ಮಕ್ಕಳಲ್ಲಿರುವ ಕಲಾ ನೈಪುಣ್ಯತೆ ಹೊರಗಿನ ಲೋಕಕ್ಕೆ ಪರಿಚಯಿಸುವುದೇ ಚಿತ್ರಕಲೆಯ ಉದ್ದೇಶ

KannadaprabhaNewsNetwork |  
Published : Dec 07, 2025, 02:15 AM IST
ದದದ | Kannada Prabha

ಸಾರಾಂಶ

ಮಕ್ಕಳಲ್ಲಿರುವ ಕಲಾ ನೈಪುಣ್ಯತೆಯನ್ನು ಹೊರಗಿನ ಲೋಕಕ್ಕೆ ಪರಿಚಯಿಸುವ ಉದ್ದೇಶದಿಂದ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿರುವುದಾಗಿ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರುಮಕ್ಕಳಲ್ಲಿರುವ ಕಲಾ ನೈಪುಣ್ಯತೆಯನ್ನು ಹೊರಗಿನ ಲೋಕಕ್ಕೆ ಪರಿಚಯಿಸುವ ಉದ್ದೇಶದಿಂದ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿರುವುದಾಗಿ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಪ್ರಾಯಪಟ್ಟರು.ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕನ್ನಡಪ್ರಭ, ಸಿದ್ಧಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಏಷ್ಯಾನೆಟ್ ಸುವರ್ಣ, ಅರಣ್ಯ ಇಲಾಖೆ, ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ತುಮಕೂರು ಜಿಲ್ಲಾ ಮಟ್ಟದ ಬೃಹತ್ ಮಟ್ಟದ ಚಿತ್ರಕಲಾ ಶಿಬಿರದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಮೊಬೈಲ್‌ ಬಿಟ್ಟು ಚಿತ್ರ ರಚಿಸಿ ಎಂದ ಅವರು, ಯಾಂತ್ರಿಕ ಸೌಂದರ್ಯಕ್ಕೆ ಮಹತ್ವ ನೀಡದೇ ನಮ್ಮ ಸುತ್ತಲಿನ ಪ್ರಕೃತಿ ಸೌಂದರ್ಯಕ್ಕೆ ಕಣ್ಣು ತೆರೆದು ಮೆದುಳಿನಲ್ಲಿ ಸಂಗ್ರಹಿಸಿ ವಾಸ್ತವ ಪ್ರಕೃತಿಗೆ ಮಹತ್ವ ನೀಡಿ ಕಲಾತ್ಮಕವಾಗಿ ಕಲೆಯನ್ನು ಅರಳಿಸಿ ನಿಸರ್ಗದ ಜೊತೆಗೆ ಗುರುತಿಸಿಕೊಳ್ಳಿ ಎಂದರು. ಅರಣ್ಯ ಇಲಾಖೆ, ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದೇವೆ. ಸಿದ್ಧಗಂಗಾ ಮಠದಲ್ಲಿ ನಡೆದ ಈ ಚಿತ್ರ ಸ್ಪರ್ಧೆ ಕೇವಲ ತಾಲುಕು, ಜಿಲ್ಲಾ ಮಟ್ಟಕ್ಕೆ ಸೀಮಿತವಾಗದೆ ರಾಜ್ಯಕ್ಕೆ ಮಾದರಿಯಾದ ಸ್ಪರ್ಧೆ ಇದಾಗಿದೆ ಎಂದ ಅವರು ಇಲ್ಲಿ ಎಲ್ಲಾ ಭಾಗದ ಮಕ್ಕಳು ಪಾಲ್ಗೊಂಡಿದ್ದಾರೆ ಎಂದರು. ಸಿದ್ಧಗಂಗಾ ಮಠದಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಮತ್ತು ಉತ್ತಮ ಪ್ರತಿಭೆ ಕಂಡು ಆಚ್ಚರಿಗೊಂಡಿರುವುದಾಗಿ ತಿಳಿಸಿದರು.

ಇಂದಿನ ಮಕ್ಕಳು ತಂತ್ರಜ್ಞಾನದ ಮಹತ್ವ ಬಲ್ಲವರಾಗಿದ್ದಾರೆ. ಆದರೂ ಇಲ್ಲಿನ ಮಕ್ಕಳು ಕಲಿತಿರುವ ಕಲಾ ಕೌಶಲ ರೇಖೆಗಳಲ್ಲಿ ಮೂಡಿ ಕಣ್ಣು ತಣಿಸಿ ಜನ ಮೆಚ್ಚಿಗೆ ಪಡೆದು ಮನಸ್ಸನ್ನು ಅರಳಿಸುತ್ತದೆ ಎಂದು ಮೆಚ್ಚುಗೆ ಸೂಚಿಸಿದರು. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಕಲಾ ಪ್ರತಿಭೆಗೆ ವೇದಿಕೆ ಕಲ್ಪಿಸುವ ಮೂಲಕ ಮಕ್ಕಳು ಪ್ರಸಿದ್ಧಿ, ಪ್ರಬುದ್ಧತೆಯನ್ನು ಗಳಿಸಿ ಕೊಂಡು ಉತ್ತಮ ಕಲಾವಿದರಾಗಿ ರೂಪುಗೊಳ್ಳುವಂತಾಗಲಿ ಎಂದರು.

