ರಾಮನಗರ: ಸ್ವಚ್ಛ ನಗರಗಳ ಪಟ್ಟಿಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಮಧ್ಯಪ್ರದೇಶದ ಇಂದೋರ್ ನಗರಕ್ಕೆ ಭೇಟಿ ನೀಡಿ ನಡೆಸಿದ ಅಧ್ಯಯನ ಪ್ರವಾಸ ಸದಸ್ಯರು ಮತ್ತು ಅಧಿಕಾರಿ ವರ್ಗದಲ್ಲಿ ಸ್ವಚ್ಛತೆ ವಿಚಾರದಲ್ಲಿ ಹೊಸ ಉತ್ಸಾಹ ತಂದಿದೆ. ರೇಷ್ಮೆನಗರಿ ರಾಮನಗರವನ್ನೂ ಕ್ಲೀನ್ ಸಿಟಿ ಮಾಡಲು ಸಂಕಲ್ಪ ಮಾಡಿದ್ದು, ಅದನ್ನು ಮಾಡಿಯೇ ತೋರಿಸುತ್ತೇವೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಭರಸವೆ ನೀಡಿದರು.
ಕಳೆದ 8 ವರ್ಷಗಳಿಂದ ಇಂದೋರ್ ನಗರ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಪಾಡಿಕೊಂಡು ಬಂದಿದೆ. ಇದಕ್ಕೆ ಸ್ವಚ್ಛತೆ ವಿಚಾರದಲ್ಲಿ ಪರಿಸರ ಸ್ನೇಹಿ ಆಡಳಿತ, ಕಟ್ಟುನಿಟ್ಟಿನ ಕ್ರಮಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿರುವುದು ಕಾರಣ. ಜೀರೋ ವೇಸ್ಟ್ ಕಲ್ಪನೆಯಲ್ಲಿ ಇಂದೋರ್ ಮಹಾನಗರ ಪಾಲಿಕೆ ಕಾರ್ಯನಿರ್ವಹಿಸುತ್ತಿದೆ. ಅಲ್ಲಿನ ಒಂದಷ್ಟು ಅಂಶಗಳನ್ನು ನಗರಸಭೆಯಲ್ಲಿಯೂ ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದರು.
ಇಂದೋರ್ ನಗರದಲ್ಲಿ ಕೈಗಾರಿಕಾ ಪ್ರದೇಶ ಮತ್ತು ವಾಣಿಜ್ಯ ಕ್ಷೇತ್ರವಿದ್ದು, ಸುಮಾರು 35 ಲಕ್ಷ ಜನಸಂಖ್ಯೆ ಹೊಂದಿದೆ. 8 ವರ್ಷಗಳ ಹಿಂದೆ ಜನರಲ್ಲಿ ಸ್ವಚ್ಛತೆ ಕುರಿತು ಅರಿವೇ ಇರಲಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿಗಳು, ಅದಕ್ಕೆ ಬೆಂಕಿ ಹಚ್ಚುವುದು, ರಸ್ತೆ ತುಂಬೆಲ್ಲ ಧೂಳು ತುಂಬಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು ಎಂದು ಅಲ್ಲಿನ ಅಧಿಕಾರಿಗಳೇ ತಿಳಿಸಿದ್ದಾಗಿ ಹೇಳಿದರು.ಕ್ಲೀನ್ ಸಿಟಿಗೆ ಸಾರ್ವಜನಿಕರ ಸಹಭಾಗಿತ್ವ ಮುಖ್ಯ:
ಮೇಲಧಿಕಾರಿಗಳು ಕಸ ಸಂಗ್ರಹಣೆ, ವಿಲೇವಾರಿ ಹಾಗೂ ರಸ್ತೆಗಳ ಸ್ವಚ್ಚತೆ ಕಾರ್ಯವನ್ನು ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಮಾಡುವಂತೆ ನಿಗಾ ವಹಿಸಿದರು. ಅಧಿಕಾರಿಗಳ ವರ್ಗಾವಣೆ ಮತ್ತು ಅಮಾನತಿನ ವಿಚಾರದಲ್ಲಿ ರಾಜಕೀಯ ಒತ್ತಡದ ಸವಾಲುಗಳನ್ನು ಎದುರಿಸಿ ಯಾರ ಮುಲಾಜಿಗೂ ಒಳಗಾಗದೆ ಆಡಳಿತ ನಡೆಸಿದ ಫಲವಾಗಿಯೇ ಇಂದೋರ್ ನಗರ ಕ್ಲೀನ್ ಸಿಟಿ ಆಗಲು ಕಾರಣವಾಗಿದೆ. ನಮ್ಮ ಆಡಳಿತ ಸಿಬ್ಬಂದಿ ಮತ್ತು ಸಾರ್ವಜನಿಕರು ಸ್ಪಂದಿಸಿದರೆ ರಾಮನಗರವನ್ನು ಕ್ಲೀನ್ ಸಿಟಿ ಮಾಡುವುದು ಅತಿಶೋಯಕ್ತಿ ಅಲ್ಲ ಎಂದು ಕೆ.ಶೇಷಾದ್ರಿ ಹೇಳಿದರು.
ಇಂದೋರ್‌ನಲ್ಲಿ ಪ್ರತಿನಿತ್ಯ 1100 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಮನೆಗಳಿಂದಲೇ 6 ವಿಧದ (ಹಸಿ, ಒಣ, ಪ್ಲಾಸ್ಟಿಕ್, ಇ - ವೇಸ್ಟ್, ಸ್ಯಾನಿಟರಿ, ಅಪಾಯಕಾರಿ) ತ್ಯಾಜ್ಯಗಳೆಂದು ವಿಂಗಡಿಸುತ್ತಾರೆ. 600 ವಾಹನಗಳು ತ್ಯಾಜ್ಯ ಸಂಗ್ರಹಿಸುತ್ತಿದ್ದು, ಅವುಗಳಿಗೆಲ್ಲ ಜಿಪಿಎಸ್ ಅಳವಡಿಸಲಾಗಿದೆ. ಆ ವಾಹನಗಳ ನಿರ್ವಹಣೆಗಾಗಿಯೇ ಕಂಟ್ರೋಲ್ ರೂಮ್ ತೆರೆಯಲಾಗಿದೆ. ತ್ಯಾಜ್ಯ ಸಂಗ್ರಹ ಕುರಿತು ದೂರು ದಾಖಲಿಸಲು (ಇಂದೋರ್ 311) ಆಪ್ ಅನ್ನು ಬಳಸುತ್ತಿದ್ದಾರೆ. ಪ್ರತಿ ನಿತ್ಯ ಸುಮಾರು 600 ಕಿ.ಮೀ ಉದ್ದದ ರಸ್ತೆಗಳನ್ನು 33 ಸ್ವೀಪಿಂಗ್ ಮೆಷಿನ್ ವಾಹನಗಳನ್ನು ಬಳಸಿ ಗುಡಿಸಲಾಗುತ್ತಿದೆ.
ಬಯೋ ಸಿಎನ್ ಜಿ ಪ್ಲಾಂಟ್ ಗಳು ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದು, ಸಿಎನ್ ಜಿ ಅನಿಲವನ್ನು ನಗರದ ಸಾರಿಗೆ ಬಸ್ ಗಳಿಗೆ ಹಾಗೂ ಕೈಗಾರಿಕೆಗಳಿಗೆ ಮಾರಾಟ ಮಾಡಲಾಗುತ್ತಿದೆ. ವಾರ್ಷಿಕವಾಗಿ 1.50 ಲಕ್ಷ ಟನ್ ಕಾಂಪೋಸ್ಟ್ ಮತ್ತು ಬಯೋ ಸಿ ಎನ್ ಜಿ ಅನಿಲ ಉತ್ಪಾದನೆಯಾಗುತ್ತಿದೆ. ಕಾಂಪೋಸ್ಟ್ , ಕಾರ್ಬನ್ ಕ್ರೆಡಿಟ್ ಹಾಗೂ ಒಣಕಸದ ಮಾರಾಟದ ಮೂಲಕ ವಾರ್ಷಿಕವಾಗಿ 9 ಕೋಟಿ ಆದಾಯ ಪಾಲಿಕೆಗೆ ಬರುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾಗಿ ತಿಳಿಸಿದರು.ಇಂದೋರ್ ನಲ್ಲಿ ಪ್ರತ್ಯೇಕವಾದ ಸ್ಟ್ರೀಟ್ ಫುಡ್ ಇದ್ದು, ರಸ್ತೆ ಬದಿಯ ಸರ್ಕಾರಿ ಸ್ವತ್ತಿನ ಗೋಡೆಗಳ ಮೇಲೆ ಸಂಸ್ಕೃತಿ ಮತ್ತು ಪರಿಸರ ಬಗ್ಗೆ ಅರಿವು ಮೂಡಿಸುವ ಚಿತ್ರಗಳ ಚಿತ್ತಾರವಿದೆ. ಸಮರ್ಪಕವಾದ ಒಳಚರಂಡಿ ವ್ಯವಸ್ಥೆ ಇದೆ. ಅಲ್ಲಿ ಆಡಳಿತ ಬದಲಾದರು ಸ್ವಚ್ಛತೆ ವಿಚಾರದಲ್ಲಿ ಜನರು ಬದಲಾಗುತ್ತಿಲ್ಲ. ಇಂತಹ ಮನಸ್ಥಿತಿ ರಾಮನಗರದ ಪ್ರತಿಯೊಬ್ಬ ನಾಗರಿಕನಲ್ಲೂ ಬರಬೇಕು. ಆಗ ಮಾತ್ರ ಸ್ವಚ್ಛ ನಗರದ ಪರಿಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂದು ಶೇಷಾದ್ರಿ ಹೇಳಿದರು.
