ಅಪ್ರತಿಮ ರಾಷ್ಟ್ರಪ್ರೇಮಿ, ಅಜಾತಶತ್ರು ವಾಜಪೇಯಿ: ನಿಂಗರಾಜ್‌ಗೌಡ

KannadaprabhaNewsNetwork | Published : Dec 26, 2024 1:00 AM

ಸಾರಾಂಶ

ವಾಜಪೇಯಿ ಅವರು ದೆಹಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ೧೦ ಬಾರಿ ಸಂಸದರಾಗಿ, ೨ ಬಾರಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ, ಮಧ್ಯ ಪ್ರದೇಶದಲ್ಲಿ ಹುಟ್ಟಿ ಇಡೀ ದೇಶದಲ್ಲಿ ಒಬ್ಬ ರಾಜಕಾರಣಿ ಹೇಗಿರಬೇಕು, ಅಜಾತಶತ್ರುವಾಗಿ ಹೇಗೆ ಬಾಳಬೇಕು ಎಂಬುದಕ್ಕೆ ಮಾದರಿ ನಾಯಕರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಟಲ್ ಬಿಹಾರಿ ವಾಜಪೇಯಿ ಅಪ್ರತಿಮ ರಾಷ್ಟ್ರಪ್ರೇಮಿ, ಅಜಾತಶತ್ರು, ಅತ್ಯುತ್ತಮ ಸಂಘಟಕ, ದಿಟ್ಟ ಆಡಳಿತಗಾರ ಹಾಗೂ ವಿಶ್ವಕ್ಕೆ ಉತ್ತಮ ಮಾದರಿ ಸಂಸದೀಯ ಪಟುವಾಗಿದ್ದಾರೆ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ನಗರದಲ್ಲಿರುವ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ವಿಭಾಗದ ಮಮತೆ ಮಡಿಲು ನಿತ್ಯದಾಸೋಹ ಕೇಂದ್ರದಲ್ಲಿ ಲಯನ್ಸ್ ಸಂಸ್ಥೆ ಆಫ್ ಮೈಸೂರು ಗಾರ್ಡನ್ ಸಿಟಿ ಮೈಸೂರು, ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಷನ್ ಆಯೋಜಿಸಿದ್ದ ಭಾರತ ರತ್ನ, ಮಾಜಿ ಪ್ರಧಾನಿ, ಡಾ.ಅಟಲ್ ಬಿಹಾರಿ ವಾಜಪೇಯಿ ನೂರನೇ ಜಯಂತಿ ಪ್ರಯುಕ್ತ ಗರ್ಭಿಣಿ ಬಾಣಂತಿ-ಅಗತ್ಯವುಳ್ಳವರಿಗೆ ಪೌಷ್ಟಿಕಾಹಾರ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಂಗ್ರೆಸ್ಸೇತರ ಸರ್ಕಾರ ರಚನೆಗೆ ಕಾರಣರಾದ ವಾಜಪೇಯಿ ಅವರು ಮೂರು ಬಾರಿ ಬೇರೆ ಬೇರೆ ಪರಿಸ್ಥಿತಿಯಲ್ಲಿ ಪ್ರಧಾನ ಮಂತ್ರಿಯಾಗಿದ್ದರು. ೨೩ ಪಕ್ಷಗಳ ಎನ್‌ಡಿಎ ಮೈತ್ರಿಕೂಟದಲ್ಲಿ ಉತ್ತಮ ಆಡಳಿತ ನೀಡಿದ್ದರು. ವಿಶ್ವ ರಾಷ್ಟ್ರಗಳ ಬೆದರಿಕೆಗೆ ಮಣಿಯದೆ ಭಾರತದ ಅಣುಶಕ್ತಿ ಬಲ ಪ್ರದರ್ಶಿಸಿದ್ದರು ಎಂದರು.

ವಾಜಪೇಯಿ ಅವರು ದೆಹಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ೧೦ ಬಾರಿ ಸಂಸದರಾಗಿ, ೨ ಬಾರಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ, ಮಧ್ಯ ಪ್ರದೇಶದಲ್ಲಿ ಹುಟ್ಟಿ ಇಡೀ ದೇಶದಲ್ಲಿ ಒಬ್ಬ ರಾಜಕಾರಣಿ ಹೇಗಿರಬೇಕು, ಅಜಾತಶತ್ರುವಾಗಿ ಹೇಗೆ ಬಾಳಬೇಕು ಎಂಬುದಕ್ಕೆ ಮಾದರಿ ನಾಯಕರಾಗಿದ್ದಾರೆ ಎಂದು ಸ್ಮರಿಸಿದರು.

