ಮಹಿಳಾ ದಿನಾಚರಣೆ । ಮಹಿಳಾ ಇಲಾಖೆ ಆಯೋಜನೆ । ಸಾಧಕ ಮಹಿಳೆಯರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮನುಷ್ಯತ್ವ ಎಲ್ಲಕಿಂತ ಮಿಗಿಲಾದುದು, ಕುಟುಂಬ ನಿರ್ವಹಿಸುವ ಹೆಣ್ಣನ್ನು ಸದಾ ಗೌರವದಿಂದ ಕಾಣಬೇಕು. ಎಲ್ಲಿ ಹೆಣ್ಣನ್ನು ಗೌರವಿಸಲಾಗುತ್ತೋ ಅಲ್ಲಿ ಸೌಖ್ಯದಿಂದ ಕೂಡಿರುತ್ತದೆ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಹೇಳಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ನಬಾರ್ಡ್ ಜಂಟಿಯಾಗಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಪುರುಷನ ಸಾಧನೆಯ ಹಿಂದೆ ಹೆಣ್ಣಿನ ಸಾಧನೆ ಇರುತ್ತದೆ. ಮಹಿಳೆಯಿಲ್ಲದೇ ಗಂಡು ಪರಿಪೂರ್ಣನಾಗಲಾರ, ಎಲ್ಲಿ ಹೆಣ್ಣನ್ನು ಗೌರವಿಸಲಾಗುತ್ತದೋ ಅಲ್ಲಿನ ವಾತಾವರಣ ಬಹಳ ಸೌಖ್ಯದಿಂದ ಕೂಡಿರುತ್ತದೆ. ಯಾವುದೇ ಕೆಲಸಕ್ಕಾಗಲಿ ಇಂತಿಷ್ಟು ವೇತನ ಎಂದು ನಿಗದಿಪಡಿಸಲಾಗಿರುತ್ತದೆ. ಆದರೆ ಬೆಳಿಗ್ಗೆ ಎದ್ದು ಕಸ ಗುಡಿಸಿ, ರಂಗೋಲಿ ಹಾಕಿ ಅಡುಗೆ, ಪಾತ್ರೆ, ಬಟ್ಟೆಯಿಂದ ಹಿಡಿದು ರಾತ್ರಿ ಮಲಗುವ ತನಕ ಕೆಲಸ, ಮಕ್ಕಳ ಪಾಲನೆ, ಪೋಷಣೆಯಲ್ಲಿ ತೊಡಗುವ ಹೆಣ್ಣುಮಕ್ಕಳಿಗೆ ಯಾವ ವೇತನವೂ ಇಲ್ಲ. ಹೀಗೆ ಕುಟುಂಬ ಕಟ್ಟುವ ಹೆಣ್ಣುಮಕ್ಕಳಿಗೆ ಕೋಟಿ ಕೊಟ್ಟರೂ ಸಾಲದು. ಮೌಲ್ಯಾತೀತವಾದ ಇವರ ಸೇವೆಯನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.ಮೊದಲು ನಮ್ಮ ಮನೆಯನ್ನು ನೆಮ್ಮದಿ, ಸಂತೋಷದಿಂದ ಇಟ್ಟುಕೊಳ್ಳಬೇಕು. ನಾನು ಮೊದಲು ಬದಲಾಗಬೇಕು. ನನ್ನ ಮನೆ ಬದಲಾದರೆ, ಇಡೀ ದೇಶ ಬದಲಾಗುತ್ತದೆ. ಗಾಂಧೀಜಿಯವರು ಹೇಳಿರುವಂತೆ ಮತ್ತೊಬ್ಬರಲ್ಲಿ ಕಾಣುವ ಬದಲಾವಣೆಯನ್ನು ಮೊದಲು ನಿನ್ನಲ್ಲಿ ಮಾಡಿಕೊಳ್ಳಬೇಕು. ದೌರ್ಜನ್ಯವನ್ನು ತಡೆಯುವುದು ಹೆಣ್ಣುಮಕ್ಕಳಿಂದ ಸಾಧ್ಯವಿದ್ದು, ನೀವು ಸ್ವಾಭಿಮಾನದಿಂದ ಬದುಕಬೇಕು ಎಂದರು.
ಜಿಪಂ ಯೋಜನಾ ನಿರ್ದೇಶಕರಾದ ರೇಷ್ಮ ಕೌಸರ್ ಮಾತನಾಡಿ, ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನಾವು ಕಾಣುವುದು ಕೇವಲ ಪುರುಷಪ್ರಧಾನ ಇತಿಹಾಸ. ಇಂದು ನಾವು ಹೊರಜಗತ್ತಿನಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಇದ್ದೇವೆ ನಿಜ. ಆಕಾಶದ ನಕ್ಷತ್ರ ನೋಡುತ್ತಾ ವಾಸ್ತವದ ಕಾಲ ಕೆಳಗಿನ ಕೆಂಡ ಮರೆಯುವಂತಿಲ್ಲ. ಹೆಣ್ಣು ಹುಟ್ಟಿನಿಂದ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಿರುವುದು ನಿಜ. ಕುಟುಂಬದಲ್ಲಿ ಮಹಿಳೆಯರಿಗೆ ಪುರುಷರ ಬೆಂಬಲ ಬೇಕು. ಸ್ಥಳೀಯ ಸಂಸ್ಥೆಗಳು, ಪಂಚಾಯಿತಿಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಅದಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಬೆಂಬಲ ಕಾರಣ. ಪುರುಷರನ್ನು ದೂಷಿಸುವ ಬದಲು ಪರಸ್ಪರ ಸಹಬಾಳ್ವೆ ನಡೆಸುವುದು ಒಳ್ಳೆಯದು ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ 2023-24 ನೇ ಸಾಲಿನ ಅಸಾಧಾರಣ ಸಾಧನೆ ಮಾಡಿರುವ ತನಿಷ್ಕಾ, ಸುಚಿತ್ರಾ, ಭಾವನ, ಸಾನ್ವಿ, ಭಾಗ್ಯಲಕ್ಷ್ಮೀ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಾಬಾರ್ಡ್ ಸಂಸ್ಥೆಯ ರಶ್ಮೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಾನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.