ಅಪ್ರತಿಮ ಜ್ಞಾನದ ದೀವಿಗೆ ಮಹರ್ಷಿ ವಾಲ್ಮೀಕಿ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

KannadaprabhaNewsNetwork |  
Published : Oct 27, 2026, 01:30 AM IST
ಚಿತ್ರ 26ಬಿಡಿಆರ್54 | Kannada Prabha

ಸಾರಾಂಶ

ಮಹರ್ಷಿ ವಾಲ್ಮೀಕಿ ಅವರ ತತ್ವ-ಸಂದೇಶಗಳನ್ನು ಬದುಕಿನಲ್ಲಿ ಪಾಲಿಸಿ, ಪ್ರತಿಯೊಬ್ಬರೂ ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಮಹರ್ಷಿ ವಾಲ್ಮೀಕಿ ಅವರ ತತ್ವ-ಸಂದೇಶಗಳನ್ನು ಬದುಕಿನಲ್ಲಿ ಪಾಲಿಸಿ, ಪ್ರತಿಯೊಬ್ಬರೂ ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಕರೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪನಮನ ಸಲ್ಲಿಸಿ ಮಾತನಾಡಿ, ಅಕ್ಷರ ಜ್ಞಾನ ಮತ್ತು ಸನ್ಮಾರ್ಗದ ಬೆಳಕನ್ನು ಸಮಾಜಕ್ಕೆ ನೀಡಿದ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಹಾಗೂ ಮೌಲ್ಯಗಳು ಸಾರ್ವಕಾಲಿಕವಾಗಿ ಪ್ರಸ್ತುತವಾಗಿವೆ ಎಂದರು.

ಮಹರ್ಷಿ ವಾಲ್ಮೀಕಿಯವರ ತಪಸ್ಸು ಮತ್ತು ಸಾಧನೆ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ. ಪರಿವರ್ತನೆ ಎಂಬುದು ಯಾರಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಸಾಧ್ಯ ಎಂಬುದಕ್ಕೆ ಅವರ ಜೀವನವೇ ಸಾಕ್ಷಿ. ಸಮಾಜದ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಿಕ್ಷಣದಿಂದ ಮಾತ್ರ ಸಮಾನತೆ ಹಾಗೂ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ವಾಲ್ಮೀಕಿ ಬರೆದ ರಾಮಾಯಣ ಮಹಾಕಾವ್ಯವು ಕೇವಲ ಧಾರ್ಮಿಕ ಗ್ರಂಥವಲ್ಲ, ಅದು ಮಾನವೀಯ ಮೌಲ್ಯಗಳ ಸಾಗರ. ತಂದೆ-ತಾಯಿ, ಸಹೋದರರು ಮತ್ತು ಸಮಾಜದೊಂದಿಗಿನ ಬಾಂಧವ್ಯ ಹೇಗಿರಬೇಕು ಎಂಬುದನ್ನು ಅದು ತಿಳಿಸಿಕೊಡುತ್ತದೆ. ಸಮಾಜದಲ್ಲಿದ್ದ ಅಜ್ಞಾನ ದೂರಗೊಳಿಸಿ ಜ್ಞಾನದ ದೀವಿಗೆ ಹಚ್ಚಿದ ವಾಲ್ಮೀಕಿಯವರ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ಅವರ ಆಶಯಗಳನ್ನು ದೈನಂದಿನ ಜೀವನದಲ್ಲಿ ಪಾಲಿಸುವುದು ಅಗತ್ಯ ಎಂದರು.

ಇದೇ ವೇಳೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿಟ್ಟೆ ಮಾಧವ ವಿಠ್ಠಲರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಸಹಾಯಕ ಆಯುಕ್ತ ಅಭಿನವ ಜೈನ್, ಅಪರ ಜಿಲ್ಲಾಧಿಕಾರಿ ಸುರೇಖಾ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ್, ಪಂಡಿತರಾವ್ ಚಿದ್ರಿ, ಸುನೀಲ್ ಭಾವಿಕಟ್ಟಿ, ಸುನೀಲ್ ಖಾಶೆಂಪೂರ್, ಮಾರುತಿ ಮಾಸ್ಟರ್, ಶರಣಪ್ಪ ಶಾಶೆಂಪೂರ್, ಶಣ್ಮುಖಪ್ಪಾ ಶೇಕಾಪೂರ್, ರಾಜಕುಮಾರ ಕರ್ಣೆ, ಪ್ರಕಾಶ ಬಾಪನೋರ್, ಮಾಣಿಕ ನೇಳಗಿ, ಶಿವರಾಜ ಜಮಾದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ರಾಮಾಯಣದಿಂದ ಸಮಾಜಕ್ಕೆ ಸಂದೇಶ
ರುದ್ರಭೂಮಿ ಸ್ವಚ್ಛಗೊಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು