ಗಣೇಶ್ ತಮ್ಮಡಿಹಳ್ಳಿ
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ಪ್ರಮುಖ ಬೆಳೆಯಾಗಿದ್ದ ಭತ್ತ ಹಾಗೂ ಮೆಕ್ಕೆಜೋಳ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದು, ಈ ಪ್ರದೇಶವನ್ನು ಅಡಕೆ ಬೆಳೆ ವರ್ಷದಿಂದ ವರ್ಷಕ್ಕೆ ಆಕ್ರಮಿಸಿಕೊಳ್ಳುತ್ತಿದೆ.
ವರ್ಷದಿಂದ ವರ್ಷಕ್ಕೆ ರೈತರು ಆಹಾರ ಧಾನ್ಯದ ಬೆಳೆಯಿಂದ ವಿಮುಖರಾಗುತ್ತಿದ್ದು, ಅಡಕೆ ಬೆಳೆಯ ವಿಸ್ತೀರ್ಣ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಪಾರಂಪರಿಕ ತೋಟಗಾರಿಕೆ ಬೆಳೆಗಳಲ್ಲಿ ಪ್ರಸ್ತುತ ಅಡಕೆ ಬೆಳೆ ರೈತನ ಜೇಬು ತುಂಬಿಸುತ್ತಿದೆ. ಅಡಕೆಗೆ ಚಿನ್ನದ ಬೆಲೆ ಬಂದ ನಂತರ ರಾಜ್ಯದಲ್ಲಿ ಅಡಕೆ ಬೆಳೆಯುವ ಪ್ರಮಾಣ ಹಿಗ್ಗಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಒಂದು ವರ್ಷದ ಅವಧಿಯಲ್ಲಿ 35,000 ಹೆಕ್ಟೇರ್ ಕೃಷಿ ಭೂಮಿಯು ಅಡಕೆ ಬೆಳೆಯತ್ತ ಬದಲಾಗಿದೆ.2024-25ರಲ್ಲಿ ಜಿಲ್ಲೆಯಲ್ಲಿ 74916 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಇಲಾಖೆಯು ಮುಂಗಾರು ಹಂಗಾಮಿನ ಭತ್ತ ಬೆಳೆ ಬಿತ್ತನೆ ಗುರಿ ಹೊಂದಿತ್ತು. ಈ ಪೈಕಿ 63672 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ಇನ್ನು 47 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿದ್ದು, ಇದರಲ್ಲಿ 44290 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ಹೀಗೆ ವರ್ಷದಿಂದ ವರ್ಷಕ್ಕೆ ಮೆಕ್ಕೆಜೋಳ ಹಾಗೂ ಭತ್ತದ ಬೆಳೆ ವಿಸ್ತೀರ್ಣ ಕಡಿಮೆಯಾಗುತ್ತಲೇ ಹೋಗುತ್ತಿದೆ. ಇದಕ್ಕೆ ರೈತರು ವಾಣಿಜ್ಯ ಬೆಳೆಯಾದ ಅಡಕೆಯೆಡೆಗೆ ವಾಲಿದ್ದೇ ಕಾರಣವಾಗಿದೆ.
ಮಳೆಯಾಶ್ರಿತ ಜಮೀನಲ್ಲೂ ಅಡಕೆ:
ಹೆಚ್ಚುತ್ತಿರುವ ಧಾರಣೆಯೇ ಅಡಕೆ ಬೆಳೆ ವಿಸ್ತರಣೆಗೆ ಒಂದು ಕಾರಣವಾದರೆ, ಈ ಭಾಗದ ಪ್ರಮುಖ ಆಹಾರ ಬೆಳೆಯಾಗಿರುವ ಭತ್ತ ಬೆಳೆಯುವುದು ನಷ್ಟದ ಬಾಬ್ತು ಆಗಿರುವುದು ಮತ್ತೊಂದು ಕಾರಣವಾಗಿದೆ.
ಭತ್ತ, ಜೋಳದಿಂದ ವಿಮುಖರಾದ ರೈತರು:
ಉತ್ತಮ ಮಳೆಯಾದರೆ ಮಾತ್ರ ಭತ್ತದ ಫಸಲು ಚೆನ್ನಾಗಿ ಬರುತ್ತದೆ. ಒತ್ತುವರಿ, ರಸ್ತೆ ಮುಂತಾದ ಅಭಿವೃದ್ಧಿ ಕಾರ್ಯಗಳಿಂದ ಕಾಡು ನಾಶವಾಗಿ ಮಳೆಯ ಪ್ರಮಾಣ ಕುಸಿದಿದೆ. ವಾಡಿಕೆಯ ಮಳೆ ಪ್ರಮಾಣ ಆಗದಿರುವುದು ಸಹ ಭತ್ತ ಬೆಳೆಯಲು ಹಿಂದೇಟು ಹಾಕಲು ಕಾರಣವಾಗಿದೆ. ಕೂಲಿಯ ದರ ಹೆಚ್ಚಳವಾಗಿರುವುದು ಭತ್ತದ ಬೆಳೆಗೆ ಹಿನ್ನೆಡೆಯಾಗಿದೆ.
ಕಳೆದ ಐದು ವರ್ಷದಲ್ಲಿ ಜಿಲ್ಲೆಯಲ್ಲಿ ಅಡಕೆ ಬೆಳೆ ವಿಸ್ತೀರ್ಣಗೊಂಡಿರುವುದು
2020-21 - 102536
2021-22 - 1140392022-23 - 121264
2023-24 - 1280162024-25 - 137407
-----------------ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಭತ್ತ. ಮೆಕ್ಕೆಜೋಳವನ್ನು ಬೆಳೆಯುತ್ತಿದ್ದಾರೆ. ಆದರೆ, ಸರ್ಕಾರ ಭತ್ತ ಹಾಗೂ ಮೆಕ್ಕೆಜೋಳಕ್ಕೆ ಸರಿಯಾದ ಬೆಲೆ ಕೊಡದ ಕಾರಣ ರೈತರು ಬೆಳೆ ಬೆಳೆಯಲು ಮಾಡುವ ಖರ್ಚು ಕೂಡ ಕೈಗೆ ಸಿಗುತ್ತಿಲ್ಲ. ಅಲ್ಲದೇ ಅಡಕೆ ಧಾರಣೆ ಉತ್ತಮವಾಗಿರುವುದರಿಂದ ರೈತರು ಅಡಕೆ ಬೆಳೆಯತ್ತ ವಾಲುತ್ತಿದ್ದಾರೆ. ಇದು ಇದೇ ರೀತಿ ಮುಂದುವರಿದರೆ ಆಹಾರ ಧಾನ್ಯದ ಬೆಳೆಗಳು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಲಿದೆ. ಸರ್ಕಾರ ಈಗಾಲಾದರೂ ಎಚ್ಚೆತ್ತುಕೊಂಡು ಭತ್ತ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರದು ಸೂಕ್ತ ಬೆಲೆ ನಿಗದಿ ಮಾಡಿ ಖರೀದಿ ಮಾಡಬೇಕು.
-ಎಚ್.ಆರ್.ಬಸವರಾಜಪ್ಪ, ರೈತ ಸಂಘದ ರಾಜ್ಯಾಧ್ಯಕ್ಷ.