ಜಿಲ್ಲಾ ಮಟ್ಟದ ಪ್ರೌಢಶಾಲಾ ಸಹ-ಶಿಕ್ಷಕರ ಶೈಕ್ಷಣಿಕ ಸಮ್ಮೇಳನ, ಸರ್ವೋದಯ ದಿನಾಚರಣೆ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯ ಕಾರ್ಯಾಗಾರ
ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುವ ಶಿಕ್ಷಕರು ಆಧುನಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಂಘಟಿತರಾದಲ್ಲಿ ಮಾತ್ರ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ-ಶಿಕ್ಷಕರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ಸಹ-ಶಿಕ್ಷಕರ ಶೈಕ್ಷಣಿಕ ಸಮ್ಮೇಳನ, ಸರ್ವೋದಯ ದಿನಾಚರಣೆ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಯಾರೇ ಆಗಲಿ ತಮ್ಮ ಹಕ್ಕುಗಳನ್ನು ಕೇಳುವಾಗ ಒಬ್ಬಂಟಿಯಾಗಿ ಹೋದರೆ ಜಯ ಸಿಗುವುದಿಲ್ಲ. ಸಂಘಟಿತರಾಗಿ ಸಂಘಟನೆ ಮೂಲಕವಾಗಿ ತಮ್ಮ ಹಕ್ಕುಗಳನ್ನು ನ್ಯಾಯಯುತವಾಗಿ ಕೇಳಿದಾಗ ಜಯ ಸಿಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಶಾಲೆ ಎಂಬ 4 ಗೋಡೆಗಳ ಮಧ್ಯದಲ್ಲಿ ದೇಶದ ಭವಿಷ್ಯವನ್ನು ನಿರ್ಮಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದು, ಅವರ ಸೇವೆ ಸದಾ ಸ್ಮರಣೀಯ. ವಿಶೇಷವಾಗಿ ಎಸ್ಸೆಸ್ಸೆಲ್ಸಿ ಮಕ್ಕಳ ಫಲಿತಾಂಶ ಸುಧಾರಣೆಗಾಗಿ ಈ ಕಾರ್ಯಾಗಾರ ಆಯೋಜಿಸಿದ್ದು ಶ್ಲಾಘನೀಯ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹಾಗೂ ಡಾ. ಶಂಭು ಬಳಿಗಾರ ಅವರನ್ನು ಸನ್ಮಾನಿಸಲಾಯಿತು. ಬಡ್ತಿ ಮುಖ್ಯೋಪಾಧ್ಯಯರನ್ನು, ಸಂಘಟನೆಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಿಡಿಪಿಐ ಸುರೇಶ ಹುಗ್ಗಿ, ಡಯಟ್ ಪ್ರಾಚಾರ್ಯ ಗಿರೀಶ ಪದಕಿ, ಜಿಲ್ಲೆಯ ವಿವಿಧ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೌನೇಶ ಬಡಿಗೇರ, ಎಂ.ಎಚ್. ಪಾಟೀಲ, ಶ್ರೀಧರ, ಎಸ್.ಜಿ. ಕೋಟಿ, ಎಂ.ಎಫ್. ಬಾರ್ಕಿ, ನಿರಂಜನ ಮೂರ್ತಿ, ವಿಷಯ ಪರೀವಿಕ್ಷಕರು, ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ ಬಿ., ಗೌರವಾಧ್ಯಕ್ಷ ಎಚ್.ಕೆ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ, ಉಪಾಧ್ಯಕ್ಷ ಮಲ್ಲನಗೌಡ ಬಿರಾದಾರ, ಸಹಕಾರ್ಯದರ್ಶಿ ದೇವರಾಜೆಗೌಡ, ಸಂಘಟನಾ ಕಾರ್ಯದರ್ಶಿ ತುಕಾರಾಮ ಬಾಗೆನ್ನೆವರ, ಖಜಾಂಚಿ ಧನಸಿಂಗ ರಾಠೋಡ, ರಾಜ್ಯ ಉಪಾಧ್ಯಕ್ಷ ಸುರೇಶ ಕಲ್ಮನಿ, ಜಿಲ್ಲಾ ಕಾರ್ಯದರ್ಶಿ ರಾಕೇಶ ಜಿಗಳಿ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಚ್.ಪಿ. ಬಣಕಾರ, ಕಾರ್ಯದರ್ಶಿ ಎನ್.ಎನ್. ಕುಂದೂರು, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಕಾರ್ಯದರ್ಶಿ ಬಿ.ಎಸ್. ಚಳ್ಳಾಳ ಇತರರು ಇದ್ದರು.
ಇದಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಮಹಾತ್ಮಾ ಗಾಂಧಿಜೀಯವರ ಭಾವಚಿತ್ರ ಮೆರವಣಿಗೆ ವಿವಿಧ ವಾದ್ಯಗಳೊಂದಿಗೆ ಅದ್ಧೂರಿಯಾಗಿ ಜರುಗಿತು.