ಬುದ್ಧ ವಿಹಾರದಲ್ಲಿ ನಡೆದ ಬಸವ ಜಯಂತಿ ಆಚರಣೆಯಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ತಿಪ್ಪೇಸ್ವಾಮಿ ಆರೋಪ
ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಬಸವಣ್ಣನ ವಿಚಾರಗಳು ರಾಜ್ಯವನ್ನಾಳದಿರುವುದಕ್ಕೆ ಬಸವ ಅನುಯಾಯಿಗಳೇ ಕಾರಣವೆಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಆರೋಪಿಸಿದರು.ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರು ಇಡೀ ಮಾನವ ಕುಲದ ಆಸ್ತಿ. ಅವರನ್ನು ಜಾತಿಗೆ ಸೀಮಿತ ಗೊಳಿಸಿದರೆ ಅವರ ವೈಚಾರಿಕ ಹೋರಾಟ ಅವಮಾನಿಸಿದಂತೆ ಎಂದರು.
ಇವನಾರವ, ಇವನಾರವ ಎನ್ನದೇ ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ ಕೂಡಲ ಸಂಗಮದೇವ ಎಂದು ಎಲ್ಲರನ್ನೂ ಅಪ್ಪಿಕೊಳ್ಳುವ ತಾಯಿತನದ ಪ್ರೀತಿ ಬಸವಣ್ಣನವರು ಕೊಟ್ಟಿದ್ದಾರೆ. ಲಿಂಗಾಯತ ಧರ್ಮವನ್ನು ಒಂದು ಜಾತಿಯ ಪರದೆಯೊಳಗೆ ತಂದಿರುವುದೇ ನೋವಿನ ಸಂಗತಿ. ಕಂಬಾರ, ಕುಂಬಾರ, ಆಗಸ, ಬಡಗಿ, ನೇಕಾರ, ಹೊಲೆಯ, ಮಾದಿಗ, ಬಣಜಿಗ, ಮೇದಾರ ಹೀಗೆ ನೂರಾರು ಜಾತಿಯ ಶ್ರಮ ಜೀವಿಗಳನ್ನು ಹಾಗೂ ಮಹಿಳೆಯರನ್ನು ಒಳಗೊಂಡು ಕಟ್ಟಿದ್ದ ಲಿಂಗಾಯಿತ ಧರ್ಮವು ಇಂದು ಶ್ರಮಿಕರಿಂದ ದೂರವಾಗುತ್ತಿದೆ.ಕರ್ಮ ಸಿದ್ಧಾಂತವನ್ನು ಧಿಕ್ಕರಿಸಿ, ಶ್ರಮ ಸಂಸ್ಕೃತಿಯನ್ನು ಗೌರವಿಸಿದ್ದ ಬಸವಣ್ಣ ಸ್ವರ್ಗ-ನರಕದ ಕಲ್ಪನೆಯನ್ನು ತಿರಸ್ಕರಿಸಿದ್ದರು. ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಆರ್ಥಿಕ ಸಮಾನತೆ ಸಾಧ್ಯ ಎಂದು ಪ್ರತಿಪಾದಿಸಿದ್ದರು. ವೇದಕ್ಕೆ ಹೊರೆಯ ಕಟ್ಟುವೆ, ಶಾಸ್ತ್ರಕ್ಕೆ ತಿಗಳನಿಡುವೆ, ಆಗಮದ ಮೂಗ ಕೊಯ್ಯುವೆ, ತರ್ಕಕ್ಕೆ ಬೆನ್ನ ಕಟ್ಟುವೆ ಕೂಡಲ ಸಂಗಮದೇವ ನಾನು ಮಾದಿಗರ ಮನೆಯ ಮಗನು ಎಂದಿದ್ದರು. ಜೀವನವೀಡಿ ಬಸವಣ್ಣ ಯಾರ ವಿರುದ್ಧ ಹೋರಾಟ ಮಾಡಿದ್ದರೊ ಅವರೊಟ್ಟಿಗೆ ಸೇರಿ ಸಮ ಸಮಾಜ ನಿರ್ಮಾಣ ಮಾಡುತ್ತೇವೆ ಎಂದು ಹೊರಟಿರುವ ಬಸವ ಅನುಯಾಯಿಗಳ ಮರ್ಮವೆ ಅರಿಯದಾಗಿದೆ? ಸಮ ಸಮಾಜ ನಿರ್ಮಾಣಕ್ಕೆ ನಮ್ಮ ಭಾಗದಲ್ಲಿ ಬಸವ ತತ್ವ ಮುನ್ನಡೆಸುತ್ತಿರುವ ಸಾಣೆಹಳ್ಳಿಯ ಮಠದ ಶ್ರೀ ಪಂಡಿತಾರಾಧ್ಯ ಶ್ರೀಗಳ ಮಾರ್ಗದರ್ಶನ ಅತಿ ಮುಖ್ಯ ಎಂದರು.
ಉಡುಪಿ ಜಿಲ್ಲೆಯ ಬಿಎಸ್‍ಐ ಘಟಕದ ಮುಖ್ಯಸ್ಥ ಹಾಗೂ ಉಪನ್ಯಾಸಕ ಪಕೀರಪ್ಪ ಮಾತನಾಡಿ, ಭಗವಾನ್ ಬುದ್ಧರು ದೇವರ ಭಯ ತೊಲಗಿಸಿದ ವೈಜ್ಞಾನಿಕ ಧಮ್ಮ ನೀಡಿದರೆ, ಬಸವಣ್ಣನವರು ಮೆದುಳಿನ ಚಿಂತನೆಗೆ ಹಾಕಿದ್ದ ಬೇಡಿ ಬಿಡಿಸಲು ಇಷ್ಟಲಿಂಗವ ನೀಡಿದರು. ಬುದ್ಧವಿಹಾರಗಳಿಗೆ ತಮ್ಮ ಮಕ್ಕಳು ಹಾಗೂ ಸಂಬಂಧಿಕರು ಕರೆತರುವ ಮೂಲಕ ಬುದ್ಧ, ಬಸವಣ್ಣ ಅವರ ವೈಚಾರಿಕ ವಿಚಾರಗಳನ್ನು ತಲುಪಿಸಿ ವೈಚಾರಿಕ ಜೀವನ ನಡೆಸುವಂತೆ ಮಾಡಬೇಕೆಂದರು.ಇದೇ ವೇಳೆ ಪ್ರಾಂಶುಪಾಲ ಜೆ.ಸಿದ್ದಲಿಂಗಮ್ಮ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಪ್ರಕಾಶ್, ಪ್ರೊಪೆಸರ್ ಕರಿಬಸಪ್ಪ, ಬುರುಜನರೊಪ್ಪ ಹನುಮಂತಪ್ಪ, ಚಳ್ಳಕೆರೆ ಅಭಿಲಾಶ್ ಮಾತಾಡಿದರು. ಬಿ.ಪಿ ಪ್ರೇಮನಾಥ್, ಲಾಯರ್ ಚಂದ್ರಪ್ಪ, ಬೆಸ್ಕಾಂ ತಿಪ್ಪೇಸ್ವಾಮಿ ಇದ್ದರು.----
ಪೋಟೋ ಕ್ಯಾಪ್ಸನ:ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮಕ್ಕೆ ಬಿ.ಪಿ.ತಿಪ್ಪೇಸ್ವಾಮಿ ಚಾಲನೆ ನೀಡಿದರು.