ಕನಕಪುರ: ರತ್ನಾಕರನೆಂಬ ಬೇಟೆಗಾರನಿಗೆ ಜ್ಞಾನೋದಯವಾಗಿ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆಗೊಂಡು ನಾರದ ಮುನಿಗಳ ಮಾರ್ಗದರ್ಶನದಲ್ಲಿ ರಾಮಾಯಣ ಮಹಾಕಾವ್ಯ ರಚಿಸಿದರು ಎಂದು ಶಿಕ್ಷಣ ಇಲಾಖೆ ಅಧಿಕಾರಿ ಶ್ರೀನಿವಾಸ್ ತಿಳಿಸಿದರು.ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏಳು ಕಾಂಡಗಳನ್ನು ಒಳಗೊಂಡ ವಾಲ್ಮೀಕಿ ರಾಮಾಯಣ 24 ಸಾವಿರ ಶ್ಲೋಕಗಳನ್ನು ಹೊಂದಿರುವ ಮಹಾಕಾವ್ಯ. ರಾಮನಾಮದ ಮಹಿಮೆ ಹಾಗೂ ಜೀವನದ ಮೌಲ್ಯಗಳನ್ನು ಸಾರುವ ಈ ಕಾವ್ಯ ಜಗತ್ತಿನಲ್ಲಿ ಎಂದಿಗೂ ಸರ್ವಶ್ರೇಷ್ಠ ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ಶಿವನಳ್ಳಿ ಶಿವಲಿಂಗಯ್ಯ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ನೈತಿಕ ಮೌಲ್ಯಗಳ ಪ್ರತೀಕವಾಗಿರುವ ರಾಮಾಯಣ ಕೇವಲ ಒಂದು ಮಹಾಕಾವ್ಯವಲ್ಲ, ಅದು ಮನುಷ್ಯನ ಬದುಕಿನಲ್ಲಿ ಧರ್ಮ, ಸತ್ಯ, ತ್ಯಾಗ, ಭಕ್ತಿಗಳನ್ನು ತಿಳಿಸಿಕೊಡುವ ಮಹಾಗ್ರಂಥ. ರಾಮಾಯಣದ ಪಾತ್ರಗಳನ್ನು ಕೇವಲ ದೇವರು, ರಾಜರು ಅಥವಾ ಪೌರಾಣಿಕ ವ್ಯಕ್ತಿಗಳೆಂದು ನೋಡುವುದಕ್ಕಿಂತ, ಅವರ ನಡೆನುಡಿಗಳಿಂದ ದೊರೆಯುವ ಜೀವನದ ಪಾಠಗಳನ್ನು ಅರಿಯುವುದು ಮುಖ್ಯ. ದಶರಥನ ವಚನ ನಿಷ್ಠೆ, ರಾಮನ ತ್ಯಾಗ, ಸೀತೆಯ ಧೈರ್ಯ, ಲಕ್ಷ್ಮಣನ ಸಹೋದರ ಪ್ರೀತಿ, ಭರತನ ಅಧಿಕಾರದ ಮೇಲಿನ ನಿರಾಸಕ್ತಿ ಮತ್ತು ರಾವಣನ ಅಹಂಕಾರ......ಇವೆಲ್ಲವೂ ಮನುಷ್ಯನ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸುತ್ತವೆ ಎಂದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್, ರಾಮಾಯಣದಲ್ಲಿನ ವಿವಿಧ ಘಟನೆಗಳನ್ನು ಪ್ರಸ್ತಾಪಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಯಪ್ರಕಾಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ವಾಲ್ಮೀಕಿ ಸಮುದಾಯದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಕನಕಪುರ ತಾಲೂಕು ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.