ದಾವಣಗೆರೆ ವಿನೋಬ ನಗರದ ಶ್ರೀ ವೀರ ವರಸಿದ್ಧಿ ವಿನಾಯಸ ಸ್ವಾಮಿ ದೇವಸ್ಥಾನ ಸಂಘದ 34ನೇ ವರ್ಷದ ಶ್ರೀ ವಿನಾಯಕನ ಬೃಹತ್ ಶೋಭಾಯಾತ್ರೆ, ವಿಸರ್ಜನಾ ಕಾರ್ಯಕ್ರಮ 9ನೇ ದಿನವಾದ ಮಂಗಳವಾರ ಸಡಗರ ಸಂಭ್ರಮದಿಂದ ನೆರವೇರಿತು.
- ಗಣಪನ ಮೆರವಣಿಗೆ ಟ್ರ್ಯಾಕ್ಟರ್‌ನ ಸಾರಥಿಯಾದ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ । ಬಾತಿ ಕೆರೆಯಲ್ಲಿ ಗಣೇಶ ವಿಸರ್ಜನೆ - ವಿಘ್ನೇಶನಿಗೆ ನಮಿಸಿ ಟ್ರ್ಯಾಕ್ಟರ್ ಏರಿದ ಸಂಸದೆ । ಯುವಕರ ನಿಯಂತ್ರಿಸಲು ಪೊಲೀಸರ ಸಾಹಸ, ಲಘು ಲಾಠಿ ಪ್ರಹಾರ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಇಲ್ಲಿನ ವಿನೋಬ ನಗರದ ಶ್ರೀ ವೀರ ವರಸಿದ್ಧಿ ವಿನಾಯಸ ಸ್ವಾಮಿ ದೇವಸ್ಥಾನ ಸಂಘದ 34ನೇ ವರ್ಷದ ಶ್ರೀ ವಿನಾಯಕನ ಬೃಹತ್ ಶೋಭಾಯಾತ್ರೆ, ವಿಸರ್ಜನಾ ಕಾರ್ಯಕ್ರಮ 9ನೇ ದಿನವಾದ ಮಂಗಳವಾರ ಸಡಗರ ಸಂಭ್ರಮದಿಂದ ನೆರವೇರಿತು.
ವಿನೋಬ ನಗರ 2ನೇ ಮುಖ್ಯರಸ್ತೆಯ ಶ್ರೀ ವೀರ ವರಿಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನ ಸಂಘದಿಂದ ಪ್ರತಿಷ್ಟಾಪಿಸಿದ್ದ ಶ್ರೀ ವಿನಾಯಕನ ವಿಸರ್ಜನೆಯ ಬೃಹತ್ ಶೋಭಾಯಾತ್ರೆಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ಮಧ್ಯಾಹ್ನ 2.40ರ ವೇಳೆಗೆ ಶ್ರೀ ವಿನಾಯಕನಿದ್ದ ಟ್ರ್ಯಾಕ್ಟರ್‌ಗೆ ಸಾರಥಿಯಾಗಿ ಮುನ್ನಡೆಸುವ ಮೂಲಕ ಶೋಭಾಯಾತ್ರೆಗೆ ಕಳೆ ತಂದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಇತರರು ಶ್ರೀ ಗಣೇಶನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಶ್ರೀ ಗಣೇಶ ದೇವಸ್ಥಾನದಿಂದ ವಿನೋಬ ನಗರ ಮಸೀದಿ ದಾಟುವವರೆಗೂ ಟ್ರ್ಯಾಕ್ಟರ್‌ನಲ್ಲಿ ಕುಳಿತು, ಎಲ್ಲರಿಗೂ ಕೈ ಮುಗಿಯುತ್ತಾ ಸಾಗುತ್ತಿದ್ದ ದೃಶ್ಯಕಂಡು ಬಂದಿತು.
