ತಿಂಗಳಲ್ಲೇ ಪೀಠಾಧಿಪತಿ ಘೋಷಣೆ ಆಗ್ಬೇಕು: ಅಣಬೇರು ರಾಜಣ್ಣ

KannadaprabhaNewsNetwork | Published : Aug 5, 2024 12:34 AM

ಸಾರಾಂಶ

ಸಿರಿಗೆರೆ ತರಳಬಾಳು ಬೃಹನ್ಮಠಕ್ಕೆ ಇನ್ನೊಂದು ತಿಂಗಳಲ್ಲೇ ಮುಂದಿನ ಪೀಠಾಧಿಪತಿ ಘೋಷಣೆ ಮಾಡಬೇಕು. ಏಕವ್ಯಕ್ತಿ ಡೀಡ್‌ ರದ್ದುಪಡಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಶ್ರೀ ಮಠದ ಸ್ವಾಮೀಜಿಗೆ ಸಾದು ಸದ್ಧರ್ಮ ಲಿಂಗಾಯತ ಸಮಾಜದ ಹಿರಿಯ ಮುಖಂಡ, ಅಪೂರ್ವ ಹೋಟೆಲ್‌ಗಳ ಸಮೂಹ ಅಧ್ಯಕ್ಷ ಅಣಬೇರು ರಾಜಣ್ಣ ಎಚ್ಚರಿಸಿದರು.

- ಲಿಂಗೈಕ್ಯ ಶ್ರೀಗಳ ಮೂಲ ಬೈಲಾ ಜಾರಿಗೊಳ್ಳಲಿ: ಸಾದು ಸದ್ಧರ್ಮ ಲಿಂಗಾಯತ ಸಮಾಜ ಆಗ್ರಹ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಸಿರಿಗೆರೆ ತರಳಬಾಳು ಬೃಹನ್ಮಠಕ್ಕೆ ಇನ್ನೊಂದು ತಿಂಗಳಲ್ಲೇ ಮುಂದಿನ ಪೀಠಾಧಿಪತಿ ಘೋಷಣೆ ಮಾಡಬೇಕು. ಏಕವ್ಯಕ್ತಿ ಡೀಡ್‌ ರದ್ದುಪಡಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಶ್ರೀ ಮಠದ ಸ್ವಾಮೀಜಿಗೆ ಸಾದು ಸದ್ಧರ್ಮ ಲಿಂಗಾಯತ ಸಮಾಜದ ಹಿರಿಯ ಮುಖಂಡ, ಅಪೂರ್ವ ಹೋಟೆಲ್‌ಗಳ ಸಮೂಹ ಅಧ್ಯಕ್ಷ ಅಣಬೇರು ರಾಜಣ್ಣ ಎಚ್ಚರಿಸಿದರು.

ನಗರದ ಅಪೂರ್ವ ರೆಸಾರ್ಟ್‌ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾಜದ ಹಾಲಿ-ಮಾಜಿ ಜನಪ್ರತಿನಿಧಿಗಳು, ಮುಖಂಡರು, ಸಮಾಜ ಬಾಂಧ‍ವರ ಸಭೆ ನೇತೃತ್ವ ವಹಿಸಿ ಮಾತನಾಡಿದ ಅವರು, ಶ್ರೀಮಠ ಹಾಗೂ ಗುರು ಪರಂಪರೆಯ ಮೇಲಿನ ಅಭಿಮಾನ, ಗೌರವದಿಂದ ಇಲ್ಲಿವರೆಗೂ ಸಮಾಧಾನದಿಂದ ಇದ್ದೆವು. ಈಗ ಹೋರಾಟ ಅನಿವಾರ್ಯವೂ ಆಗಿದೆ ಎಂದರು.