ಅವರ ಅಧಿಕಾರಾವಧಿಯಲ್ಲಿ ಅನೇಕ ಮಹತ್ವದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾದರು. ಹೀಗಾಗಿ ದೇಶದ ಅಭಿವೃದ್ಧಿಗೆ ವಾಜಪೇಯಿ ನೀಡಿದ ಕೊಡುಗೆಯನ್ನು ಸ್ಮರಿಸಲು ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ವಿಶ್ವದ ಬೆದರಿಕೆಗೆ ಅಂಜದೆ ಭಾರತದ ಅಣುಶಕ್ತಿ ಬಲ ಜಗತ್ತೀಗೆ ತೋರಿಸಿದವರು ಅಟಲ್ ಜಿರವರು. ದೂರಸಂಪರ್ಕ, ಸಂವಹನದ ಹರಿಕಾರ, ರಾಷ್ಟ್ರ ಮೊದಲು, ಅಧಿಕಾರ ನಂತರ ಎಂಬ ಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದಿಸಿದ್ದರು.

ಪ್ರಧಾನಿ ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಡಳಿತ ಹಾಗೂ ಈಗಿನ ವಿಕಸಿತ ಭಾರತದ ಆಡಳಿತ, ವಾಜಪೇಯಿಯವರ ಆಡಳಿತದ ಹಾದಿಯಲ್ಲೇ ಸಾಗಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ಪೌರತ್ವ ಕಾಯ್ದೆ ತಿದ್ದುಪಡಿ, ಅಯೋದ್ಯೆಯಲ್ಲಿ ರಾಮಮದಿಂರ ನಿರ್ಮಾಣದ ವಿಚಾರದಲ್ಲಿ ವಾಜಪೇಯಿಗೆ ಕನಸುಗಳಿದ್ದು, ಅದನ್ನೂ ಪ್ರಧಾನಿ ನರೇಂದ್ರ ಮೋದಿಯವರು ಈಡೇರಿಸಿದ್ದಾರೆ. ಆಯುಷ್ಮಾನ್ ಭಾರತ್, ಅವಾಸ್, ಜಲಜೀವನ್ ಮಿಷನ್, ಕಿಸಾನ್ ಸಮ್ಮಾನ್ ಮೊದಲಾದ ಯೋಜನೆಗಳು ತಳಮಟ್ಟದ ಜನರನ್ನು ತಲುಪಿ ಬದುಕಿನ ಗುಣಮಟ್ಟವನ್ನು ಸುಧಾರಿಸುತ್ತಿವೆ. ಇಂತಹ ಸಾಧನೆಗಳೇ ವಾಜಪೇಯಿಯವರ ನೆನಪಿನಲ್ಲಿ ಉತ್ತಮ ಆಡಳಿತ ದಿನಕ್ಕೆ ಶಕ್ತಿ ತುಂಬುತ್ತವೆ ಎಂದರು.

ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಎನ್.ಸುಬ್ರಹ್ಮಣ್ಯ, ಜಿಲ್ಲಾಸ್ಪತ್ರೆಯಲ್ಲಿ ನಿತ್ಯದಾಸೋಹ ಮಾಡುವ ಮೂಲಕ ಸರಳವಾಗಿ ಅವಿಸ್ಮರಣೀಯ ಚೇತನ ವಾಜಪೇಯಿ ಅವರ ಜನ್ಮದಿನ ಆಚರಣೆ ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆ ಆಫ್ ಮೈಸೂರು ಗಾರ್ಡನ್ ಸಿಟಿ ಮೈಸೂರು ಅಧ್ಯಕ್ಷ ಬಿ.ಎಸ್.ಉಮಾಶಂಕರ್, ಲಯನ್ ನಾಗೇಶ್‌ಮೂರ್ತಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಎಂ.ಯೋಗೇಶ್, ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಷನ್ ಅಧ್ಯಕ್ಷ ಡಿ.ಶ್ರೀಕಂಠೇಗೌಡ ನೆಲಮನೆ, ಉಪಾಧ್ಯಕ್ಷ ವೈ.ಎಚ್.ಲೋಹಿತ್‌ಕುಮಾರ್, ಉಪನ್ಯಾಸಕ ಎನ್.ಮಹೇಶ್, ಶಿವಪ್ರಸಾದ್ ಮತ್ತಿತರರಿದ್ದರು.

Share this article