ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೇಂದ್ರ ಗ್ರಂಥಾಲಯ ವೈದ್ಯಕೀಯ ಶ್ರೇಷ್ಠತೆಯನ್ನು ಉತ್ತೇಜಿಸುವ ಪ್ರಮುಖ ಶಕ್ತಿ ಕೇಂದ್ರವಾಗಿದೆ. ಭವಿಷ್ಯದ ವೈದ್ಯಕೀಯ ವೃತ್ತಿಪರ ಜ್ಞಾನ ಮತ್ತು ಕೌಶಲ್ಯಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ವಿಶಾಲ ಸಂಪನ್ಮೂಲ ಸಂಗ್ರಹ, ಆಧುನಿಕ ಮೂಲ ಸೌಕರ್ಯ ಮತ್ತು ವಿದ್ಯಾರ್ಥಿ ಸ್ನೇಹಿ ವಾತಾವರಣದಿಂದ ಮಿಮ್ಸ್ ಗ್ರಂಥಾಲಯ ಕ್ಯಾಂಪಸ್ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದುಬಂದಿದೆ.
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೇಂದ್ರ ಗ್ರಂಥಾಲಯ ವೈದ್ಯಕೀಯ ಶ್ರೇಷ್ಠತೆಯನ್ನು ಉತ್ತೇಜಿಸುವ ಪ್ರಮುಖ ಶಕ್ತಿ ಕೇಂದ್ರವಾಗಿದೆ. ಭವಿಷ್ಯದ ವೈದ್ಯಕೀಯ ವೃತ್ತಿಪರ ಜ್ಞಾನ ಮತ್ತು ಕೌಶಲ್ಯಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ವಿಶಾಲ ಸಂಪನ್ಮೂಲ ಸಂಗ್ರಹ, ಆಧುನಿಕ ಮೂಲ ಸೌಕರ್ಯ ಮತ್ತು ವಿದ್ಯಾರ್ಥಿ ಸ್ನೇಹಿ ವಾತಾವರಣದಿಂದ ಮಿಮ್ಸ್ ಗ್ರಂಥಾಲಯ ಕ್ಯಾಂಪಸ್ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದುಬಂದಿದೆ.
ಈ ಗ್ರಂಥಾಲಯವು ವೈದ್ಯಕೀಯ ಪುಸ್ತಕಗಳು, ಉಲ್ಲೇಖ ಗ್ರಂಥಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜರ್ನಲ್‌ಗಳು ಹಾಗೂ ಡಿಜಿಟಲ್ ಸಂಪನ್ಮೂಲಗಳ ವಿಶಾಲ ಸಂಗ್ರಹವನ್ನು ಹೊಂದಿದೆ. ಮೂಲಭೂತ ವಿಜ್ಞಾನಗಳಿಂದ ಹಿಡಿದು ಉನ್ನತ ಮಟ್ಟದ ಕ್ಲಿನಿಕಲ್ ಅಧ್ಯಯನಗಳವರೆಗೆ ವೈದ್ಯಕೀಯ ಶಿಕ್ಷಣದ ಬದಲಾಗುತಿರುವ ಅಗತ್ಯಗಳನ್ನು ಪೂರೈಸುವಂತೆ ಈ ಸಂಗ್ರಹವನ್ನು ಜಾಗರೂಕತೆಯಿಂದ ಆಯ್ಕೆ ಮಾಡಲಾಗಿದೆ.
೨೦೦೬ರಲ್ಲಿ ಗ್ರಂಥಾಲಯ ಆರಂಭ:
೨೦೦೬ರಲ್ಲಿ ಸಂಪನ್ಮೂಲ ಕೇಂದ್ರವಾಗಿ ಆರಂಭವಾದ ಈ ಗ್ರಂಥಾಲಯವು ಇಂದು ಹೈಬ್ರಿಡ್ ಜ್ಞಾನ ಪರಿಸರವಾಗಿ ಅಭಿವೃದ್ಧಿ ಹೊಂದಿದೆ. ಪುಸ್ತಕ ಸಂಗ್ರಹದ ಮಿತಿಯನ್ನು ಮೀರಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ. ಗ್ರಂಥಾಲಯವು ಎಂಬಿಬಿಎಸ್., ಪಿ.ಜಿ.(ಎಂಡಿ/ಎಂಎಸ್), ಬಿಎಸ್ಸಿ ನರ್ಸಿಂಗ್, ಬಿ.ಎಸ್ಸಿ ಆಲೈಡ್ ಹೆಲ್ತ್ ಸೈನ್ಸ್ ಮತ್ತು ಪ್ಯಾರಾಮೆಡಿಕಲ್ ಕೋರ್ಸಗಳ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗದವರ ಜ್ಞಾನ ಬೆಳವಣಿಗೆಗೂ ಸಹಕಾರಿಯಾಗಿದೆ. ಈ ಗ್ರಂಥಾಲಯದಲ್ಲಿ ೮೩೫೬ ಇ-ನಿಯತಕಾಲಿಕಗಳಿವೆ. ವೈದ್ಯಕೀಯ ಪುಸ್ತಕಗಳು ೧೫೭೫೮ ಮತ್ತು ನರ್ಸಿಂಗ್ ಸಂಬಂಧಿಸಿದ ೨೬೦೦ ಪುಸ್ತಕಗಳಿವೆ.
