ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ದೇಶದ ಸಂವಿಧಾನವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರದ್ದಾಗಿದೆ. ಪ್ರತಿಯೊಬ್ಬರೂ ಕಾನೂನು ಪಾಲಿಸುವ ಮೂಲಕ ದೇಶದಲ್ಲಿ ಎಲ್ಲರೂ ಪ್ರೀತಿ, ವಿಶ್ವಾಸ, ಸಹಬಾಳ್ವೆಯೊಂದಿಗೆ ಜೀವನ ಮಾಡಿದರೆ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.ಪಟ್ಟಣದ ಬಸವ ಭವನದಲ್ಲಿ ತಾಜ್ ಸೋಸಿಯಲ್ ಗ್ರುಫ್ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಸೌಹಾರ್ದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಾಸಿಸುವ ಎಲ್ಲರು ಸಹೋದರತೆ, ಸಹಬಾಳ್ವೆ, ಮಾನವೀಯತೆ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ಮಾಡುವಂತಾಗಬೇಕು. ಸೌಹಾರ್ದ ಸಮಾವೇಶಗಳಿಂದ ಇಂತಹ ಗುಣಗಳನ್ನು ಮೈಗೂಡಿಸಿಕೊಂಡರೆ ಸಮಾವೇಶ ಮಾಡಿದ್ದು ಸಾರ್ಥಕವಾಗುತ್ತದೆ. ಸಮಾಜಕ್ಕೆ ಯಾವುದೇ ಕಂಟಕವಾಗದ ರೀತಿ ಜೀವನ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.ಅಧಿಕಾರ, ಅಂತಸ್ತು ಶಾಶ್ವತವಲ್ಲ. ಪ್ರತಿಯೊಬ್ಬರಿಗೂ ಪ್ರೀತಿ, ವಿಶ್ವಾಸ ಬಹಳ ಮುಖ್ಯ. ಅದನ್ನು ಅರಿತು ನಾವು ನಮ್ಮ ಹೆಸರು ಶಾಶ್ವತವಾಗಿ ಇರಲು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವಂತಾಗಬೇಕು. ಎಲ್ಲ ಧರ್ಮದ ಜನರೊಂದಿಗೆ ಅನೋನ್ಯವಾಗಿ ಬಾಳುವ ಗುಣವನ್ನು ಮಕ್ಕಳಿಗೆ ಕಲಿಸುವಂತಾಗಬೇಕು. ಎಲ್ಲೆಡೆ ಸೌಹಾರ್ದ ವಾತಾವರಣ ಮೂಡಲು ಇಂತಹ ಸಮಾವೇಶಗಳು ನಡೆಯುವಂತಾಗಲಿ ಎಂದು ಹಾರೈಸಿದರು. ಕೆಪಿಸಿಸಿ ವಕ್ತಾರ ನಿಕೇತರಾಜ್ ಮೌರ್ಯ ಮಾತನಾಡಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕಾರ್ಯ ನಡೆಯಬಾರದು. ದ್ವೇಷದಿಂದ ದ್ವೇಷ ಮಾಡಿದರೆ ಎಂದಿಗೂ ಸಮಸ್ಯೆ ಪರಿಹಾರ ಕಾಣುವುದಿಲ್ಲ. ಪ್ರೀತಿ, ವಿಶ್ವಾಸ ಬಹು ಮುಖ್ಯವಾಗಿದೆ. ಸಿದ್ದಗಂಗಾ ಮಠದ ಲಿಂ.