ಹಣ್ಣುಗಳ ರಾಜ ಮಾವಿನ ದರ ತೀವ್ರ ಕುಸಿತ

KannadaprabhaNewsNetwork |  
Published : May 29, 2025, 02:53 AM ISTUpdated : May 29, 2025, 04:57 AM IST
health benefits of mango peel

ಸಾರಾಂಶ

 ಜಿಲ್ಲೆಯಲ್ಲಿ ಮಾವಿನ ಸಗಟು ಧಾರಣೆಯು ತೀವ್ರವಾಗಿ ಕುಸಿತ ಕಂಡಿದ್ದು, ಇದರಿಂದ ನಷ್ಟ ಅನುಭವಿಸುತ್ತಿರುವ ಬೆಳೆಗಾರರು ಕಂಗಾಲಾಗಿದ್ದಾರೆ.

ರಾಮನಗರ: ಜಿಲ್ಲೆಯಲ್ಲಿ ಮಾವಿನ ಸಗಟು ಧಾರಣೆಯು ತೀವ್ರವಾಗಿ ಕುಸಿತ ಕಂಡಿದ್ದು, ಇದರಿಂದ ನಷ್ಟ ಅನುಭವಿಸುತ್ತಿರುವ ಬೆಳೆಗಾರರು ಕಂಗಾಲಾಗಿದ್ದಾರೆ.

ರಾಮನಗರ ಹಾಗೂ ಕೋಲಾರ ಜಿಲ್ಲೆಗಳ ಮಾವು ಸಾಮಾನ್ಯವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೂ ರಫ್ತು ಆಗುತ್ತಿತ್ತು. ಪಂಜಾಬ್ ರಾಜ್ಯದಿಂದ ಆಗಮಿಸುತ್ತಿದ್ದ ವರ್ತಕರು ಇಲ್ಲಿನ ಮಾವುಗಳನ್ನು ಹೊರ ದೇಶಗಳಿಗೆ ರಫ್ತು ಮಾಡುತ್ತಿದ್ದರು. ಆದರೆ, ಈ ಬಾರಿ ಆ ವರ್ತಕರು ಮಾರುಕಟ್ಟೆಯತ್ತ ಮುಖ ಮಾಡಿಲ್ಲ. ಅಲ್ಲದೆ, ಏಕಕಾಲಕ್ಕೆ ಉತ್ಪನ್ನ ಮಾರುಕಟ್ಟೆಗೆ ಬಂದಿರುವುದರಿಂದ ಮಾವಿನ ದರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ಮಾವಿನ ಫಸಲು ವಿಳಂಬವಾಗಿದ್ದು, ಈ ಹಂಗಾಮಿನಲ್ಲಿ ಶೇ.30ರಿಂದ 40ರಷ್ಟು ಫಸಲಷ್ಟೇ ಇದ್ದರೂ ಬೆಲೆ ಕುಸಿಯುತ್ತಲೇ ಇದೆ. ಜಿಲ್ಲೆಯಲ್ಲಿ 32 ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಪ್ರತಿವರ್ಷ 2.74 ಲಕ್ಷ ಟನ್ ಮಾವನ್ನು ಉತ್ಪಾದನೆ ಮಾಡಲಾಗುತ್ತಿದೆ. ಈ ಬಾರಿ ಬಿಸಿಲಿನ ಆಘಾತಕ್ಕೆ ಜಿಲ್ಲೆಯಲ್ಲಿ ಶೇ.70ರಷ್ಟು ಮಾವುಬೆಳೆ ಹಾನಿಯಾಗಿದೆ.

ಬಾದಾಮಿ ಕೆಜಿಗೆ 12 ರುಪಾಯಿ :

ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುವ ಬಾದಾಮಿ ಮಾವಿನ ಹಣ್ಣು ಈ ಬಾರಿ ಬೆಳೆಗಾರರಿಗೆ ಕಹಿಯಾಗುತ್ತಿದೆ. ಈ ವರ್ಷ ಬಾದಾಮಿ ಹಣ್ಣಿಗೆ ಬೇಡಿಕೆ ಕುಸಿದಿದ್ದು, ಕಾಯಿಯ ಬೆಲೆ 100 ರುಪಾಯಿಯ ಗಡಿ ದಾಟಿಲ್ಲ. ಕಾಯಿಯ ಫ್ಯಾಕ್ಟರಿ ದರ ಪ್ರಾರಂಭದಲ್ಲಿ ಟನ್ ಗೆ 32 ಸಾವಿರ ರುಪಾಯಿ ಇದ್ದ ಬಾದಾಮಿ ದರ ಬುಧವಾರ ಟನ್‌ ಗೆ 12 ಸಾವಿರ (ಪ್ರತಿ ಕೆ.ಜಿ.ಗೆ 12 ರುಪಾಯಿ) ಕ್ಕೆ ಕುಸಿದಿದೆ.

ಸೇಂದೂರ, ತೋತಾಪುರಿ, ಸಿರಿ ಮೊದಲಾದ ತಳಿಯ ಮಾವಿನ ಹಣ್ಣನ್ನು ಕೇಳುವವರೇ ಇಲ್ಲದಂತಾಗಿದೆ. ನೀಲಂ ಇನ್ನಷ್ಟೇ ಮಾರುಕಟ್ಟೆಗೆ ಬರಬೇಕಿದೆ. ಕೇಸರಿ, ದಶೇರಿ, ಇಮಾಮ್ ಪಸಂದ್ ಮಾವು ಮಾರುಕಟ್ಟೆಗೆ ಬರುವುದು ಅಪರೂಪ ಎನ್ನವಂತಾಗಿದೆ.

ಸಗಟು ಧಾರಣೆ ಕುಸಿದಿದ್ದರೂ ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಹಣ್ಣಿನ ಬೆಲೆ ಹೆಚ್ಚು ಇಳಿಕೆ ಕಂಡಿಲ್ಲ. ರಸಪುರಿ, ಬಾದಾಮಿ, ಮಲಗೋವಾ, ಮಲ್ಲಿಕಾ ಸೇರಿ ಪ್ರಮುಖ ತಳಿಯ ಹಣ್ಣುಗಳೆಲ್ಲವೂ ಚಿಲ್ಲರೆ ಮಾರುಕಟ್ಟೆಯಲ್ಲಿ ದುಬಾರಿಯಾಗಿಯೇ ಇವೆ.

ರಸಪೂರಿ ಮಾವು ಇಳುವರಿ ಕುಸಿತ :

ಈ ಬಾರಿ ರಸಪುರಿ ಮಾವಿನ ದರವು ಬಾದಾಮಿಯನ್ನೂ ಹಿಂದಿಕ್ಕಿದ್ದು ಬೆಲೆ ಕುಸಿತದ ನಡುವೆಯೂ ಬೆಳೆಗಾರರಿಗೆ ಬಂಪರ್‌ ಕೊಡುಗೆ ನೀಡುತ್ತಿದೆ. ಕೊಯ್ಲಿನ ಆರಂಭದಲ್ಲಿ ಸಗಟು ದರ ಪ್ರತಿ ಕೆ.ಜಿ.ಗೆ 100 ರಿಂದ 140 ರು.ಗೆ ತಲುಪಿತ್ತು. ಈಗಲೂ ಕಾಯಿಗೆ ಸರಾಸರಿ 80ರಿಂದ 90 ಬೆಲೆ ಇದೆ. ಆದರೆ, ಮಾರುಕಟ್ಟೆಗೆ ಬರುತ್ತಲೇ ಇಲ್ಲ.

ರೈತರಿಗೆ ನಷ್ಟ, ಮಾರಾಟಗಾರರಿಗೆ ಲಾಭ

ಮಾರುಕಟ್ಟೆಗೆ ಒಮ್ಮೆಲೆ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ತಳಿಯ ಮಾವಿನ ಹಣ್ಣು ಆವಕವಾಗಿದ್ದು, ರೈತರಿಂದ ಕಡಿಮೆ ಬೆಲೆಗೆ ಸಗಟು ಹಣ್ಣು ಖರೀದಿಸಿದ ವರ್ತಕರು, ಚಿಲ್ಲರೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಲ್ಲಿಯೇ ಮಾರಾಟ ಮಾಡುತ್ತಿದ್ದಾರೆ.

ಗ್ರಾಹಕರ ಬೇಡಿಕೆ ಇರುವುದರಿಂದ, ದುಬಾರಿ ದರದಲ್ಲಿ ಮಾವಿನ ಹಣ್ಣು ಮಾರಾಟ ಮಾಡಿ ಲಾಭ ಪಡೆದುಕೊಳ್ಳುತ್ತಿದ್ದಾರೆ. ಹಾಪ್‌ಕಾಮ್ಸ್ ದರದ ಪ್ರಕಾರ, ಕೇಸರಿ ಮಾವು ಕೆಜಿ 120 ರು., ದಶೇರಿ 160 ರು. ಮತ್ತು ಇಮಾಮ್ ಪಸಂದ್ ಕೆಜಿಗೆ 220 ರು., ದರ ಹೊಂದಿದೆ. ರಸಪುರಿ ಮಾವಿನ ಹಣ್ಣು ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದುಕೊಂಡಿದ್ದು, ನಗರಗಳ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ. ಮಾರುಕಟ್ಟೆಯಲ್ಲಿ ರಸಪುರಿ ಮಾವು ಕೆಜಿಗೆ 120 ರು. ದರ ಹೊಂದಿದೆ.

ಕಳೆದ ವರ್ಷ ಎರಡು ತಿಂಗಳ ಅವಧಿಯಲ್ಲಿ ಎದುರಾದ ಬಿಸಿಲಿನ ತೀವ್ರತೆ ಈ ಬಾರಿ ಫೆಬ್ರವರಿ ತಿಂಗಳಲ್ಲೇ ಎದುರಾಗಿತ್ತು. ಇದರಿಂದಾಗಿ ಜಿಲ್ಲೆಯಲ್ಲಿ ಶೇ.70ರಷ್ಟು ಮಾವಿನ ಬೆಳೆ ಹಾನಿಯಾಗಿದೆ. ಪಂಜಾಬ್, ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳದಿಂದ ಖರೀದಿದಾರರು ಬಂದಿಲ್ಲ. ಇದೆಲ್ಲವೂ ದರ ಕುಸಿಯಲು ಕಾರಣವಾಗಿದೆ.

-ರಾಜು, ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ, ರಾಮನಗರ

ಮಾವುದರ(ಕೆಜಿಗೆ)

ಸೇಂದೂರ05-07 ರು.

ಬಾದಾಮಿ12-16 ರು.

ತೋತಾಪುರಿ05-06 ರು.

ಮಲ್ಲಿಕಾ25-30 ರು.

ಕೇಸರಿ40-50 ರು.

ರಸಪುರಿ100-120 ರು. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''