ಬಾಕ್ಸ್ ...............
ಅನುಮತಿ ಪಡೆಯದ ಬ್ಯಾನರ್‌ಗಳ ಅಳವಡಿಕೆಗೆ ನಿರ್ಬಂಧರಾಮನಗರ: ಜಿಲ್ಲಾ ಕೇಂದ್ರ ರಾಮನಗರವನ್ನು ಕ್ಲೀನ್ ಸಿಟಿಯನ್ನಾಗಿ ರೂಪಿಸುವತ್ತಾ ಮೊದಲ ಹೆಜ್ಜೆಯಾಗಿ ಪೂರ್ವಾನುಮತಿ ಪಡೆಯದ ಬ್ಯಾನರ್ ಗಳ ಅಳವಡಿಕೆಗೆ ನಿರ್ಬಂಧ ಹೇರಲು ಹಾಗೂ ಬ್ಲ್ಯಾಕ್‌ಸ್ಪಾಟ್ ಗಳ ನಿರ್ಮೂಲನೆಗೆ ಕ್ರಮ ವಹಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಅನುಮತಿ ಪಡೆಯದೆ ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದು, ಇದರಿಂದ ನಗರಸಭೆಗೆ ಆದಾಯ ಬರುತ್ತಿಲ್ಲ. ಇನ್ನು ಮುಂದೆ ನಿಗದಿತ ಶುಲ್ಕ ಪಾವತಿಸಿದವರಿಗೆ ಮಾತ್ರ ಬ್ಯಾನರ್ ಅಳವಡಿಸಲು ಅವಕಾಶ ನೀಡಲಾಗುವುದು. ಇಲ್ಲದಿದ್ದರೆ ಯಾರ ಒತ್ತಡಕ್ಕೂ ಮಣಿಯದೆ ಅನಧಿಕೃತ ಬ್ಯಾನರ್‌ಗಳನ್ನು ತೆರವುಗೊಳಿಸುತ್ತೇವೆ ಎಂದು ಹೇಳಿದರು.
ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳ ಬದಿಯಲ್ಲಿರುವ ಸರ್ಕಾರಿ ಕಟ್ಟಡಗಳ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸದಂತೆ ಕ್ರಮ ವಹಿಸಲಾಗುವುದು. ಆ ಗೋಡೆಗಳ ಮೇಲೆ ಸಂಸ್ಕೃತಿ ಮತ್ತು ಪರಿಸರದ ಬಗ್ಗೆ ಅರಿವು ಮೂಡಿಸುವ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗುವುದು ಎಂದು ತಿಳಿಸಿದರು.ಬ್ಲ್ಯಾಕ್ ಸ್ಪಾಟ್ ಗಳಲ್ಲಿ ನಾಗರೀಕರು ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಕಡಿವಾಣ ಹಾಕಲು ನಗರಸಭೆ ವೇಸ್ಟ್ ಟು ಆರ್ಟ್, ವೇಸ್ಟ್ ಟು ವಂಡರ್ ಎಂಬ ವಿನೂತನ ಕಾರ್ಯಕ್ಕೆ ಮುಂದಾಗಿದೆ. ನಗರದಲ್ಲಿ 30 ರಿಂದ 40 ಬ್ಲ್ಯಾಕ್ ಸ್ಪಾಟ್ ಗಳಿದ್ದು, ಅವುಗಳನ್ನು ಸೌಂದರ್ಯೀಕರಣಗೊಳಸಿ ತ್ಯಾಜ್ಯ ಮುಕ್ತಗೊಳಿಸಲಾಗುವುದು ಎಂದು ಶೇಷಾದ್ರಿ ತಿಳಿಸಿದರು.
ರಾಮನಗರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.