ಎರಡು ಡಿಜೆ, ನಾಸಿಕ್ ಡೋಲು, ಡೊಳ್ಳು ಮೆರವಣಿಗೆಗೆ ಮೆರಗು ನೀಡಿದವು. ಡೊಳ್ಳು ಕುಣಿತ, ತಮಟೆ ಸದ್ದು ಹಾಗೂ ವೀರಗಾಸೆ ಸಮಾಳದ ಸದ್ದು ಜನರಲ್ಲಿ ಭಕ್ತಿಯ ಭಾವ ಮೂಡಿಸಿದವು. ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಶಾಲೆ-ಕಾಲೇಜು ವಿದ್ಯಾರ್ಥಿಗಳು, ಯುವಕರು ಡಿಜೆ ಹಾಡುಗಳಿಗೆ, ನಾಸಿಕ್ ಡೋಲು, ಡೊಳ್ಳಿನ ಶಬ್ದಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಗಣೇಶನ ಶೋಭಾಯಾತ್ರೆ ಮಸೀದಿ ಬಳಿಗೆ ಆಗಮಿಸುತ್ತಿದ್ದಂತೆ ಯುವಕರ ಪಡೆ ಕಿಕ್ಕಿರಿದು ಸೇರಿತ್ತು. ಈ ವೇಳೆ ಯುವಕರ ಪಡೆಯನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಮೆರವಣಿಗೆ ಸಾಗುವಾಗ ಎದುರಿಗೆ ಬರುತ್ತಿದ್ದ ಯುವಕರಿಗೆ ಪೊಲೀಸರು ಲಘು ಲಾಠಿ ಬೀಸುತ್ತಾ, ಬೆತ್ತದ ರುಚಿ ತೋರಿಸುತ್ತಾ, ನಿಯಂತ್ರಿಸಿದರು. ಬಳಿಕ ಮೆರವಣಿಗೆ ಸುಗಮವಾಗಿ ಮಸೀದಿ ಬಿಟ್ಟು ಸಾಗಿತು. ವಿನೋಬನಗರದಲ್ಲಿ ಮೆರವಣಿಗೆಯುದ್ದಕ್ಕೂ ಭಕ್ತರು ಗಣಪನಿಗೆ ಪುಷ್ಪವೃಷ್ಟಿ ಸುರಿಸುತ್ತಾ, ಕೈ ಮುಗಿಯುತ್ತಾ ನಿಂತಿದ್ದರು.
ಮಹಡಿ ಮೇಲೆ ನಿಂತ ಭಕ್ತರು ಜೈಕಾರ ಹಾಕುತ್ತಾ, ಗಣಪತಿ ಮೆರವಣಿಗೆಯನ್ನು ವೀಕ್ಷಿಸಿ ಗಣಪತಿಗೆ ಪುಷ್ಪಾರ್ಚನೆ ಮಾಡಿ, ಕಣ್ಣು ಮನ ತುಂಬಿಕೊಂಡರು. ಮೆರವಣಿಗೆಯಲ್ಲಿ ಗಣೇಶ ಮೂರ್ತಿಯ ಜೊತೆಗೆ ವೀರಾಂಜನೇಯ ಸ್ವಾಮಿಯ ಮೂರ್ತಿಯನ್ನೂ ತರಲಾಗಿತ್ತು. ಮಸೀದಿ ಸಮೀಪ ಮೆರವಣಿಗೆ ಬರುತ್ತಿದ್ದಂತೆ ಮುಸ್ಲಿಮರು ಗಣೇಶ ಮೂರ್ತಿಗೆ ತಮ್ಮ ಭಕ್ತಿ ಸಮರ್ಪಿಸಿದರು. ಮಸೀದಿ ಸಮೀಪ ಬ್ಯಾರಿಕೇಡ್ ಅಳವಡಿಸಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ಸಿಸಿಟಿವಿ ಕ್ಯಾಮೆರಾಗಳ ನಿಗಾ ಇಡಲಾಗಿತ್ತು. ಮೆರವಣಿಗೆ ಸಾಗುತ್ತಿದ್ದ ಮಾರ್ಗದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ಎರಡು ಡ್ರೋನ್ ಕ್ಯಾಮೆರಾಗಳು ಕಣ್ಗಾವಲಿದ್ದು, ಯುವಕರ ಚಲನವಲನಗಳನ್ನು ಸೆರೆಹಿಡಿಯುತ್ತಿದ್ದವು. ಮೆರವಣಿಗೆ ವಿನೋಬನಗರ 2ನೇ ಮುಖ್ಯ ರಸ್ತೆಯಿಂದ ಪ್ರಾರಂಭವಾಗಿ ಪಿ.ಬಿ. ರಸ್ತೆಯ ಮುಖಾಂತರ ವೀರರಾಣಿ ಚನ್ನಮ್ಮ ವೃತ್ತದ ಮುಖಾಂತರ ಪಿ.ಜೆ ಬಡಾವಣೆ 4ನೇ ಮುಖ್ಯರಸ್ತೆ ಮುಖಾಂತರ ಯುನಿಟಿ ಆಸ್ಪತ್ರೆ ರಸ್ತೆಯ ಬಲಕ್ಕೆ ತಿರುವು ಪಡೆದು, ನಂತರ 5ನೇ ಮೇನ್ ಮುಖಾಂತರ ಚರ್ಚ್ ರಸ್ತೆ ತಲುಪಿತು. ವಿನೋಬ ನಗರ 1ನೇ ಮೇನ್ ಮಾರ್ಗವಾಗಿ ಹಳೇ ಪಿ.ಬಿ ರಸ್ತೆ ಮುಖಾಂತರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬಂದು ಅದೇ ಪಿ.ಬಿ. ರಸ್ತೆ ಮುಖಾಂತರ ಬಾತಿ ಕೆರೆಯಲ್ಲಿ ಗಣೇಶ ವಿಸರ್ಜನೆ ನಡೆಯಿತು.