ಧನ್ಯತಾ ಭಾವ....

ತುಮಕೂರಿನ ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಪ್ರಾರ್ಥನೆ ಬಗ್ಗೆ ಕೇಳಿದ್ದೆ. ಇವತ್ತು ಕಣ್ಣಾರೆ ನೋಡಿದ್ದೇನೆ. ಹೀಗಾಗಿ ನನಗೆ ಧನ್ಯತಾ ಭಾವ ಮೂಡಿದೆ ಎಂದ ಅವರು ನಾನು ಜಗತ್ತಿನ ಹಲವು ಕಡೆ ಹೋದಾಗ ಹಲವಾರು ಮಂದಿ ಭೇಟಿಯಾಗುತ್ತಾರೆ. ಅವರೆಲ್ಲಾ ತಾವು ಇಷ್ಟು ಶಿಸ್ತು ಬದ್ಧರಾಗಿ ಬದುಕುತ್ತಿರುವುದಕ್ಕೆ ಕಾರಣ ಸಿದ್ಧಗಂಗಾ ಮಠ ಎಂದು ಹೆಮ್ಮೆಯಿಂದ ಹೇಳುತ್ತಾರೆ ಎಂದರು.ಮೊಬೈಲ್ ಬಿಡಿ , ಚಿತ್ರ ರಚಿಸಿ ಎಂದು ನೀಡಿದ ಕರೆಗೆ ರಾಜ್ಯದ ವಿವಿಧ ಭಾಗಗಳಿಂದ ಕಲಾ ಪ್ರತಿಭೆಯುಳ್ಳವರು ತಮ್ಮ ಕಲಾ ಕೌಶಲ ತೋರಲು ಬಂದಿರುವುದು ನನಗೆ ಸಂತಸ ತಂದಿದೆ. ಕಣ್ಣಿಂದ ನೋಡಿದ್ದನ್ನು ವಾಸ್ತವವಾಗಿ ರಚಿಸಿ ಕೊಡಲು ಮಕ್ಕಳು ಪ್ರತಿಭಾವಂತರಾಗಿರಬೇಕು. ಮತ್ತು ಕಲಾ ಸೂಕ್ಷ್ಮತೆಯನ್ನು ಬಲ್ಲವರಾಗಿರಬೇಕು ಎಂದರು.ಸಾನಿಧ್ಯ ವಹಿಸಿ ಮಾತನಾಡಿದ ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಟಿವಿ,ಮೊಬೈಲ್ ಪ್ರಭಾವದಿಂದ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರ ಹೊಮ್ಮಲು ಸಾಧ್ಯವಾಗುತ್ತಿಲ್ಲ. ಆದರೂ ಎಲ್ಲ ಮಕ್ಕಳಲ್ಲೂ ಪ್ರತಿಭೆ ಸುಪ್ತವಾಗಿ ಅಡಗಿದ್ದು ಅದನ್ನು ಹೊರ ತೆಗೆಯಲು ಕನ್ನಡಪ್ರಭ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದರು.ಸಾಮಾನ್ಯ ಕಲಾವಿದನಾಗಿ ರೂಪಗೊಳ್ಳುವ ವ್ಯಕ್ತಿ ನಾಳಿನ ದಿನಗಳಲ್ಲಿ ಪ್ರಪಂಚವೇ ಗುರುತಿಸುವ ಹಾಗೇ ಮಹಾನ್‌ ಕಲಾವಿದನಾಗಿ ಪ್ರಸಿದ್ಧಿ ,ಪ್ರಶಸ್ತಿ ಪಡೆಯಬಹುದು ಎಂದರಲ್ಲದೆ ಇಂತಹ ಕಾರ್ಯುಕ್ರಮಗಳು ಆಗಾಗ್ಗೆ ನೆಡಯುವುದರಿಂದ ಪ್ರತಿಭಾವಂತರು ಬೆಳಕಿಗೆ ಬರುವರು. ಸರಿಯಾದ ಪ್ರೋತ್ಸಾಹ ಸಿಕ್ಕರೆ ವಜ್ರಕ್ಕೆ ಹೊಳಪು ಬಂದಂತಾಗುತ್ತದೆ ಎಂದರು.ಬೆಳಿಗ್ಗೆಯಿಂದ ಸಿದ್ಧಗಂಗಾ ಮಠದಲ್ಲಿ ಮಕ್ಕಳು ತಮ್ಮ ಕಲ್ಪನೆಯ ಚಿತ್ರಗಳನ್ನು ಬರೆದಿದ್ದಾರೆ. ಮುಂದೆ ಈ ಮಕ್ಕಳು ದೊಡ್ಡ ಕಲಾವಿದರಾಗಿ ರೂಪುಗೊಳ್ಳಲಿ ಎಂದು ತಿಳಿಸಿದರು. ಇದೇ ವೇಳೆ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರವಿ ಹೆಗಡೆ ದಂಪತಿಯನ್ನು ಶ್ರೀ ಮಠದಿಂದ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಕಳ್ಳತನಕ್ಕೆ ಕಳ್ಳರ ವಿಫಲಯತ್ನ
ಕೇಂದ್ರ ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