ಹನೂರಿನ ಮಲೆ ಮಹದೇಶ್ವರನ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

KannadaprabhaNewsNetwork |  
Published : Aug 05, 2024, 12:34 AM IST
ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ  ಪೂಜಾ | Kannada Prabha

ಸಾರಾಂಶ

ಹನೂರಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿದವು.

ಭೀಮನ ಅಮಾವಾಸ್ಯೆ । ಮಾದಪ್ಪನಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ । ವಿವಿಧ ಸೇವೆ ಸಲ್ಲಿಕೆ । ಹರಿದು ಬಂದ ಭಕ್ತರ ದಂಡು

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿದವು.

ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ನಡೆಯುತ್ತಿರುವ ಭೀಮನ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳು ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಬೇಡಗಂಪಣ ಸರದಿ ಅರ್ಚಕರು ಬೆಳಗಿನ ಜಾವದಿಂದ ಮಾದೇಶ್ವರನಿಗೆ ವಿಶೇಷ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ, ದೂಪದ ಸೇವೆ ಹಾಗೂ ಮಹಾ ಮಂಗಳಾರತಿ ನೆರವೇರಿಸಿದರು.

ವಿಶೇಷ ಉತ್ಸವಗಳು:

ಭೀಮನ ಅಮಾವಾಸ್ಯೆ ಪ್ರಯುಕ್ತ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಪೂಜಾ ಕಾರ್ಯಕ್ರಮಗಳ ಜೊತೆ ಹರಕೆ ಹೊತ್ತ ಮಾದಪ್ಪನ ಭಕ್ತಾದಿಗಳಿಂದ ಬೆಳಗ್ಗೆ 8 ಗಂಟೆ ಸಮಯದಲ್ಲಿ ಬೆಳ್ಳಿ ರಥೋತ್ಸವ ಹಾಗೂ ಹುಲಿವಾಹನ ಉತ್ಸವ ಮತ್ತು ರುದ್ರಾಕ್ಷಿ ಮಂಟಪೋತ್ಸವ, ಮಲೆ ಮಹದೇಶ್ವರ ಉತ್ಸವ, ಮುಡಿಸೇವೆ, ಧೂಪದ ಸೇವೆ, ಪಂಜಿನ ಸೇವೆ ಸಲ್ಲಿಸಿದರು. ಭಕ್ತರು ಉರುಳು ಸೇವೆ ಸಲ್ಲಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಗಮನಸೆಳೆದ ವಿಶೇಷ ಅಲಂಕಾರ

ಮಲೆ ಮಾದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ತಮಿಳುನಾಡಿನ ಉದ್ಯಮಿ ರಮೇಶ್ ಗೌಡ ದೇವಾಲಯದ ಸುತ್ತಲಿನ ಪ್ರದೇಶಗಳಲ್ಲಿ ವಿಶೇಷ ಹೂವಿನ ಅಲಂಕಾರ ಮತ್ತು ತೆಂಗಿನಕಾಯಿ ತರಕಾರಿ, ವಿವಿಧ ಫಲ ಪುಷ್ಪಗಳ ಅಲಂಕಾರ ಗಮನ ಸೆಳೆಯಿತು.

ವಿಶೇಷ ದಾಸೋಹ:

ಭೀಮನ ಅಮಾವಾಸ್ಯೆ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಬೆಂಗಳೂರಿನ ಉದ್ಯಮಿ ಶೋಭಾ ಮಹಾದೇವಸ್ವಾಮಿ ಕುಟುಂಬ ವರ್ಗದವರು ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸುವ ಮೂಲಕ ಬೆಳಗಿನ ಉಪಾಹಾರ ಉಪ್ಪಿಟ್ಟು, ಕೇಸರಿಬಾತು ಹಾಗೂ ಮಧ್ಯಾಹ್ನ ಅನ್ನ, ಸಾಂಬಾರು, ಪರಂಗಿಹುಳಿ, ಪಾಯಸ ವ್ಯವಸ್ಥೆ ಮಾಡಿದ್ದರು.

ಭಾರಿ ಭಕ್ತ ಸಮೂಹ:

ಭೀಮನ ಅಮಾವಾಸ್ಯೆ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಹಾಗೂ ತಮಿಳುನಾಡಿನಿಂದಲೂ ಸಹ ಲಕ್ಷಾಂತರ ಭಕ್ತರು ಆಗಮಿಸುವ ಮೂಲಕ ಸರದಿ ಸಾಲು ನಿಂತು ಮಲೆ ಮಾದೇಶ್ವರನ ದರ್ಶನ ಪಡೆದರು. ಮಲೆ ಮಾದೇಶ್ವರ ಬೆಟ್ಟಕ್ಕೆ ಬಂದಂತ ಭಕ್ತಾದಿಗಳು ಇತಿಹಾಸ ಪ್ರಸಿದ್ಧ ಸಾಲೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಭೀಮನ ಅಮಾವಾಸ್ಯೆ ಹಾಗೂ ಶ್ರಾವಣ ಮಾಸದ ಐದು ದಿನಗಳು ನಡೆಯುವ ಜಾತ್ರಾ ಮಹೋತ್ಸವಕ್ಕೆ ಕ್ಷೇತ್ರ ಪ್ರಾಧಿಕಾರ ಅಭಿವೃದ್ಧಿ ವತಿಯಿಂದ ವಿಶೇಷವಾಗಿ ದಾಸೋಹ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ ವ್ಯವಸ್ಥೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಬರುವಂತಹ ಭಕ್ತಾದಿಗಳು ಪ್ಲಾಸ್ಟಿಕ್ ತ್ಯಜಿಸಿ ಶ್ರೀ ಕ್ಷೇತ್ರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಭಕ್ತಾದಿಗಳು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಸ್ಪಂದಿಸಬೇಕು.

ರಘು, ಕಾರ್ಯದರ್ಶಿ, ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