ಕನ್ನಡಪ್ರಭ ವಾರ್ತೆ ಲೋಕಾಪುರ
ಮಠಗಳ ಅಭಿವೃದ್ಧಿ, ಏಳಿಗೆಗೆ ಭಕ್ತರು ಕ್ಷೇತ್ರದ ಮೇಲಿಟ್ಟಿರುವ ಅಪಾರ ನಂಬಿಕೆ, ಒಗ್ಗಟ್ಟಿನ ಶಕ್ತಿ, ಅಭಿಮಾನ, ಭಕ್ತಿಯೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.ಸಮೀಪದ ದಾದನಟ್ಟಿ ಗ್ರಾಮದಲ್ಲಿ ಜಗದ್ಗುರು ಶಿವಾನಂದ ಮಹಾಸ್ವಾಮಿಗಳವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ನೂತನ ಮಠದ ಉದ್ಘಾಟನೆ ಹಾಗೂ ಕಳಸಾರೋಹಣದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಶಿವಾನಂದ ಮಠವು ಜಾತ್ಯತೀತ ತತ್ವ ಹೊಂದಿದೆ, ಇದು ನಮ್ಮ ಸಂಸ್ಕೃತಿಯೂ ಆಗಿದೆ. ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಯಾವುದೇ ವೈಷಮ್ಯ ಇರಬಾರದು. ನಾವೆಲ್ಲರೂ ಭಾರತೀಯರು ಎಂಬ ಭಾವನೆ ಇರಬೇಕು. ಎಲ್ಲಾ ಧರ್ಮದವರನ್ನು ಪ್ರೀತಿ, ಸಹಬಾಳ್ವೆಯಿಂದ ನಡೆಸಿಕೊಳ್ಳುವುದು ದೇಶಕ್ಕೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಶಿವಾನಂದ ಮಠಕ್ಕೆ ಸಚಿವರು ₹೧೦ ಲಕ್ಷ ವೆಚ್ಚದಲ್ಲಿ ಪ್ರಸಾದ ನಿಲಯ ಕಟ್ಟಡಕ್ಕೆ ನೀಡಲು ವಾಗ್ದಾನ ಮಾಡಿದರು. ನಂತರ ಮಠದ ವತಿಯಿಂದ ಸಚಿವರನ್ನು ಸನ್ಮಾನಿಸಿ, ಗೌರವಿಸಲಾಯಿತು.ಗದಗದ ಅಭಿನವ ಬ್ರಹನ್ಮಠದ ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ದಾದನಟ್ಟಿ ಗ್ರಾಮದ ಶಿವಾನಂದ ಮಹಾಸ್ವಾಮೀಜಿ ಅವರು ಸಾಮಾಜಿಕ ಹಾಗೂ ಧಾರ್ಮಿಕ ಕಾಳಜಿ ಹೊಂದಿದ್ದಾರೆ. ಮಾನವೀಯ ಮೌಲ್ಯದ ನೆಲೆಗಟ್ಟಿನಲ್ಲಿ ಕಾಯಕ ಮಾಡುತ್ತಾ ಭಕ್ತರೊಂದಿಗೆ ಒಡನಾಟವಿಟ್ಟುಕೊಂಡಿದ್ದು, ಎಲ್ಲರ ಭಕ್ತಿಗೆ ಪಾತ್ರರಾಗಿದ್ದಾರೆ. ಹಿರಿಯ ಸ್ವಾಮೀಜಿಗಳು ಹಾಕಿಕೊಟ್ಟ ಧರ್ಮ ಮಾರ್ಗದಲ್ಲಿ ಸಾಗುತ್ತಾ ಮಠದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಒಳ್ಳೆಯ ಬೆಳವಣೆಗೆ ಎಂದರು.
ದಾದನಟ್ಟಿ ಗ್ರಾಮದಲ್ಲಿ ಕುಂಭ ಮತ್ತು ಆರತಿ, ವಿವಿಧ ವಾದ್ಯ ಮೇಳಗಳೊಂದಿಗೆ ಶಿವಾನಂದ ಮಹಾಸ್ವಾಮಿಗಳ ಮೂರ್ತಿ ಮತ್ತು ಕಳಸವನ್ನು ಬಸವೇಶ್ವರ ದೇವಸ್ಥಾನದಿಂದ ಮಠಕ್ಕೆ ಆಗಮಿಸಿ ಶಾಸ್ತ್ರೋಕ್ತವಾಗಿ ಕಾರ್ಯಕ್ರಮ ಜರುಗಿದವು.ವೇದಿಕೆಯಲ್ಲಿ ಕಾಡರಕೊಪ್ಪ ಗ್ರಾಮದ ದಯಾನಂದ ಸರಸ್ವತಿ ಮಹಾಸ್ವಾಮಿಗಳು, ದಾದನಟ್ಟಿ ನಿಜಾನಂದ ಮಹಾಸ್ವಾಮಿಗಳು, ಕಿಲ್ಲಾ ಹೊಸಕೊಟಿ, ದಾದನಟ್ಟಿ, ಕನಸಗೇರಿ, ಮಲ್ಲಾಪುರ ಹಾಗೂ ಸುತ್ತಮುತ್ತಲಿನ ಮಠದ ಭಕ್ತರು ಇದ್ದರು.