ಉಡುಪಿ: ಕಾರಂತರು ಮಕ್ಕಳಿಗಾಗಿ ಮಕ್ಕಳೊಂದಿಗೆ ಬೆರೆತು ಅವರನ್ನು ತಿದ್ದಿ ತೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸಿದ ನಿದರ್ಶನವನ್ನು ಕಾಣಬಹುದಾಗಿದೆ. ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಕಾರಂತರು ವಿಜ್ಞಾನ ಕಲೆ ಸಾಹಿತ್ಯದ ಸಂಗಮ. ರಂಗವಲ್ಲಿಯ ಮೂಲಕ ಡಾ.ಶಿವರಾಮ ಕಾರಂತರನ್ನು ಮಕ್ಕಳಿಗೆ ಪರಿಚಯಿಸುವುದರ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣಕ್ಕೆ ಇಂತಹ ಕಾರ್ಯಕ್ರಮಗಳು ಒಂದು ಉತ್ತಮ ಅವಕಾಶವಾಗಿದೆ ಎಂದು ಸೋದೆ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಧಾಕೃಷ್ಣ ಎಸ್ ಐತಾಳ್ ಹೇಳಿದರು.
ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯೆ ಡಾ.ಭಾರತಿ ಮರವಂತೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು, ಮಾನಸಿಕ ಆರೋಗ್ಯಕ್ಕೆ ಕಲೆ ಮತ್ತು ಸಾಹಿತ್ಯ ಅದ್ಭುತ ಕೊಡುಗೆಯನ್ನು ನೀಡುತ್ತದೆ. ಓದಿನ ಹವ್ಯಾಸ ವ್ಯಕ್ತಿತ್ವವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ಸಾಹಿತ್ಯ ಹಾಗೂ ಪುಸ್ತಕಗಳ ಓದುವಿಕೆಯ ಕುರಿತು ಆಸಕ್ತಿಯನ್ನು ಹೆಚ್ಚಿಸಿಕೊಂಡು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಇನ್ನಂಜೆ ಎಸ್.ವಿ.ಹೆಚ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಪ್ರಭು, ನಿವೃತ್ತ ಶಿಕ್ಷಕ ಸತ್ಯ ಸಾಯಿ ಪ್ರಸಾದ್, ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ನಟರಾಜ್ ಉಪಾಧ್ಯಾಯ ಸ್ವಾಗತಿಸಿ, ಅನಿತಾ ವೀರ ಮಥಾಯಸ್ ನಿರೂಪಿಸಿ, ನವೀನ್ ಶೆಟ್ಟಿ ವಂದಿಸಿದರು.