ಜನಪದ ಕಲಾವಿದರಿಗೆ ಹುರಿದುಂಬಿಸಿದ ಸಂಸದೆ:
ಮೆರವಣಿಗೆಗೆ ಕಳೆ ತಂದಿದ್ದ ಡೊಳ್ಳು ಕುಣಿತ, ತಮಟೆ ವಾದನ, ವೀರಗಾಸೆ ಸೇರಿದಂತೆ ಜನಪದ ಕಲಾ ತಂಡಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಪ್ಪಾಳೆ ತಟ್ಟುವ ಮೂಲಕ ಕಲಾವಿದರಿಗೆ ಹುರಿದುಂಬಿಸುವುದು ಕಂಡು ಬಂತು. 2 ಡಿಜೆಗೆ ಅವಕಾಶ ನೀಡಲಾಗಿತ್ತು. ಆರಂಭದಲ್ಲಿ ಹೆಚ್ಚು ಶಬ್ಧ ಕಾರುತ್ತಿದ್ದ ಡಿಜೆಗಳನ್ನು ಪೊಲೀಸರು ತಡೆದರು. ಇಷ್ಟೊಂದು ಶಬ್ದ ಬರುವ ಹಾಡನ್ನು ಹಾಕಿದರೆ, ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ನೀಡುವುದಿಲ್ಲ ಎಂದು ಆಯೋಜಕರಿಗೆ ಸೂಚಿಸಿದರು. ಬಳಿಕ ಕೆಲ ಕಾಲ ಡಿಜೆ ನಿಲ್ಲಿಸಿ, ತ್ತು. ಮೆರವಣಿಗೆಗೆ ಚಾಲನೆ ಸಿಕ್ಕ ನಂತರ ಕಡಿಮೆ ಶಬ್ದದೊಂದಿಗೆ ಹಾಡುಗಳ ಸದ್ದಿಗೆ ಯುವಕರು ಹುಚ್ಚೆದ್ದು ಕುಣಿದರು.
ಬಿಗಿ ಪೊಲೀಸ್ ಬಂದೋಬಸ್ತ್:
ಗಣೇಶ ಶೋಭಾಯಾತ್ರೆ ಹಿನ್ನೆಲೆ ವಿನೋಬ ನಗರದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಮೂಲಕ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹೆಚ್ಚಿನ ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿದ್ದು, ಮೆರವಣಿಗೆಯಲ್ಲಿ ಹುಚ್ಚೆದ್ದು ಕುಣಿಯುತ್ತಿದ್ದವರ ಮಧ್ಯೆದಲ್ಲಿಯೇ ಇದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅಸ್ಪದ ಕೊಡದಂತೆ ನಿಗಾ ವಹಿಸಿದ್ದು ವಿಶೇಷವಾಗಿತ್ತು. ಶ್ರೀ ವೀರ ವರಸಿದ್ಧಿ ವಿನಾಯಕ ಸ್ವಾಮಿ ಸೇವಾ ಸಮಿತಿಯಿಂದ ಸುಮಾರು 2.5 ಕ್ವಿಂಟಲ್ ಅಕ್ಕಿಯಿಂದ ಪಲಾವ್ ತಯಾರಿಸಿ ಪೊಲೀಸ್ ಸಿಬ್ಬಂದಿ, ಕಲಾವಿದರು, ಭಕ್ತರು, ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು.
ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಟ ಡಾ.ಎಚ್.ಟಿ.ಶೇಖರ್, ಜೆಡಿಎಸ್ ಮುಖಂಡ ಗಣೇಶ ಟಿ.ದಾಸಕರಿಯಪ್ಪ, ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ, ದೇವಸ್ಥಾನ ಸಂಘದ ಅಧ್ಯಕ್ಷ ಬಾಬಣ್ಣ, ಕಾರ್ಯದರ್ಶಿ ನಾಗರಾಜ, ಡಿ.ಕೆ.ರಮೇಶ, ಮಂಜುನಾಥ, ಕುಮಾರ, ದೇವರಮನಿ ಶಿವರಾಜ, ರವಿ, ನಂದೀಶ, ವಿಘ್ನೇಶ, ಪ್ರಶಾಂತ, ನರಸಿಂಹ ಮೂರ್ತಿ, ಆನಂದ, ಮಲ್ಲೇಶಿ, ಸಂತು ಹಾಗೂ ಸಮಿತಿ ಪದಾದಿಕಾರಿಗಳು, ಸದಸ್ಯರು, ಶ್ರೀ ರಾಮ ಸೇನೆಯ ಅಧ್ಯಕ್ಷ ಮಣಿಕಂಠ ಸರ್ಕಾರ್, ಜೊಳ್ಳಿ ಗುರು, ಸತೀಶ ಶೆಟ್ಟಿ, ಬಿ.ವಿ.ಗುರುನಾಗ, ಪಂಚಾಕ್ಷರಯ್ಯ, ಸಂತೋಷ ಏಕಬೋಟೆ, ಇತರರು, ಸದ್ಭಕ್ತರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.