ಜಿಲ್ಲಾ ಮಟ್ಟದ ೫೩೮ನೇ ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿದ ಶಾಸಕ
ಕನ್ನಡಪ್ರಭ ವಾರ್ತೆ ಮುಂಡಗೋಡಯಾವುದೇ ಒಬ್ಬ ದಾರ್ಶನಿಕನ ಶಕ್ತಿ ಕೇವಲ ಒಂದು ಜಾತಿ ಮತ್ತು ಪರಂಪರೆಗೆ ಸೀಮಿತವಾಗಿರುವುದಿಲ್ಲ. ಬದಲಾಗಿ ಇಡೀ ಮಾನವ ಕುಲಕ್ಕೆ ಆದರ್ಶವಾಗಿರುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಶನಿವಾರ ಇಲ್ಲಿಯ ಮಿನಿವಿಧಾನಸೌಧ ಎದುರಿನ ಕನಕ ಪೀಠದ ಆವರಣದಲ್ಲಿ ಜಿಲ್ಲಾ ಮಟ್ಟದ ೫೩೮ನೇ ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.ಕನಕದಾಸರು, ಪುರಂದರ ದಾಸರು, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಸೇರಿದಂತೆ ಇವರನ್ನೆಲ್ಲ ಒಂದು ಜಾತಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಮಾನವೀಯತೆಗೆ ಶ್ರೇಷ್ಟತೆ ತಂದು ಕೊಟ್ಟವರು. ಅಂತಹವರ ಜಯಂತ್ಯುತ್ಸವವನ್ನು ಎಲ್ಲ ಸಮಾಜದವರು ಸೇರಿ ಗೌರವದಿಂದ ಆಚರಿಸಬೇಕು.ಎಲ್ಲ ಜಾತಿ ಧರ್ಮದ ಜನರು ಒಟ್ಟಾಗಿರುವಲ್ಲಿ ಮುಂಡಗೋಡ ತಾಲೂಕು ಆದರ್ಶವಾಗಿದೆ. ಜಾತಿ ಧರ್ಮಕ್ಕೂ ಮೀರಿ ವೈವಿಧ್ಯತೆಯಲ್ಲಿ ಏಕತೆಯನ್ನು ಇಲ್ಲಿ ಕಾಣಬಹುದು, ಮುಸ್ಲಿಂ, ಕ್ರಿಶ್ಚಿಯನ್ ಎನ್ನದೇ ಸಿದ್ದಿ, ಲಂಬಾಣಿ, ಗೌಳಿ, ಬೋವಿ, ಟಿಬೇಟಿಯಯನ್ ಹೀಗೆ ಎಲ್ಲ ಸಮುದಾಯದ ಜನಾಂಗವನ್ನು ಹೊಂದಿರುವ ಮುಂಡಗೋಡ ಸರ್ವ ಜನಾಂಗದ ಶಾಂತಿಯ ತೋಟದಂತಿದೆ. ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲು ಎಂಬ ಮನಸ್ಥಿತಿಯನ್ನು ತಾಲೂಕಿನ ಜನ ಹೊಂದಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ಸಮುದಾಯಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗಿದ್ದು, ಕುರುಬ ಸಮುದಾಯದ ಏಳ್ಗೆಗಾಗಿ ಕೂಡ ಸಾಕಷ್ಟು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ಶಿರಸಿ ಉಪವಿಭಾಧಿಕಾರಿ ಕೆ.ವಿ. ಕಾವ್ಯರಾಣಿ, ಮುಂಡಗೋಡ ತಹಸೀಲ್ದಾರ ಶಂಕರ ಗೌಡ, ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ರಾಥೋಡ, ಪಪಂ ಮುಖ್ಯಾಧಿಕಾರಿ ಸಂತೋಷಕುಮಾರ ಹಾಲಕಲ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉತ್ತರಕನ್ನಡ ಜಿಲ್ಲಾ ಸಹಾಯಕ ನಿರ್ದೇಶಕರಾದ ಮಂಗಳಾ ನಾಯ್ಕ, ಪಪಂ ಸದಸ್ಯ ಶ್ರೀಕಾಂತ ಸಾನು, ಅಶೋಕ ಚಲವಾದಿ, ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಸುಭಾಸ ಡೋರಿ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಶಿವಾನಂದ ಕುರುಬರ, ದುರೀಣ ರಾಜು ಗುಬ್ಬಕ್ಕನವರ, ಶಿವಾನಂದ ದೊಡ್ಡಮನಿ, ಯಲ್ಲಪ್ಪ ಕುರುಬರ, ಮಂಜುಕೋಣಕೇರಿ, ಶ್ರೀಕಾಂತ ಪಾಟೀಲ, ಪೀರಪ್ಪ ಸಾಗರ, ನಾಗರಾಜ ಉಪಾದ್ಯಾಯ, ಬಸವರಾಜ ಠಣಕೆದಾರ, ಗುಡದಯ್ಯ ಕಳಸಗೇರಿ, ಸುರೇಶ ಕುರುಬರ, ಜ್ಞಾನದೇವ ಗುಡಿಯಾಳ ಮುಂತಾದವರು ಉಪಸ್ಥಿತರಿದ್ದರು.ಮುಂಡಗೋಡ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಕನಕದಾಸರ ಕುರಿತು ಉಪನ್ಯಾಸ ನೀಡಿದರು. ತಹಸೀಲ್ದಾರ ಶಂಕರ ಗೌಡಿ ಸ್ವಾಗತಿಸಿದರು. ಕೆ.ಕೆ. ಕುರುವಿನಕೊಪ್ಪ ನಿರೂಪಿಸಿ ವಂದಿಸಿದರು.
ಮೆರವಣಿಗೆ:ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿಮಂದಿರದಿಂದ ಭಕ್ತ ಕನಕದಾಸರ ಭಾವಚಿತ್ರ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಬಳಿಕ ಕನಕ ಪೀಠ ಆವರಣ ಪ್ರವೇಶಿಸಿತು. ಈ ಸಂದರ್ಭದಲ್ಲಿ ಕನಕದಾಸರ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಲಾಯಿತು.