ಕುಶಾಲನಗರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಯ ಹರಿಕಾರ ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರ ಸೇವೆಯ ಸ್ಮರಣೆ ಅಗತ್ಯ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭವಾರ್ತೆ ಕುಶಾಲನಗರ
ಕುಶಾಲನಗರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಯ ಹರಿಕಾರ ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರ ಸೇವೆಯ ಸ್ಮರಣೆ ಅಗತ್ಯ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರದ ಪುರಸಭೆ ಆವರಣದಲ್ಲಿ ಗುಂಡುರಾಯರ ಪುತ್ಥಳಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಯ ದೂರದೃಷ್ಟಿ ಇಟ್ಟುಕೊಂಡು ಹಲವು ಯೋಜನೆಗಳನ್ನು ರೂಪಿಸಿರುವ ರಾಯರು ಕೇವಲ ಕುಶಾಲನಗರಕ್ಕೆ ಸೀಮಿತವಾದ ರಾಜಕಾರಣಿ ಅಲ್ಲ ಎಂದರು.
ಅವರು ಕ್ಷೇತ್ರ ಶಾಸಕ, ರಾಜ್ಯ ಸಚಿವರು ಹಾಗೂ ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ಸೋಮವಾರಪೇಟೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕುಶಾಲನಗರ ಕೂಡ್ಲೂರು ಬಳಿ ಕೈಗಾರಿಕಾ ಬಡಾವಣೆ ನಿರ್ಮಾಣ ಸೇರಿದಂತೆ ಕುಶಾಲನಗರದ ವೇಗದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ ಎಂದು ಶಾಸಕರು ಹೇಳಿದರು.
ಮಾತನಾಡಿದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ ಪಿ ಶಶಿಧರ್, ಆರ್ ಗುಂಡೂರಾಯರು ಕುಶಾಲನಗರ ವ್ಯಾಪ್ತಿಯಲ್ಲಿ ಶಿಕ್ಷಣ ಕ್ರೀಡೆ ಮತ್ತಿತರ ಕ್ಷೇತ್ರಗಳ ಅಭಿವೃದ್ಧಿಯ ಹರಿಕಾರ ಎನ್ನಬಹುದು. ರಾಜಕೀಯ ಇಚ್ಛಾಶಕ್ತಿಯ ಮೂಲಕ ಕುಶಾಲನಗರ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಅಗತ್ಯ ಯೋಜನೆಗಳು ಸೌಲಭ್ಯಗಳನ್ನು ಒದಗಿಸುವ ಮೂಲಕ ಕುಶಾಲನಗರದ ಶೀಘ್ರ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. ತಾಲೂಕು ರಚನೆಗೆ ರಾಯರು ಮೂಲ ಕಾರಣಕರ್ತರಾಗಿದ್ದಾರೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ವಕೀಲ ಆರ್ ಕೆ ನಾಗೇಂದ್ರ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುಶಾಲನಗರದ ಹಿರಿಯರು ಹಾಗೂ ಗಣಪತಿ ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷ ವಿ ಎನ್ ವಸಂತಕುಮಾರ್ ಮಾತನಾಡಿದರು.
ಪುತ್ಥಳಿ ನಿರ್ಮಾಣದ ಬಗ್ಗೆ ಇಂಜಿನಿಯರ್ ಅರ್ಬಸ್ ಅಹಮದ್ ಮಾಹಿತಿ ಒದಗಿಸಿದರು.
ಪುರಸಭೆ ಮುಖ್ಯ ಅಧಿಕಾರಿ ಕೆಎಲ್ ಗಿರೀಶ್, ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್, ಗುಂಡೂರಾವ್ ಒಡನಾಡಿಗಳಾದ ನಿವೃತ್ತ ಶಿಕ್ಷಕರಾದ ಎಂ ಎಚ್ ನಜೀರ್ ಅಹ್ಮದ್, ರಾಯರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ ಎಂ ಎಚ್ ಫಜಲುಲ್ಲಾ, ಗುಂಡುರಾಯರ ಕುಟುಂಬ ಸದಸ್ಯರು ಹಾಗೂ ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡೂರಾವ್, ಮತ್ತು ಅಭಿಮಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.