ಶ್ರೀ ಮಠದ ಬೆಳವಣಿಗೆ, ಶ್ರೀಗಳ ನಡೆ ಬಗ್ಗೆ ಪ್ರಶ್ನಿಸಿದರೆ ರೌಡಿಗಳು ಅಡ್ಡಿಪಡಿಸುತ್ತಾರೆ. ಪ್ರಶ್ನಿಸಿದವರ ವಿರುದ್ಧವೇ ಸುಳ್ಳು ದೂರು ದಾಖಲಿಸಲಾಗುತ್ತಿದೆ. ಇದು ಗುರುಗಳಾದವರು ಮಾಡುವ ಕೆಲಸವೇ? ಸಿರಿಗೆರೆ ಬೃಹನ್ಮಠ, ಸಾಣೇಹಳ್ಳಿ ಶ್ರೀಮಠ, ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಹರಕಟ್ಟಿ ಮಠದ ಸ್ವಾಮೀಜಿಗಳು ಪೀಠ ತ್ಯಾಗ ಮಾಡಬೇಕು. ಸಮಾಜ ಹಾಗೂ ಶ್ರೀಮಠ, ಗುರು ಸ್ಥಾನದ ಗೌರವ ಹಾಳಾಗದಂತೆ ತಡೆಯುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದರು.

ನಮ್ಮ ಗುರಿ, ಹೋರಾಟ ಸ್ಪಷ್ಟವಾಗಿದೆ. ಏಕವ್ಯಕ್ತಿ ಡೀಡ್ ಸಹ ನ್ಯಾಯಾಲಯ ಮೂಲಕವೇ ರದ್ದಾಗಬೇಕು. ಹೊಸದಾಗಿ ಮೂರು ಮಠಗಳಿಗೆ ಉತ್ತರಾಧಿಕಾರಿಗಳ ಆಯ್ಕೆಯಾಗಬೇಕು. ಇಂದಿಗೂ ಲಿಂಗೈಕ್ಯ ಶ್ರೀಗಳ ಸಮಾಧಿ ಅನಾಥವಾಗಿವೆ. ಸಮಾಜ ಶೋಚನೀಯ ಪರಿಸ್ಥಿತಿಗೆ ತಲುಪಿದೆ. ಇದಕ್ಕೆಲ್ಲಾ ಯಾರು ಕಾರಣ? ಇಡೀ ಸಮಾಜ ಇಂತಹ ಹೋರಾಟಕ್ಕೆ ಕೈ ಜೋಡಿಸುತ್ತದೆಂದರೆ ನಾವೆಲ್ಲರೂ ಮುಂದುವರಿಯುತ್ತೇವೆ ಎಂದು ತಿಳಿಸಿದರು.

ಬೃಹತ್‌ ಪಾದಯಾತ್ರೆ:

ಶ್ರೀ ಮಠದ ಶಿಕ್ಷಣ ಸಂಸ್ಥೆಗಳು, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ಶಾಲಾ-ಕಾಲೇಜು ಮುಚ್ಚಿವೆ. ಮಠಕ್ಕೆ ಹೋದ ನಮಗೆ ಒಂದು ತುತ್ತು ಊಟ ಹಾಕದ ಸ್ಥಿತಿ ಇದೆ. ಬಸವಣ್ಣನ ವಚನಗಳನ್ನು ಹೇಳುವ ಸ್ವಾಮೀಜಿ ಎಷ್ಟರಮಟ್ಟಿಗೆ ಅವುಗಳನ್ನು ಅಳವಡಿಸಿಕೊಂಡಿದ್ದಾರೆ ಎಂಬುದನ್ನೂ ಕೇಳಬೇಕಾದ ಸ್ಥಿತಿ ಇದೆ. ಸಮಾಜ ಬಾಂಧ‍ವರ ಸಮ್ಮುಖದಲ್ಲೇ ನೂತನ ಉತ್ತರಾಧಿಕಾರಿಗಳ ಘೋಷಣೆ ಮಾಡಬೇಕು. ಏಕವ್ಯಕ್ತಿ ಡೀಡ್ ರದ್ದಾಗಬೇಕು. ಈ ಬಗ್ಗೆ ಸಾಸಲು ಕ್ರಾಸ್‌ನಿಂದ ಶೀಘ್ರವೇ ಶ್ರೀ ಮಠದವರೆಗೂ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳುವ ಆಲೋಚನೆ ಸಹ ಇದೆ ಎಂದು ಅಣಬೇರು ರಾಜಣ್ಣ ಹೇಳಿದರು.

ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಸಮಾಜದಲ್ಲಿ ಎಲ್ಲಿಯೇ ತಪ್ಪಾದರೂ ಕಿವಿ ಹಿಂಡಿ, ತಿದ್ದುವ ಶಕ್ತಿಯು ಅಭಾವೀಮ ರಾಷ್ಟ್ರೀಯ ಅಧ್ಯಕ್ಷರು, ಹಿರಿಯರೂ ಆದ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಇದೆ. ಈ ಸಭೆಯಲ್ಲಿ ಸಿರಿಗೆರೆ ಮಠಕ್ಕೆ ಹೊಸ ಪೀಠಾಧಿಪತಿ ಆಯ್ಕೆ, ಏಕವ್ಯಕ್ತಿ ಡೀಡ್ ರದ್ದು, ಶ್ರೀಮಠ ಮತ್ತು ಸಮಾಜದ ಗತವೈಭವ ಮರಳಿ ತರುವ ಕೆಲಸಕ್ಕೆ ಮುನ್ನುಡಿ ಬರೆದಿದ್ದೇವೆ. ಇದೇ ಹೋರಾಟದ ಕಿಚ್ಚು ಕಡೆಯವರೆಗೂ ಇರಲಿ. ಸಭೆಗೆ ಹೋಗದಂತೆ ನನಗೂ ಸಾಕಷ್ಟು ಕರೆಗಳು ಬಂದವು. ಆದರೆ, ಶ್ರೀಮಠ, ಗುರು ಸ್ಥಾನ, ಸಮಾಜದ ಮೇಲಿನ ಗೌರವಕ್ಕಾಗಿ ಬಂದಿದ್ದೇವೆ ಎಂದರು.

ನಾವು ಧ್ವನಿ ಎತ್ತದಿದ್ದರೆ ಮಠ ಹಾಳಾಗುವ ಆತಂಕ ಇದೆ. ಸುತ್ತೂರು ಮಠಕ್ಕೆ ಹೋದರೆ ಅಲ್ಲಿ ಗುರುಗಳು ಮರಿಗಳನ್ನು ಬಿಟ್ಟಿದ್ದಾರೆ. ಚಿತ್ರದುರ್ಗ ಮಾದಾರ ಚನ್ನಯ್ಯ ಪೀಠದ ಸ್ವಾಮೀಜಿ ಸಹ ಮಠ ಬಿಟ್ಟಿದ್ದಾರೆ. ಹೀಗೆ ಮರಿ, ಉತ್ತರಾಧಿಕಾರಿ ಬಿಡುವುದಕ್ಕೆ ಏನು ಸಮಸ್ಯೆ ಎಂದು ಸಿರಿಗೆರೆ ಶ್ರೀ ಅವರಿಗೆ ಬಿ.ಸಿ.ಪಾಟೀಲ್‌ ಪ್ರಶ್ನಿಸಿದರು.

ಆದಿಚುಂಚನಗಿರಿ ಮಠಗಳ ನೋಡಿ ಕಲಿಯಿರಿ: ತರಳಬಾಳು ಮಠದ ರಾಣೆಬೆನ್ನೂರು ಎಂಜಿನಿಯರಿಂಗ್ ಕಾಲೇಜಿಗೆ ಯಾರೂ ಹೋಗುವುದಿಲ್ಲ. ಅದೇ ಆದಿಚುಂಚನಗರಿ ಮಠದ ಶಿಕ್ಷಣ ಸಂಸ್ಥೆಗಳನ್ನು ನೋಡಿ ಕಲಿಯಬೇಕು. ನಾಲ್ಕೈದು ಜಿಲ್ಲೆಗಳಲ್ಲಿ ಪ್ರಬಲವಾದ ಒಕ್ಕಲಿಗ ಸಮುದಾಯದ ಆದಿಚುಂಚನಗಿರಿ ಮಠವು ಬಿಜಿಎಸ್‌ ಸಂಸ್ಥೆಯಡಿ ವಿಶ್ವವಿಖ್ಯಾತ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಆದರೆ, ಸಿರಿಗೆರೆ ಲಿಂಗೈಕ್ಯ ಶ್ರೀಗಳು ಸ್ಥಾಪಿಸಿದ್ದ ಸಂಸ್ಥೆಗಳು ಒಂದೊಂದಾಗಿ ಮುಚ್ಚುತ್ತಿವೆ. ಗುರುವಿಗೆ ಅಂಜಿ ಶಿಷ್ಯ, ಶಿಷ್ಯನಿಗೆ ಅಂಜಿ ಗುರು ಸಾಗಬೇಕೆಂಬ ಮಾತಿದೆ. ಭಕ್ತರನ್ನು ಹೆದರಿಸಿಕೊಂಡು ಇರುವುದಕ್ಕೆ ಸಾಧ್ಯವಿಲ್ಲ ಎಂಬ ಸಂಗತಿಯನ್ನು ಸ್ವಾಮೀಜಿ ಅರ್ಥ ಮಾಡಿಕೊಳ್ಳಬೇಕು ಎಂದರು.