ಶಿವಕುಮಾರ ಸ್ವಾಮೀಜಿ ಅವರು ತಮ್ಮ ಜೀವನದಲ್ಲಿ ಎಂದಿಗೂ ಧರ್ಮದ ಬಗ್ಗೆ ಮಾತನಾಡಲಿಲ್ಲ. ಅವರು ಎಲ್ಲ ಧರ್ಮದ ಮಕ್ಕಳಿಗೂ ಶಿಕ್ಷಣ, ದಾಸೋಹ ನೀಡಿದರು. ಇದು ದೇಶದ ಸೌಹಾರ್ದತೆಗೆ ಬಹುದೊಡ್ಡ ಉದಾಹರಣೆಯಾಗಿದ್ದಾರೆ. ಇಂತಹ ಸೌಹಾರ್ದ ವಾತಾವರಣ ಎಲ್ಲೆಡೆ ಬರಬೇಕು. ಅನೇಕ ಮುಸ್ಲಿಂ ಬಾಂಧವರು ಹಿಂದು ದೇವಸ್ಥಾನ ಕಟ್ಟಿಸಿದ್ದಾರೆ. ಅನೇಕ ಹಿಂದು ಬಾಂಧವರು ಮುಸ್ಲಿಂ ಬಾಂಧವರಿಗೆ ನೆರವಾಗಿದ್ದಾರೆ ಎಂಬುವದನ್ನು ಇತಿಹಾಸದಿಂದ ತಿಳಿದುಕೊಳ್ಳುತ್ತೇವೆ. ಇದನ್ನು ಅರಿತು ಸೌಹಾರ್ದತೆಯಿಂದ ಜೀವನ ಮಾಡುವ ಅಗತ್ಯವಿದೆ ಎಂದರು.ಕರ್ನಾಟಕ ಯುನಿಪ ಅಧ್ಯಕ್ಷ ರಫೀಕ್ ಕುದ್ರೋಳಿ ಮಾತನಾಡಿ, ಧರ್ಮದ ಹೆಸರಿನಲ್ಲಿ ದೇಶ ಒಡೆಯುವುದು ಖಂಡನೀಯ. ಅಧರ್ಮಿಯರನ್ನು ಸೋಲಿಸಲು ಧರ್ಮಿಯರು ನಿರಂತರವಾಗಿ ಹೋರಾಟ ಮಾಡಿರುವದನ್ನು ಎಲ್ಲ ಧರ್ಮ ಗ್ರಂಥಗಳಿಂದ ತಿಳಿದುಕೊಳ್ಳುತ್ತೇವೆ. ಜಿಹಾದ್ ಎಂಬುವುದು ಪವಿತ್ರ ಪದ. ಇದು ಕುರಾನ್‌ನಲ್ಲಿ ಇಲ್ಲವೇ ಇಲ್ಲ. ಈ ಬಗ್ಗೆ ಕೆಲವರು ವಿನಾಕಾರಣ ಗೊಂದಲ ಸೃಷ್ಟಿಸಿ ಸಮಾಜದಲ್ಲಿ ಕಂದಕ ಮೂಡಿಸುತ್ತಿರುವುದು ವಿಷಾದನೀಯ. ಭಯೋತ್ಪಾದನೆಯೂ ಇಸ್ಲಾಂ ಧರ್ಮದಲ್ಲಿ ಇಲ್ಲ. ಇಡೀ ಮಾನವ ಜನಾಂಗಕ್ಕೆ ಒಳಿತಾಗಬೇಕೆಂಬ ಸಂದೇಶವನ್ನು ಪ್ರವಾದಿ ಮಹ್ಮದರು ಕುರಾನ್‌ನಲ್ಲಿ ಸಂದೇಶ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಮಾತನಾಡಿ, ಮಾತುಗಳು ಭಾಷಣವಾಗಿರದೇ ಸಾಧನೆಯಾಗಬೇಕು. ಕೆಲವರ ಮಾತಿನಿಂದ ಸಮಾಜದಲ್ಲಿ ಅಹಿತಕರ ಘಟನೆಗಳು ಸಂಭವಿಸುತ್ತವೆ. ಅರಿತು ಜೀವನ ಮಾಡಿದರೆ ಬದುಕಿಗೆ ಅರ್ಥ ಬರಲು ಸಾಧ್ಯ. ಶಾಂತಿ ಸಂದೇಶವನ್ನು ಕುರಾನ್ ನೀಡಿದೆ. ಶೇ.೯೯ರಷ್ಟು ಇಸ್ಲಾಂ ಧರ್ಮದವರು ಒಳ್ಳೆಯವರಾಗಿದ್ದಾರೆ. ಶೇ.೧ರಷ್ಟು ದುಷ್ಟ ಶಕ್ತಿ ಹೊಂದಿರುವವರಿಂದ ಇಸ್ಲಾಂ ಧರ್ಮ ಬಾಂಧವರಿಗೆ ಕೆಟ್ಟು ಹೆಸರು ಬರುತ್ತಿದೆ. ಅದನ್ನು ಮಟ್ಟ ಹಾಕಲು ಮುಂದಾದರೆ ನಾವು ನಿಮ್ಮ ಜೊತೆಗೆ ಬರಲು ಸಿದ್ಧ. ಹಿಂದುಗಳಿಗೆ ಪವಿತ್ರ ಗೋಮಾತೆಯನ್ನು ಯಾವ ಕಾರಣಕ್ಕೂ ಇಸ್ಲಾಂ ಬಾಂಧವರು ಸೇವಿಸಬಾರದು. ಕಾನೂನು ಪಾಲಿಸಬೇಕಿದೆ. ಸಾಮರಸ್ಯಕ್ಕೆ ಹೆಸರಾಗಿದ್ದ ಸಂತ ಶಿಶುನಾಳ ಷರೀಫ, ಡಾ.