The production and sale of narcotics is a grave crime.
-ಮಾದಕ ವಸ್ತುಗಳ ದುರುಪಯೋಗ । ಪೋಕ್ಸೋ ಕಾಯ್ದೆ -2012ರ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ
--
ಕನ್ನಡಪ್ರಭ ವಾರ್ತೆ ಯಾದಗಿರಿ
ಮಾದಕ ವಸ್ತುಗಳ ಉತ್ಪಾದನೆ, ಮಾರಾಟ ಇದು ಅತಿ ಘೋರ ಅಪರಾಧವಾಗಿದೆ ಮತ್ತು ಸೇವನೆ ಕೂಡಾ ಕಾನೂನು ವಿರೋಧಿಯಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ್ ಶೆಟ್ಟಿ ಹೇಳಿದರು.
ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಮತ್ತು ಯಿಮ್ಸ್ ಆಸ್ಪತ್ರೆ ಸಂಯುಕ್ತವಾಗಿ ಇಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಾದಕ ವಸ್ತುಗಳ ದುರುಪಯೋಗ ಮತ್ತು ಪೋಕ್ಸೋ ಕಾಯ್ದೆ -2012 ರ ಕುರಿತು ಕಾನೂನು ಅರಿವು -ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ದೇಶ ನಾಶವಾಗಲು ಯುದ್ಧ, ಭೂಕಂಪ, ಸುನಾಮಿ ಆಗಬೇಕೆಂದಿಲ್ಲ. ಅಲ್ಲಿನ ಯುವ ಸಮೂಹಕ್ಕೆ ಡ್ರಗ್ಸ್ ಸೇವೆನೆಯ ದಾಸರನ್ನಾಗಿ ಮಾಡಿದರೇ ಸಾಕು ಆದೇಶ ಸರ್ವನಾಶವಾಗುತ್ತದೆ ಎಂದರು.
ಪಂಜಾಬ ರಾಜ್ಯ ಒಂದು ಕಾಲದಲ್ಲಿ ಅತಿಹೆಚ್ಚು ಯೋಧರನ್ನು ದೇಶಕ್ಕೆ ಕೊಟ್ಟ ರಾಜ್ಯವಾಗಿತ್ತು, ಆದರೆ, ಇಂದು ಅತಿಹೆಚ್ಚು ಡ್ರಗ್ಸ್ ಸೇವನೆ ಮಾಡುವ ಯುವಜನತೆ ಅಲ್ಲಿ ಸಿಗುತ್ತಾರೆ ಎಂದು ಉದಾಹರಣೆಯೊಂದಿಗೆ ಶಶಿಧರ ಶೆಟ್ಟಿ ವಿವರಿಸಿದರು.
ಪಂಜಾಬ ಪಕ್ಕದಲ್ಲಿಯೇ ಬರುವ ಪಾಕಿಸ್ತಾನ, ಬಾಂಗ್ಲಾ ಮತ್ತು ಶ್ರೀಲಂಕಾ, ಮಲೇಶಿಯಾ ಸೇರಿದಂತೆಯೇ ಇತರೆ ರಾಷ್ಟ್ರಗಳಲ್ಲಿ ವಿವಿಧ ತರಹದ ಡ್ರಗ್ಸ್ ಗಳನ್ನು ಉತ್ಪಾದನೆ ಮಾಡಲಾಗುತ್ತದೆ. ಉತ್ಪಾದಿಸಿದ ಡ್ರಗ್ಸ್‌ನ್ನು ಕಳ್ಳಸಾಗಾಣಿಕೆ ಮೂಲಕ ದೇಶಕ್ಕೆ ತಂದು ಮಾರಾಟ ಮಾಡುವ ಒಂದು ಕಾಲವಿತ್ತು. ಆದರೆ ಈಗ ಇಲ್ಲಿಯೇ ಉತ್ಪಾದನೆ ಮಾಡಿ ಇಡಿ ದೇಶದ ತುಂಬೆಲ್ಲಾ ಸರಬರಾಜು ಮಾಡುವ ದೊಡ್ಡ ಜಾಲವೇ ಇಲ್ಲಿದೆ. ಇದರಿಂದಾಗಿಯೇ ಯುವ ಜನತೆ, ಉಳ್ಳುವವರು ಇದಕ್ಕೆ ದಾಸರಾಗಿ ಜೀವನ ನಾಶ ಮಾಡಿಕೊಳ್ಳುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಗಾಂಜಾ, ಡ್ರಗ್ಸ್, ಸಿಗರೇಟ, ಗುಟಕಾ ಇತರೇ ನಶೆ ಭರಿತ ವಸ್ತುಗಳಿಗೆ ಬಲಿಯಾದವರನ್ನು ಕೌನ್ಸಿಂಗ್ ಮಾಡಿ ಸರಿದಾರಿಗೆ ತರಬಹುದು. ಇದು ಮಾಡಲು ಒಂದು ಟೀಮ್ ಇದ್ದು, ಅಂತಹವರನ್ನು ಕರೆದುಕೊಂಡು ಬಂದು ಸೂಕ್ತ ಚಿಕಿತ್ಸೆ ಮತ್ತು ಕೌನ್ಸಿಂಗ್ ಕೊಡಿಸಿ ಎಂದರು.
ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚು ಕುಡಿತ ಚಟವಿದ್ದರೂ ಇದ್ದಾರೆಂಬ ಮಾಹಿತಿ ಇದೆ. ಜತೆಗೆ ಗಾಂಜಾ ಇತರೇ ನಶೆ ಭರಿತ ವಸ್ತುಗಳ ಸೇವನೆ ಮಾಡುವವರು ಇರುವುದು ಪತ್ತೆಯಾಗಿದ್ದು, ಇದನ್ನು ಸಂಪೂರ್ಣ ನಿಯಂತ್ರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಶ್ರಮಿಸಬೇಕೆಂದು ಶೆಟ್ಟಿ ಅವರು ಸಲಹೆ ನೀಡಿದರು.
ಶಾಲಾ, ಕಾಲೇಜುಗಳ ಹತ್ತಿರವೇ ಈ ಮಾದಕ ವಸ್ತುಗಳ ಮಾರಾಟ ಜಾಸ್ತಿ ಇದೆ ಎಂಬ ಮಾಹಿತಿ ಇದೆ. ಕಾರಣ ಅವರವರ ವ್ಯಾಪ್ತಿಯಲ್ಲಿ ಇದರ ಮಾರಾಟಗಾರರನ್ನು ಹಿಡಿದು ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಅವರು ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಸತ್ರ ನ್ಯಾ. ಮರುಳಸಿದ್ದಾರಾಧ್ಯ ಎಚ್.ಜೆ.ಅವರು ಮಾತನಾಡಿ, ಪೋಕ್ಸೋ ಕಾಯ್ದೆ -2012ರ ಕುರಿತು ವಿವರಿಸಿ, ಇದೊಂದು ಕಠಿಣ ಕಾಯ್ದೆಯಾಗಿದೆ. ಅಪ್ರಾಪ್ತ ಮಹಿಳೆ, ಪುರುಷರ ಮೇಲೆ ಬಲತ್ಕಾರ ಸೇರಿದಂತೆಯೇ ವಿವಿಧ ತರಹದ ಲೈಂಗಿಕ ಶೋಷಣೆ ಮಾಡುವವರ ಮೇಲೆ ಪೋಕ್ಸೋ ಕೇಸ್ ದಾಖಲಿಸಿ ಕಠಿಣ ಶಿಕ್ಷೆ ನೀಡಬಹುದು. ಕಾರಣ, ಪೋಕ್ಸೋ ಪ್ರಕರಣದಲ್ಲಿ ಸಿಕ್ಕಿಬೀಳುವಂತಹ ಕೆಲಸ ಯಾರು ಮಾಡಬೇಡಿ ಎಂದರು. ಅಪ್ರಾಪ್ತೆಯೊಬ್ಬಳು ಗರ್ಭ ಧರಿಸಿ ವಸತಿ ನಿಯಲದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದನ್ನು ನೆನಪಿಸಿದ ಅವರು,
ಜಿಲ್ಲೆಯಲ್ಲಿ ಅಧಿಕ ದೂರುಗಳು ಈ ನಿಟ್ಟಿನಲ್ಲಿ ದಾಖಲಾಗಿರುವುದು ಕಳವಳಕಾರಿ ಸಂಗತಿ ಎಂದು ವಿಷಾಧಿಸಿದರು.
ಜಿಲ್ಲೆಯಲ್ಲೂ ಗಾಂಜಾ ಮಾರಾಟ, ಸೇವನೆ ಸಂಖ್ಯೆ ದ್ವಿಗುಣವಾಗುತ್ತಿದ್ದೂ ಇದನ್ನೂ ಕೂಡಲೇ ನಿಯಂತ್ರಿಸಬೇಕೆಂದರು.
ಯಿಮ್ಸ್ ನ ಮನೋ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪ್ರೀತಮ್ ಮಾತನಾಡಿ, ಮಾದಕ ವ್ಯಸನಕ್ಕೆ ಕಾರಣಗಳು ಮತ್ತು ಅದನ್ನು ತಡೆಯುವ ಕ್ರಮದ ಬಗ್ಗೆ ವಿವರಿಸಿದರು.
ಯಿಮ್ಸ್ ನ ವೈದ್ಯಕೀಯ ಅಧೀಕ್ಷಕ ಡಾ. ಸಂತೋಷಕುಮಾರ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿಗಳೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮರಿಯಪ್ಪ ಸ್ವಾಗತಿಸಿ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.