ಧಾರವಾಡ: ಯಾವ ಸರ್ಕಾರ ಬಂದರೂ ಯಾವತ್ತಿನಿಂದಲೂ ಕನ್ನಡಿಗರಿಗೆ ಕನ್ನಡವನ್ನು ಉಳಿಸಿಕೊಳ್ಳುವುದೇ ಸಮಸ್ಯೆ ಆಗುತ್ತಿರುವುದು ಕನ್ನಡಿಗರ ದುರ್ದೈವ ಎಂದು ಹಿರಿಯ ಭಾಷಾ ತಜ್ಞ ಡಾ. ಸಂಗಮೇಶ ಸವದತ್ತಿಮಠ ಹೇಳಿದರು.
ಕನ್ನಡದ ಆಸ್ಮಿತೆಯ ವಾಸ್ತವ, ಅದರ ಹುಟ್ಟು- ಬೆಳವಣಿಗೆಗಳ ಬಗ್ಗೆ ಭಾಷಾ ವಿದ್ವಾಂಸರಿಗೆ ಗೊತ್ತಿರುವ ಸಂಗತಿಯೇ ಆಗಿದೆ. ವಿದೇಶೀ ಸಂಶೋಧಕರನ್ನೂ ಒಳಗೊಂಡು ಆನೇಕ ಭಾರತೀಯ ಸಂಶೋಧಕರು ಸಾಧಾರವಾಗಿ ದ್ರಾವಿಡಭಾಷೆಗಳ ಹುಟ್ಟು ಬೆಳವಣಿಗೆಗಳನ್ನು ಈಗಾಗಲೆ ಲಿಖಿತವಾಗಿಯೇ ದಾಖಲಿಸಿದ್ದಾರೆ. 16 ರಿಂದ 21ನೇ ಶತಮಾನದ ವರೆಗೂ ನಡೆದ ಜಾಗತಿಕ ಮಟ್ಟದ ಅಧ್ಯಯನಗಳಲ್ಲಿ ಯಾವೊಬ್ಬ ವಿದ್ವಾಂಸನೂ ಕನ್ನಡ ಭಾಷೆಯು ತಮಿಳು ಭಾಷೆಯಿಂದ ಹುಟ್ಟಿದೆ ಎಂದು ಹೇಳಿಲ್ಲ ಎಂದು ಡಾ. ಸವದತ್ತಿಮಠ ಸ್ಪಷ್ಟಪಡಿಸಿ, ಕನ್ನಡ ಭಾಷೆಯು ಮೂಲ ದಕ್ಷಿಣ ದ್ರಾವಿಡ ಭಾಷೆಯಿಂದ ಸ್ವತಂತ್ರವಾಯಿತೆಂದು ಮಾತ್ರ ಹೇಳಿದ್ದಾರೆ ಎಂದರು.
ಕನ್ನಡದ ಪ್ರಾಚೀನತೆ ಕುರಿತು ಹೇಳುವುದಾದರೆ, ತಮಿಳಿನಲ್ಲಿನ ಕೆಲವು ಕನ್ನಡ ಪದಗಳನ್ನು ಆಧರಿಸಿ ಕನ್ನಡವು ತಮಿಳಿನಿಂದ ಹುಟ್ಟಿತೆಂದಾಗಲಿ, ಕನ್ನಡದಲ್ಲಿನ ಕೆಲವು ತಮಿಳು ಪದಗಳನ್ನು ಆಧರಿಸಿ ತಮಿಳು ಕನ್ನಡದಿಂದ ಹುಟ್ಟಿತೆಂದಾಗಲಿ ಹೇಳುವುದು ಸರಿಯಲ್ಲ. ಒಂದೇ ಮೂಲದಿಂದ ಹುಟ್ಟಿದ ಭಾಷೆಗಳಲ್ಲಿ ಅವು ಸ್ವತಂತ್ರವಾಗಿ ಬೆಳೆದು ನಿಂತ ಮೇಲೆಯೂ ತಮ್ಮ ಮೂಲ ಭಾಷೆಯ ಕೆಲವಾದರೂ ಅಂಶಗಳನ್ನು ಉಳಿಸಿಕೊಂಡು ಬಂದಿರುತ್ತವೆ ಎಂಬುದು ಸ್ಪಷ್ಟವಾಗಿದೆ ಎಂದರು.ತಮಿಳು ನಟನು ಕನ್ನಡಿಗರ ಕ್ಷಮೆ ಕೇಳದೆ ಅಹಂ ಮೆರೆದು ಕನ್ನಡ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಇವನಿಗೆ ಬುದ್ದಿ ಕಲಿಸಲೇ ಬೇಕು. ಇಲ್ಲದಿದ್ದರೆ ಇಂಥ ಆತಂಕಗಳು ಕನ್ನಡಿಗರಿಗೆ ಮತ್ತೆ ಮತ್ತೆ ಬರಬಹುದು. ಭಾಷೆ ಸಮುದಾಯದ ಉತ್ಪನ್ನವೇ ಹೊರತು ಏಕ ವ್ಯಕ್ತಿಯ ಆಸ್ತಿ ಅಲ್ಲ ಎಂದ ಸವದತ್ತಿಮಠ, ಮೊದಮೊದಲು ಕನ್ನಡವು ಸಂಸ್ಕೃತದಿಂದಲೇ ಹುಟ್ಟಿದ್ದು ಎಂಬ ಭ್ರಮೆ ಆವರಿಸಿಕೊಂಡಿತ್ತು. ಹಾಗೆ ನೋಡಿದರೆ ಕನ್ನಡವೆಂಬ ಕೂಸು ಸಂಸ್ಕೃತವೆಂಬ ತೊಟ್ಟಿಲಲ್ಲೇ ಬೆಳೆಯಿತು ಎಂದರು.
