ದೊಡ್ಡಬಳ್ಳಾಪುರ: ಸಮಸಮಾಜದ ನಿರ್ಮಾಣಕ್ಕೆ ಕ್ರಾಂತಿಯನ್ನೇ ಮಾಡಿದ ಬಸವಣ್ಣನವರ ತತ್ವಾದರ್ಶಗಳು ಸಾರ್ವಕಾಲಿಕವಾಗಿದ್ದು, ಬಸವ ತತ್ವಗಳ ಪ್ರಚಾರ, ಪ್ರಸಾರ ಇಂದಿನ ಅಗತ್ಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.
ಹೆಣ್ಣಿಗಾಗಿ, ಹೊನ್ನಿಗಾಗಿ, ಮಣ್ಣಿಗಾಗಿ ಜಗತ್ತಿನಲ್ಲಿ ಕ್ರಾಂತಿ ಆಗಿದೆ. ಆದರೆ ಸರ್ವರ ಸಮಾನತೆಗಾಗಿ ಯಾವುದಾದರೂ ಕ್ರಾಂತಿ ನಡೆದಿದ್ದರೆ ಅದು ಕಲ್ಯಾಣದ ಕ್ರಾಂತಿ ಮಾತ್ರ ಎಂದು ಹೇಳಿದ ಸಚಿವರು, 12ನೇ ಶತಮಾನದಲ್ಲಿ ಮನುಷ್ಯರನ್ನು ಮನುಷ್ಯರಂತೆ ಕಾಣುತ್ತಿರಲಿಲ್ಲ. ಮೌಢ್ಯತೆ, ಅನಕ್ಷರತೆ ಇದ್ದು ಹೆಣ್ಣಿಗೆ ಸಮಾನತೆ ಇರಲಿಲ್ಲ. ಅಂತಹ ಕಾಲಘಟ್ಟದಲ್ಲಿ ಸ್ವಾತಂತ್ರ್ಯ, ಸಮಾನತೆ, ಕಾಯಕ, ದಾಸೋಹ, ಸಹೋದರತ್ವ, ಸಹಬಾಳ್ವೆಯ ತಳಹದಿಯ ಮೇಲೆ ಬಲಿಷ್ಠ ಸುಂದರ ಸಮಾಜದ ನಿರ್ಮಾಣಕ್ಕೆ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ವೈಚಾರಿಕ ಮತ್ತು ವೈಜ್ಞಾನಿಕತೆಯ ತಳಹದಿಯ ಮೇಲೆ ಕ್ರಾಂತಿ ನಡೆಯಿತು. ಶ್ರೇಣಿರಹಿತ, ವರ್ಗರಹಿತ, ಲಿಂಗಭೇದ ರಹಿತ ಸಮ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಶ್ರಮಿಸಿದರು ಎಂದು ಹೇಳಿದರು.
ಅನುಭವ ಮಂಟಪಕ್ಕೆ ₹280 ಕೋಟಿ:ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳಿನ ಕಲ್ಪನೆಯನ್ನು ನೀಡಿ, ವಿಶ್ವದ ಪ್ರಥಮ ಸಂಸತ್ತು ಅನುಭವ ಮಂಟಪ ಸ್ಥಾಪಿಸಿದರು. ಅಲ್ಲಿ 770 ವಿವಿಧ ವೃತ್ತಿಯ, ವಿವಿಧ ಸಮುದಾಯದ ಅಮರಗಣಂಗಳು ಪಾಲ್ಗೊಳ್ಳುತ್ತಿದ್ದರು. ಅವರೆಲ್ಲರೂ ವಚನಗಳನ್ನು ರಚಿಸಿದ್ದಾರೆ. ಪ್ರಜಾಪ್ರಭುತ್ವದ ಪರಿಕಲ್ಪನೆಗೆ ತಳಹದಿಯಾದ ಅನುಭವ ಮಂಟಪ ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ಆಧುನಿಕ ಅನುಭವ ಮಂಟಪ ಕಾಮಗಾರಿಗೆ ₹105 ಕೋಟಿ ಬಿಡುಗಡೆ ಮಾಡುವುದರೊಂದಿಗೆ ಈವರೆಗೆ ₹280 ಕೋಟಿ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ವರ್ಷದೊಳಗೆ ಇದರ ಲೋಕಾರ್ಪಣೆ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಬಸವಣ್ಣನವರ ಚಿಂತನೆಗಳನ್ನು ತಾವು ಚಿಕ್ಕ ವಯಸ್ಸಿನಲ್ಲೆ ಮನಗಂಡು ಮೈಗೂಡಿಸಿಕೊಂಡಿದ್ದು, ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಅವರ ಬಗ್ಗೆ ಹೆಚ್ಚಿನ ಪಾಠ ಕಲಿತು ಆ ದಾರಿಯಲ್ಲೆ ನಡೆಯುತ್ತಿರುವೆ. 