ಅಧ್ಯಯನಕ್ಕೆ ಪೂರಕ ವಾತಾವರಣ:
ಗ್ರಂಥಾಲಯವು ಶಾಂತ ಮತ್ತು ಶಿಸ್ತುಬದ್ಧ ವಾತಾರಣದೊಂದಿಗೆ ಏಕಾಗ್ರತೆಯ ಅಧ್ಯಯನಕ್ಕೆ ಅನುಕೂಲವಾಗಿದೆ. ವಿಶಾಲವಾದ ಓದುವ ಕೊಠಡಿಗಳು ವಿಶಾಲವಾಗಿದ್ದು, ಉತ್ತಮ ಬೆಳಕು, ಆರಾಮದಾಯಕ ಆಸನ ವ್ಯವಸ್ಥೆಗಳಿವೆ. ವಿದ್ಯಾರ್ಥಿಗಳು ದೀರ್ಘಕಾಲ ಅಧ್ಯಯನಕ್ಕೆ ಪೂರಕ ವ್ಯವಸ್ಥೆ ಇದೆ. ಗುಂಪು ಚರ್ಚೆಗೂ ಪ್ರತ್ಯೇಕ ವಿಭಾಗಗಳಿರುವುದು ವಿದ್ಯಾರ್ಥಿಗಳ ಆಯ್ಕೆಗೆ ಪೂರಕವಾಗಿವೆ. ಗ್ರಂಥಾಲಯ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನು ತೆಗೆದುಕೊಡುವಲ್ಲಿ ನೆರವಿಗೆ ಬರುತ್ತಾರೆ. ಅವರ ನೆರವಿನಿಂದ ಅಗತ್ಯ ಪುಸ್ತಕಗಳನ್ನು ಪಡೆದು ವಿಶೇಷ ಸಂಶೋಧನೆ, ಶೈಕ್ಷಣಿಕ ಯೋಜನೆಗಳಿಗೆ ಡಿಜಿಟಲ್ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ.
ಪರೀಕ್ಷೆ ವೇಳೆ ೨೪ ಗಂಟೆ ಕಾರ್ಯನಿರ್ವಹಣೆ:
ಪರೀಕ್ಷಾ ಸಮಯದಲ್ಲಿ ಗ್ರಂಥಾಲಯವು ದಿನದ ೨೪ ಗಂಟೆಗಳು ಬಾಗಿಲು ತೆರೆದಿರುತ್ತದೆ. ಓದಲು ಬರುವ ವಿದ್ಯಾರ್ಥಿಗಳಿಗೆ ಭದ್ರತೆಯನ್ನೂ ಒದಗಿಸಲಾಗಿದ್ದು, ಏಕಾಗ್ರತೆಯ ಅಧ್ಯಯನ ಕೇಂದ್ರವಾಗಿಯೂ ರೂಪುಗೊಂಡಿದೆ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅನುತ್ತಿರ್ಣರಾಗುವುದನ್ನು ತಪ್ಪಿಸಲು ಗ್ರಂಥಾಲಯದಲ್ಲಿ ಬಹು ಅಯ್ಕೆ ಮಾದರಿ ಪ್ರಶ್ನೆ ಪುಸ್ತಕಗಳ ವಿಭಾಗವನ್ನು ರಾಜ್ಯದಲ್ಲಿ ಪ್ರಪ್ರಥಮವಾಗಿ ಕೇಂದ್ರ ಗ್ರಂಥಾಲಯದಲ್ಲಿ ಸ್ಥಾಪಿಸಲಾಗಿರುವುದು ಮಿಮ್ಸ್ ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದು ಮುಖ್ಯ ಗ್ರಂಥಪಾಲಕ ಡಾ.ಅನಂತನಾಗ್ ಕನ್ನಡಪ್ರಭ ಪತ್ರಿಕೆಗೆ ತಿಳಿಸಿದರು.
ಹೆಲಿನೆಟ್ ಕನ್ಸೋರ್ಟಿಯಂ ಸಂಪರ್ಕ ಸೌಲಭ್ಯ:
ಓದುಗರ ಸಮಯ ಉಳಿಸುವ ಉದ್ದೇಶದಿಂದ ಮಿಮ್ಸ್ ಗ್ರಂಥಾಲಯವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಹೆಲಿನೆಟ್ ಕನ್ಸೋರ್ಟಿಯಂ ಸಂಪರ್ಕ ಪಡೆದುಕೊಳ್ಳಲಾಗಿದೆ, ಈ ಕನ್ಸೋರ್ಟಿಯಂ ಮೂಲಕ ಇ-ಜರ್ನಲ್‌ಗಳು, ಇ-ಪುಸ್ತಕಗಳು ಮತ್ತು ವೈದ್ಯಕೀಯ ವಿವಿಧ ಡೇಟಾಬೇಸ್‌ಗಳು, ಆಪ್ ಟು ಡೇಟ್ ಆ್ಯಪ್, ಪ್ಲೇಜರಿಸಮ್ ಸಾಫ್ಟ್‌ವೇರ್, ಡ್ರಗ್ ಮಾಹಿತಿಗಳು, ಡೇಸರ್‌ಟೇಶನ್‌ಗಳು, ಪ್ರಶ್ನೆಪತ್ರಿಕೆಗಳನ್ನು ಆನ್‌ಲೈನ್ ಮೂಲಕ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗದವರು ಮೊಬೈಲ್, ಟ್ಯಾಬ್, ಲ್ಯಾಪ್ ಟಾಪ್ ಮೂಲಕ ಯಾವುದೇ ಸ್ಥಳ, ಸಮಯದಲ್ಲಾದರೂ ಪಡೆದುಕೊಳ್ಳಬಹುದು.
ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಕೃತಿಚೌರ್ಯದ ಬಗ್ಗೆ ಅರಿವು ಮತ್ತು ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳ ಪ್ರಬಂಧ, ಲೇಖನಗಳನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸುವ ಮುಂಚೆ, ಗ್ರಂಥಾಲಯದಲ್ಲಿ ಕೃತಿ ಚೌರ್ಯ ಆಗಿರುವ ಬಗ್ಗೆ ಪರಿಶೀಲಿಸಲಾಗುತ್ತದೆ, ಪರಿಶೀಲಿಸಿದ ನಂತರ ಕೃತಿಚೌರ್ಯದ ಬಗ್ಗೆ ಪ್ರಮಾಣ ಪತ್ರ ನೀಡಲಾಗುತ್ತದೆ.
ಬೆಸ್ಟ್ ಲೈಬ್ರರಿ ಯೂಸರ್ ಅವಾರ್ಡ್:
ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತೊಡಸಿಕೊಳ್ಳುವಿಕೆಯನ್ನು ಉತ್ತೇಜಿಸಲು ಮಿಮ್ಸ್ ಗ್ರಂಥಾಲಯವು ಬೆಸ್ಟ್ ಲೈಬ್ರರಿ ಯೂಸರ್ ಅವಾರ್ಡ್‌ನ್ನು ಪ್ರಾರಂಭಿಸಿದೆ. ಗ್ರಂಥಾಲಯವನ್ನು ಪರಿಣಾಮಕಾರಿಯಾಗಿ ಬಳಸುವ ವಿದ್ಯಾರ್ಥಿಗಳನ್ನು ಗುರುತಿಸಿ ೨೦೨೬ನೇ ಸಾಲಿನಿಂದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ, ಈ ಮೂಲಕ ಸ್ಪರ್ಧಾತ್ಮಕ ಅಧ್ಯಯನ ಸಂಸ್ಕೃತಿಯನ್ನು ಉತ್ತೇಜಿಸಲಾಗುತ್ತಿದೆ.
ಮಿಮ್ಸ್ ಕೇಂದ್ರ ಗ್ರಂಥಾಲಯ ಜಾಗತಿಕ ಜ್ಞಾನಕ್ಕೆ ಪ್ರವೇಶ ಒದಗಿಸುವ ಮೂಲಕ ವಿದ್ಯಾರ್ಥಿಗಳು ಹೆಚ್ಚು ಸಾಹಿತ್ಯ ವಿಮರ್ಶೆಗಳು ಮತ್ತು ಸಂಶೋಧನಾ ಅಧ್ಯಯನಗಳನ್ನು ನಡೆಸಲು ನೆರವಾಗಿದೆ. ಕ್ಯಾಂಪಸ್ ಹೊರಗೆ ಮತ್ತು ಒಳಗೂ ಇದರ ಉಪಯೋಗ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ನೋಂದಣಿ ಮೂಲಕ ವ್ಯವಸ್ಥೆ ಮಾಡಿಕೊಡಲಾಗಿದೆ.
-ಡಾ.ಪಿ.ನರಸಿಂಹಸ್ವಾಮಿ, ನಿರ್ದೇಶಕರು, ಮಿಮ್ಸ್, ಮಂಡ್ಯ
--------------------------------
ವೈದ್ಯಕೀಯ ಶಿಕ್ಷಣ ನಿರಂತರವಾಗಿ ಬದಲಾಗುತ್ತಿರುವ ಈ ಕಾಲದಲ್ಲಿ ಮಿಮ್ಸ್ ಗ್ರಂಥಾಲಯವು ತನ್ನ ಸಂಪನ್ಮೂಲಗಳನ್ನು ವಿಸ್ತರಿಸಿ ಮತ್ತು ಸುಧಾರಿಸಿ ಮುಂದುವರೆಯುತ್ತಿದೆ. ಸಾಮರ್ಥ್ಯವಂತ ಮತ್ತು ಆರೋಗ್ಯ ಸೇವಾ ವೃತ್ತಿಪರರನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
- ಡಾ.ಕೆ.ಅನಂತನಾಗ್, ಮುಖ್ಯ ಗ್ರಂಥಪಾಲಕರು, ಮಿಮ್ಸ್, ಮಂಡ್ಯ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.