ಎಪಿಜೆ ಅಬ್ದುಲ್‌ಕಲಾಂರಂತಹ ಇಸ್ಲಾಮೀಯರು ಸಮಾಜಕ್ಕೆ ಬೇಕು. ಎಲ್ಲರೂ ಧರ್ಮದ ಹಾದಿಯಲ್ಲಿ ನಡೆಯುವಂತಾಗಬೇಕೆಂದರು.ನಂದಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸತ್ಯಜೀತ ಪಾಟೀಲ ಮಾತನಾಡಿ, ಸ್ವಸ್ಥ ಸಮಾಜ ಕಟ್ಟಲು ಇಂತಹ ಕಾರ್ಯಕ್ರಮ ಪೂರಕ. ಎಲ್ಲರೂ ಸೌಹಾರ್ದತೆಯಿಂದ ಜೀವನ ಮಾಡಿದರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಿರುವುದಾಗಿ ತಿಳಿಸಿದರು.ಶಿರೂರಿನ ಡಾ.ಬಸವಲಿಂಗ ಸ್ವಾಮೀಜಿ ಮಾತನಾಡಿ, ಪ್ರತಿಯ್ಬೊಬರಲ್ಲು ದೇವರಿದ್ದಾನೆ. ಇದನ್ನು ಅರಿತು ನಡೆಯಬೇಕು. ಮೌಢ್ಯಗಳನ್ನು ತ್ಯಜಿಸಬೇಕು. ಭಗವಂತ ನೀಡಿರುವ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.ವೇದಿಕೆಯಲ್ಲಿ ಭಟ್ಕಳದ ಮೌಲಾನಾ ಅಬ್ದುಲ್ ಅಲೀಮ್ ಸಾಹಬ ನದ್ವಿ, ನಿವೃತ್ತ ಪ್ರಾಚಾರ್ಯ ಎಂ.ಡಿ.ಬಳಗಾನೂರ, ಸಿದ್ದಲಿಂಗ ಸ್ವಾಮೀಜಿ, ಇಲಿಯಾಸ ಸೇಠ್ ಬಾಗವಾನ, ಹಾಫೀಜ ಮಹ್ಮದಅಲಿ ಮಿಲಿ, ಐ.ಸಿ.ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ಚಂದ್ರಶೇಖರಗೌಡ ಪಾಟೀಲ, ಎಂ.ಕೆ.ಬಿರಾದಾರ, ಮುಕ್ತಿ ಅಬ್ದುಲ್ ಅಜೀಜ್ ಇತರರು ಇದ್ದರು. ಅವಟಿ ಸ್ವಾಗತಿಸಿದರು, ನಜೀರ ದಡ್ಡಿ ನಿರೂಪಿಸಿದರು. ರೆಹಾನ್ ಕೆರೂರ ವಂದಿಸಿದರು.ಕೋಟ್‌ಕೇವಲ ಭಾಷಣದಲ್ಲಿ ದೇಶಭಕ್ತಿ ತೋರಿಸದೇ ದೇಶ, ಸಮಾಜದ ಒಳಿತಿಗಾಗಿ ದುಡಿಯುವುದೇ ನೈಜ ದೇಶಭಕ್ತಿಯಾಗಿದೆ. ಪ್ರತಿಯೊಬ್ಬರಲ್ಲೂ ಕ್ಷಮಿಸುವ ಗುಣ ಬರಬೇಕು. ಬೇರೆಯವರ ಕೊಂಕು ನುಡಿಗಳಿಗೆ ಕಿವಿಗೊಡದೇ ತಮ್ಮನ್ನು ತಾವು ಹಿಡಿತದಲ್ಲಿಟ್ಟುಕೊಂಡು ಮುನ್ನಡೆಯಬೇಕು. ಸಮಾಜಕ್ಕೆ ಪೂರಕವಾದ ಜೀವನ ಮಾಡಿದರೆ ಕಂಟಕಗಳು ಬರದೇ ಎಲ್ಲರೂ ಸೌಹಾರ್ದತೆಯಿಂದ ಇರಲು ಸಾಧ್ಯವಿದೆ.ಯು.ಟಿ.ಖಾದರ್, ವಿಧಾನಸಭಾಧ್ಯಕ್ಷ