ಕನ್ನಡಪ್ರಭ ವಾರ್ತೆ ಬೇಲೂರು
ಈ ಬಗ್ಗೆ ಬಳಕೆದಾರರ ವೇದಿಕೆಯ ಅಣ್ಣೇಗೌಡ ಮಾತನಾಡಿ ಬೇಲೂರು-ಬಿಕ್ಕೋಡು ರಸ್ತೆಯು ಸಂಪೂರ್ಣ ಹಾಳಾಗಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸಂಘ ಸಂಸ್ಥೆಗಳ ಪ್ರತಿಭಟನೆ ಹಾಗೂ ಪತ್ರಿಕೆಗಳ ಸುದ್ದಿಗೆ ಎಚ್ಚೆತ್ತುಗೊಂಡ ಲೋಕೋಪಯೋಗಿ ಇಲಾಖೆಯವರು ತಾತ್ಕಾಲಿಕ ಗುಂಡಿ ಮುಚ್ಚುವ ಕಾಮಗಾರಿಗೆ ಮುಂದಾಗಿದ್ದರು. ಆದರೆ ಗುಂಡಿ ಬಿದ್ದ ರಸ್ತೆಗೆ ತೇಪೆ ಹಾಕುತ್ತಿರುವ ಕಾಮಗಾರಿ ಗುಣಮಟ್ಟವಾಗಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಹಾಗಾಗಿ ಗ್ರಾಮಸ್ಥರೊಂದಿಗೆ ಬಂದು ರಸ್ತೆ ಕಾಮಗಾರಿ ಪರಿಶೀಲಿಸಿದಾಗ ಕೆಳಗೆ ಜೆಲ್ಲಿ ಹಾಕಿ ಮೇಲೆ ಡಾಂಬರು ಸುರಿದಿದ್ದಾರೆ. ಕಾಲಲ್ಲಿ ಕೆರೆದರೆ ಡಾಂಬರು ಹಾಗೂ ಜಲ್ಲಿ ಕಲ್ಲುಗಳು ಕಿತ್ತು ಬರುತ್ತಿವೆ. ಕಳಪೆ ಕಾಮಗಾರಿಯ ಬಗ್ಗೆ ಪಿಡಬ್ಲ್ಯೂಡಿ ಎಇಇಗೆ ಫೋನ್ ಮಾಡಿ ಕೇಳಿದರೆ ನಾನು ಊರಿನಲ್ಲಿ ಇಲ್ಲ, ನಮ್ಮ ಸೂಪರ್ವೈಸರ್ ಸ್ಥಳದಲ್ಲಿದ್ದು ಕಾಮಗಾರಿ ಮಾಡಿಸುತ್ತಿದ್ದಾರೆ ಎನ್ನುತ್ತಾರೆ. ಆದರೆ ಇಲ್ಲಿ ಮೇಲ್ವಿಚಾರಕ ಗುತ್ತಿಗೆದಾರನ ಜೊತೆ ಶಾಮಿಲಾಗಿದ್ದಾರೆ. ಇಂತಹ ಅಧಿಕಾರಿಗಳಿಂದ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಕಿಡಿಕಾರಿದರು.
ರಸ್ತೆ ಅಭಿವೃದ್ಧಿಗೆ ಕೋಟಿ ಗಟ್ಟಲೆ ಹಣವನ್ನು ಸರ್ಕಾರ ಖರ್ಚು ಮಾಡುತ್ತಿದೆ. ಅದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಕಳಪೆ ಕಾಮಗಾರಿಗೆ ಮುಂದಾಗಿದ್ದಾರೆ.ಗಿಲ್ಲಾ ಮಟ್ಟದ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಕೂಡಲೇ ಎಚ್ಚೆತ್ತುಕೊಂಡು ಗುಣಮಟ್ಟದ ಗುಂಡಿ ಮುಚ್ಚುವ ರಸ್ತೆ ಕಾಮಗಾರಿ ಮಾಡಿಸಬೇಕೆಂದು ಒತ್ತಾಯಿಸಿದರು.ಕೆಡಿಪಿ ಸದಸ್ಯ ಬಿಕ್ಕೋಡು ಚೇತನ್ ಮಾತನಾಡಿ ಶಾಸಕರು ಬೇಲೂರು ಬಿಕ್ಕೋಡು ಮಾರ್ಗದ ಗುಂಡಿ ಬಿದ್ದ ರಸ್ತೆಯ ಕಾಮಗಾರಿಯನ್ನು ತಮ್ಮ ಹಿಂಬಾಲಕರಿಗೆ ನೀಡಿದ್ದಾರೆ. ಭ್ರಷ್ಟಾಚಾರ ರಹಿತ ರಾಜಕಾರಣಿ ಎಂದು ಪೋಸು ಕೊಡುವ ಶಾಸಕರು ತಮ್ಮ ಕಣ್ಣೆದುರು ರಸ್ತೆ ತೇಪೆ ಕಳಪೆ ಕಾಮಗಾರಿ ನಡೆಯುತ್ತಿದ್ದರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಈ ಬಗ್ಗೆ ಪಿಡಬ್ಲ್ಯೂಡಿ ಮೇಲ್ವಿಚಾರಕ ಸಿದ್ದೇಶ್ ಅವರನ್ನು ಕೇಳಿದರೆ ಹೊಳೆನರಸೀಪುರದ ಗುತ್ತಿಗೆದಾರನತ್ತ ಬೊಟ್ಟು ಮಾಡುತ್ತಾರೆ. ಹಾಗಾಗಿ ರಾಜ್ಯ ಕಳಪೆ ಕಾಮಗಾರಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷರನ್ನಾಗಿ ಶಾಸಕ ಎಚ್ ಕೆ ಸುರೇಶ್ ಅವರನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿ ಎಂದು ವ್ಯಂಗ್ಯವಾಡಿದರು.