ ತೆರಿಗೆ ಪಾವತಿ ಸಂಬಂಧ ನಮೂನೆ-೩ ಪಡೆದುಕೊಳ್ಳಲು ಬರುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆಯುಕ್ತರಿಲ್ಲದೆ ಕಡತ ಮುಂದೆ ಸಾಗದಂತಾಆಗಿದೆ.
ಆಯುಕ್ತರಾಗಿದ್ದ ಆರ್.ಮಂಜುನಾಥ್ ವರ್ಗಾವಣೆಯಾದ ನಂತರದಲ್ಲಿ ಚನ್ನಪಟ್ಟಣದಲ್ಲಿ ಸಮುದಾಯ ಸಂಘಟನಾ ಅಧಿಕಾರಿಯಾಗಿದ್ದವರೊಬ್ಬರು ಮಂಡ್ಯದ ಆಯುಕ್ತರ ಹುದ್ದೆಗೆ ನೇಮಕಗೊಳ್ಳಲು ಮುಂದಾಗಿದ್ದರು. ಆದರೆ, ಆ ಶಿಫಾರಸನ್ನು ಜಿಲ್ಲಾಧಿಕಾರಿ ಡಾ.ಕುಮಾರ ತಳ್ಳಿಹಾಕಿದ್ದರು. ನಿಯಮಾನುಸಾರ ಸಮುದಾಯ ಸಂಘಟನಾಧಿಕಾರಿಯನ್ನು ಆಯುಕ್ತರ ಹುದ್ದೆಗೆ ನೇಮಿಸುವುದಕ್ಕೆ ನಿಯಮಗಳಲ್ಲಿ ಅವಕಾಶವಿರದಿದ್ದರಿಂದ ಅದನ್ನು ಜಿಲ್ಲಾಧಿಕಾರಿ ತಿರಸ್ಕರಿಸಿದ್ದರು.
ನಗರಸಭೆಯಲ್ಲಿ ಆಯುಕ್ತರಿಲ್ಲದಿರುವ ಕೊರತೆಯ ನಡುವೆ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ೩ ಮಂದಿ ಕಿರಿಯ ಅಭಿಯಂತರರಿರುವ ಕಡೆ ೧ ಹುದ್ದೆ ಭರ್ತಿ ಇದ್ದು, ೨ ಖಾಲಿ ಇದೆ. ೪ ಪ್ರಥಮ ದರ್ಜೆ ಸಹಾಯಕರ ಹುದ್ದೆಯಲ್ಲಿ
೩ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರ ಹುದ್ದೆಯಲ್ಲಿ ೨ ಹುದ್ದೆ ಭರ್ತಿ ಇದ್ದು, ೧ ಹುದ್ದೆ ಖಾಲಿ ಇದೆ. ೩ ಕಿರಿಯ ಆರೋಗ್ಯ ನಿರೀಕ್ಷಕ ಹುದ್ದೆಗಳಲ್ಲಿ ೨ ಹುದ್ದೆ ಖಾಲಿ ಇದ್ದು, ೧ ಹುದ್ದೆ ಭರ್ತಿಯಾಗಿದೆ. ಎಲೆಕ್ಟ್ರೀಷಿಯನ್ ದರ್ಜೆ ಒಂದು ಹುದ್ದೆ ಇದ್ದು ಅದೂ ಖಾಲಿ ಉಳಿದಿದೆ. ೩ ಸಮುದಾಯ ಸಂಘಟಕರ ಹುದ್ದೆಗಳಲ್ಲಿ ೨ ಖಾಲಿ ಉಳಿದಿದ್ದು, ೧ ಹುದ್ದೆ ಭರ್ತಿ ಇದೆ. ೧೪ ದ್ವಿತೀಯರ್ಜೆ ಸಹಾಯಕ ಹುದ್ದೆಗಳಲ್ಲಿ ೯ ಹುದ್ದೆಗಳು ಭರ್ತಿ ಇದ್ದರೆ ೫ ಹುದ್ದೆಗಳು ಖಾಲಿ ಬಿದ್ದಿವೆ. ಕರ ವಸೂಲಿಗಾರರು ೯ ಹುದ್ದೆಗಳಿದ್ದು, ಪ್ರಸ್ತುತ ೪ ಮಂದಿ ಕಾರ್ಯನಿರ್ವಹಿಸುತ್ತಿದ್ದು, ೫ ಹುದ್ದೆಗಳು ಖಾಲಿ ಉಳಿದಿವೆ.ರಾಜಕೀಯ ದ್ವೇಷದಿಂದ ವಿಳಂಬ
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಶಾಸಕ ಪಿ.ರವಿಕುಮಾರ್ ಅವರು ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ನಗರಸಭೆ ಕೆಲಸ-ಕಾರ್ಯಗಳು ಸುಗಮವಾಗಿ ನಡೆಯುವಂತೆ ಮಾಡುವುದಕ್ಕೆ ಕೂಡಲೇ ಆಯುಕ್ತರನ್ನು ಕ್ರಮ ವಹಿಸುವಂತೆ ನಗರದ ಜನರು ಒತ್ತಾಯಿಸಿದ್ದಾರೆ.