ಈ ಹೊತ್ತು ಸಂಸ್ಕೃತಕ್ಕಿಂತ ಇಂಗ್ಲಿಷ್ ನಮ್ಮ ಭಾಷಗೆ ಭಂಗ ತರುತ್ತಿದೆ. ಆಧುನಿಕ ತಂತ್ರಜ್ಞಾನ ಕನ್ನಡದ ಕಳೆಯನ್ನೇ ಕಳೆದುಹಾಕಿದೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳು ಎಲ್ಲೆಂದರಲ್ಲಿ ವಿಜೃಂಭಿಸಿವೆ. ಒಟ್ಟಾರೆ ಕನ್ನಡದ ಸ್ಥಿತಿ ಈಗಲೂ ಶೋಚನೀಯ. ಕಮಲ್ ಹಾಸನ್ ಪ್ರಹಸನ ಇದರ ಮುಂದುವರಿದ ಭಾಗವಷ್ಟೇ ಎಂದ ಅವರು, ಈ ವಿಚಾರ ಸಂಕಿರಣದಲ್ಲಿ ಭಾಷಾ ಪರಿಣಿತರು ಕನ್ನಡದ ಅಸ್ಥಿತೆಯನ್ನು ಕುರಿತು ದೀರ್ಘವಾಗಿ ಚರ್ಚಿಸಲಿ. ವಿದ್ಯಾವರ್ಧಕ ಸಂಘದ ಕನ್ನಡ ಕಹಳೆ ಕುರಿತ ಚಿಂತನ ಮಂಥನ ಸಮಸ್ತ ಕನ್ನಡಿಗರನ್ನು ಬಡಿದೆಬ್ಬಿಸುವಂತಾಗಲಿ ಎಂದು ಹಾರೈಸಿದರು.ಮತ್ತೇ ಗಾಢನಿದ್ದೆಗೆ ಜಾರಿ: ಕನ್ನಡ ಭಾಷೆಯ ಹುಟ್ಟಿನ ಕುರಿತು ತಲೆತಿರುಕನೊಬ್ಬನ ಹೇಳಿಕೆಯ ಪರಿಣಾಮವಾಗಿ ಮಲಗಿದ ಸಿಂಹವಾಗಿದ್ದ ಕನ್ನಡಿಗರು ಈಗ ಕೆರಳಿದ ಕೇಸರಿಯಾಗಿ ಎದ್ದು ನಿಂತಿದ್ದಾರೆ. ಆಗಾಗ ಕೆಲವು ತಮಿಳು, ಮರಾಠಿ ಕುಹಕಿಗಳು ಮಾಡುವ ಕಿರಿಕಿರಿ ಕಿರಿಕ್ಕುಗಳು ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಲೇ ಇವೆ. ಸಿಡಿದೆದ್ದಾಗ ಸುಮ್ಮನಾಗುತ್ತವೆ. ಅವು ಸುಮ್ಮನಾದಾಗ ಕನ್ನಡ ಸಿಂಗ ಮತ್ತೆ ಗಾಢನಿದ್ದೆಗೆ ಜಾರಿಬಿಡುತ್ತದೆ. ಇದಾಗದೇ ಮಾತೃಭಾಷೆ ಬಗ್ಗೆ ಸದಾ ಎಚ್ಚರ ಇರುವಂತಾಗಲಿದೆ ಎಂದು ಹಿರಿಯ ಭಾಷಾ ತಜ್ಞ ಡಾ. ಸಂಗಮೇಶ ಸವದತ್ತಿಮಠ ಹೇಳಿದರು.