ನಮ್ಮ ಸಭೆ ಬಗ್ಗೆ ರಾಜಕೀಯ ಪಕ್ಷಗಳು, ಮುಖಂಡರ ರೆಸಾರ್ಟ್‌ ರಾಜಕೀಯ ಅಂತೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಸಮಾಜದ ನಾಮನಿರ್ದೇಶಿತ ಅಧ್ಯಕ್ಷ ಯಾರೆಂದೇ ಗೊತ್ತಿಲ್ಲ. ಸಮಾಜದಲ್ಲಿ ಅನ್ಯಾಯದ ವಿರುದ್ಧ ದಂಗೆ ಏಳುವವರು ಯಾರೂ ಇಲ್ಲ. ಈಗ ಸಮಾಜ, ಮಠ ಹಾಳಾಗುತ್ತದೆಂದು ನಾವೆಲ್ಲರೂ ಸೇರಿದ್ದೇವೆ. ಸಾಣೇಹಳ್ಳಿ ಮಠದ ಕಾರ್ಯಕ್ರಮಕ್ಕೆ ಹೋಗಿದ್ದ ನನಗೆ ಸಿರಿಗೆರೆ ಮಠದ ಕಾರ್ಯಕ್ರಮಕ್ಕೆ ಆಹ್ವಾನಿಸಲಿಲ್ಲ. ಚಿತ್ರದುರ್ಗ ಉಸ್ತುವಾರಿ ಸಚಿವನಿದ್ದಾಗಲೂ ಶಿಷ್ಟಾಚಾರಕ್ಕೂ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಲಿಲ್ಲ. ಸ್ವಾಮೀಜಿ ಆದವರು ಮಾಡುವ ಕೆಲಸ ಇದೇನಾ ಎಂದು ಪ್ರಶ್ನಿಸಿದರು.

- - -

ಕೋಟ್ಸ್‌ ಸಿರಿಗೆರೆ ಮಠ, ಸ್ವಾಮೀಜಿ, ಸಮಾಜದ ಮುಖಂಡರ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸಂದೇಶ, ಪದಗಳ ಬಗ್ಗೆ ಬೇಸರವಾಗುತ್ತದೆ. ಅದರಲ್ಲಿನ ಭಾಷೆ, ಪದ ಬಳಕೆ ಸರಿ ಇಲ್ಲ. ಮೊದಲು ಅಂತಹ ವಾಟ್ಸಪ್ ಗ್ರೂಪ್‌ಗಳನ್ನು ವಿಸರ್ಜಿಸಿ. ಮನಸ್ಸಿನ ಭಾವನೆಯನ್ನು ಹೊರ ಹಾಕಲು ಬೇರೆ ದಾರಿಗಳೂ ಇವೆ. ನೀವು ಮಾಡುವುದನ್ನೆಲ್ಲಾ ಸಮಾಜ ವೀಕ್ಷಿಸುತ್ತದೆ. ಮಠ ಮತ್ತು ನಮಗೆ ದೂರ ಆಗುವ ಕೆಲಸ ಯಾರೂ ಸಹ ಮಾಡಬಾರದು

