ಕನ್ನಡಪ್ರಭ ವಾರ್ತೆ ಕಾಪು
ನಾಡಿನ ಖ್ಯಾತ ರಂಗಕರ್ಮಿಗಳಲ್ಲೊಬ್ಬರಾಗಿದ್ದ, ಸಂಘಟಕ, ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ (68) ಮತ್ತು ಅವರ ಪತ್ನಿ ವಸುಂಧರ ಶೆಟ್ಟಿ (58) ಮಂಗಳವಾರ ರಾತ್ರಿ ಬದುಕನ್ನು ಕೊನೆಗೊಳಿಸಿಕೊಂಡಿದ್ದಾರೆ.ಇಲ್ಲಿನ ಕರಂದಾಡಿಯ ತಮ್ಮ ಮನೆಯಲ್ಲಿ ಪತಿ-ಪತ್ನಿ ಸೀರೆಯಿಂದ ಕುತ್ತಿಗೆ ನೇಣು ಬಿಗಿದು ಸ್ವಯಂಹತ್ಯೆ ಮಾಡಿಕೊಂಡಿದ್ದಾರೆ. ಅವರ ನಿಧನಕ್ಕೆ ಗುರುವಾರ ಕಾಪು ಪೇಟೆಯ ವರ್ತಕರು ಸ್ವಯಂ ಬಂದ್ ಆಚರಿಸಿ ಸಂತಾಪ ವ್ಯಕ್ತಪಡಿಸಿದರು.
ಎಲ್ಲರಿಂದಲೂ ಲೀಲಣ್ಣ ಎಂದೇ ಕರೆಸಿಕೊಳ್ಳುತ್ತಿದ್ದ ಲೀಲಾಧರ ಶೆಟ್ಟಿ ನೂರಾರು ಮಂದಿಗೆ ಶಿಕ್ಷಣ, ಉದ್ಯೋಗ, ಮದುವೆಗೆ ನೆರವಾಗಿದ್ದರು. ಸ್ವಯಂ ನಟ, ನಿರ್ದೇಶಕರಾಗಿದ್ದ ಅವರು ಕಾಪು ರಂಗತರಂಗ ನಾಟಕ ತಂಡ ಕಟ್ಟಿ ನೂರಾರು ನಾಟಕಗಳನ್ನು ರಂಗಕ್ಕೆ ನೀಡಿದ್ದರು. ಅವರಿಗೆ ಜಿಲ್ಲಾ ರಾಜ್ಯೋತ್ಸವ, ಸಮಾಜರತ್ನ ಸಹಿತವಾಗಿ ನೂರಾರು ಪ್ರಶಸ್ತಿ, ಗೌರವಗಳು ದಕ್ಕಿದ್ದವು.
ಎಲ್ಐಸಿ ಏಜೆಂಟರಾಗಿದ್ದ ಅವರು ಸಕ್ರಿಯ ರಾಜಕೀಯದಿಂದ ದೂರವಿದ್ದರೂ, ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆ ಪಕ್ಷೇತರರಾಗಿ ಮತ್ತು ಜೆಡಿಎಸ್ ನಿಂದಲೂ ಸ್ಪರ್ಧಿಸಿ, ಗಮನ ಸೆಳೆದಿದ್ದರು. ಮಜೂರು ನಾಗರಿಕ ಸಮಿತಿ ಎಂಬ ಸಂಘಟನೆ ಮೂಲಕ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಗ್ರಾ.ಪಂ. ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.ಕಾಪು, ಮಜೂರು, ಉಳಿಯಾರು, ಕರಂದಾಡಿ, ಜಲಂಚಾರು, ಮಲ್ಲಾರು ಪರಿಸರದ ವಿವಿಧ ದೇವಸ್ಥಾನ, ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರದಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದ ಅವರು ಸರ್ವ ಧರ್ಮೀಯರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ಪ್ರಸ್ತುತ ಕರಂದಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿ, ಹೊಸಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗ್ರಾಮ ಪ್ರಚಾರ ಸಮಿತಿ ಪ್ರಧಾನ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
ಲೀಲಾಧರ ಶೆಟ್ಟಿ ಸಾವಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಬಿಜೆಪಿ ನಾಯಕರಾದ ತಿಂಗಳೆ ವಿಕ್ರಮರ್ಜುನ ಹೆಗ್ಗಡೆ, ಕೆ.ಉದಯ ಕುಮಾರ್, ಶ್ರೀನಿಧಿ ಹೆಗ್ಡೆ, ಹಿರಿಯ ವಕೀಲರಾದ ಎಂ. ಶಾಂತರಾಮ್ ಶೆಟ್ಟಿ ಮುಂತಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.