12ನೇ ಶತಮಾನದಲ್ಲಿ ಅನುಭವ ಮಂಟಪ ನಿರ್ಮಿಸಿ ಸಮಾಜದ ಸುಧಾರಣೆ, ಮಾನವತಾವಾದವನ್ನು ಪ್ರತಿಪಾದಿಸಿದಂತಹ ಮಹಾನ್ ಚೇತನ ಬಸವಣ್ಣನವರು. ಅವರ ವಚನಗಳು, ಆದರ್ಶಗಳು, ಕಾಯಕ ನಿಷ್ಟೆ ಎಂದೆಂದಿಗೂ ಶಾಶ್ವತ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ.ಕೆ ಸುಧಾಕರ್ ಮಾತನಾಡಿ, ಬಸವಣ್ಣನವರು ಕಾಯಕವೇ ಕೈಲಾಸವೆಂದರು. ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶವನ್ನು ನೀಡಿದ ಮಹಾನ್ ದಾರ್ಶನಿಕ ಬಸವಣ್ಣ ಅವರ ಆದರ್ಶಗಳು ನಮ್ಮ ಸಮಾಜಕ್ಕೆ ಸದಾ ದಾರಿದೀಪವಾಗಿವೆ. ವಚನಗಳನ್ನು ಬರೆಯುವುದರ ಜೊತೆಗೆ ವಚನದಲ್ಲಿರುವಂತೆ ಪಾಲಿಸಿದ್ದರು. ಬಸವಣ್ಣನವರ ಆದರ್ಶಗಳನ್ನು ಪಾಲಿಸಬೇಕು. ಪ್ರತಿದಿನದ ಮಾಡುವ ಕೆಲಸದಲ್ಲಿ ಬಸವಣ್ಣನವರನ್ನು ಕಾಣಬೇಕು. ಬಸವಣ್ಣನವರು ಆಚರಣೆಗೆ ತಂದ ದಾಸೋಹವು ಈಗ ತ್ರಿವಿಧವಾದ ಶಿಕ್ಷಣ, ಆರೋಗ್ಯ, ಅನ್ನ ದಾಸೋಹಗಳಾಗಿ ರಾಜ್ಯದಲ್ಲಿ ಪ್ರಾಮುಖ್ಯತೆ ಪಡೆದಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ ಭವನ ಆವರಣದಲ್ಲಿ ಲೋಕಾರ್ಪಣೆಗೊಂಡ ಬಸವಣ್ಣ ಅವರ ಪ್ರತಿಮೆಯಲ್ಲಿ ಮಂಟಪ 28 ಅಡಿ. ಕಂಚಿನ ಪ್ರತಿಮೆ 5 ಅಡಿ ಉದ್ದವಾಗಿದ್ದು 450 ಕೆಜಿ ಕಂಚು ಬಳಕೆ ಮಾಡಿ ಸುಮಾರು ₹80 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ.
(ಎರಡೂ ಫೋಟೋ ಬಳಸಿ ಸರ್)
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಆವರಣದಲ್ಲಿ ಸ್ಥಾಪಿಸಿರುವ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿಯನ್ನು ಸಚಿವ ಈಶ್ವರ್ ಖಂಡ್ರೆ ಮತ್ತಿತರರು ಲೋಕಾರ್ಪಣೆ ಮಾಡಿದರು.
ಬೆಂ.ಗ್ರಾ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಈಶ್ವರ್ ಖಂಡ್ರೆ, ಸ್ವಾಮೀಜಿಗಳಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಮತ್ತಿತರರು ಪಾಲ್ಗೊಂಡಿದ್ದರು.