- ರುದ್ರೇಗೌಡ, ಸದಸ್ಯ. ವಿಪ

- - -

ಸಿರಿಗೆರೆ ಡಾ.ಶಿವಮೂರ್ತಿ ಸ್ವಾಮೀಜಿ, ಸಾಣೇಹಳ್ಳಿ ಶ್ರೀಗಳು, ಪ್ರಕಾಶ ಸ್ವಾಮೀಜಿ ಇಂದು ಸೋಮವಾರವೇ ಹಿರಿಯರಾದ ಶಾಮನೂರು ಶಿವಶಂಕರಪ್ಪ, ಬಿ.ಸಿ.ಪಾಟೀಲ, ರುದ್ರೇಗೌಡರಿಗೆ ಕರೆ ಮಾಡಿ, ಸಕಾರಾತ್ಮಕ ಹೆಜ್ಜೆ ಇಡಲಿ. ನಾಳೆಯೇ ಮೂರು ಮಠಕ್ಕೂ ನೂತನ ಪೀಠಾಧಿಪತಿಗಳನ್ನು ಘೋಷಿಸಿ, ಏಕವ್ಯಕ್ತಿ ಡೀಡ್ ರದ್ದುಪಡಿಸುವ ಕೆಲಸ ಮಾಡಿ. ಸಮಾಜ ನಿಮ್ಮ ಬಗ್ಗೆ ಅಭಿಮಾನ ಪಡುತ್ತದೆ

- ಮಹೇಶ ಚಟ್ನಹಳ್ಳಿ, ಹಿರಿಯ ಸಾಹಿತಿ

- - - ಬಾಕ್ಸ್‌ * 18ರಂದು ಶ್ರೀಗಳು ಬೇಡಿಕೆಗೆ ಸ್ಪಂದಿಸುವ ವಿಶ್ವಾಸ: ಎಸ್‌ಎಸ್‌ ಅ.ಭಾ.ವೀ.ಮ. ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಸಿರಿಗೆರೆ ಲಿಂಗೈಕ್ಯ ಶ್ರೀಗಳ ಮೂಲ ಬೈಲಾದಂತೆ ಯಥಾವತ್ ಮಠದ ಶ್ರೀಗಳ ಆಯ್ಕೆ, ಇತರೆ ಪ್ರಕ್ರಿಯೆ ಆಗಬೇಕು. ಹಾಲಿ ಶ್ರೀಗಳು ಪೀಠ ತ್ಯಾಗ ಮಾಡಿ, ಉತ್ತರಾಧಿಕಾರಿ ಘೋಷಿಸಬೇಕು. ಏಕವ್ಯಕ್ತಿ ಡೀಡ್‌ ರದ್ದುಪಡಿಸಬೇಕು ಎಂದರು.

ಸಮಾಜಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು. ಸಮಾಜದ ಆಗುಹೋಗುಗಳು, ಶಿಕ್ಷಣ ಸಂಸ್ಥೆಗಳಿಗೆ ಪುನಶ್ಚೇತನ ನೀಡಬೇಕು. ನಮ್ಮ ಮಠದ ಪರಂಪರೆ ಮುಂದುವರಿಯಬೇಕು. ಮೂರು ದಶಕದ ಹಿಂದಷ್ಟೇ ಯಾರ ಗಮನಕ್ಕೂ ತರದೇ ಆಗಿರುವ ಏಕವ್ಯಕ್ತಿ ಡೀಡ್ ಮೊದಲು ರದ್ದಾಗಬೇಕು. ಈ ಎಲ್ಲಾ ವಿಚಾರ ಮುಂದಿಟ್ಟುಕೊಂಡು, ಆ.18ರಂದು ಬೆಂಗಳೂರಿನಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭೇಟಿ ಮಾಡಿ, ಚರ್ಚಿಸುತ್ತೇವೆ. ನಮ್ಮ ಬೇಡಿಕೆಗೆ ಸ್ಪಂದಿಸುವ ವಿಶ್ವಾಸವಿದೆ. ಒಂದು ವೇಳೆ ಸ್ಪಂದಿಸದಿದ್ದರೆ ಮುಂದಿನ ನಿರ್ಧಾರವನ್ನು ನಾವೆಲ್ಲರೂ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

- - - (ಫೋಟೋ ಬರಲಿವೆ)

Share this article