ಕನ್ನಡಪ್ರಭವಾರ್ತೆ ತಿಪಟೂರು
ತಾಲೂಕಿನ ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ಆವರಣದ ಕೃಷಿ ತಾಕುವಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜದ ಎಲ್ಲಾ ಸಮಸ್ಯೆಗಳಿಗೂ ತನ್ನದೇ ಆದ ರೀತಿಯಲ್ಲಿ ಕಾರ್ಯ ಚಟುವಟಿಕೆಯಲ್ಲಿ ತೊಡಗಿರುವುದು ದೇಶದ ಅಭಿವೃದ್ಧಿಯ ಬೆಳವಣಿಗೆಗೆ ಸಹಕಾರಿಯಾಗಿದೆ. ಅವರ ಪರಿಸರಪರ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದ ಅವರು, ನಮ್ಮ ಆವರಣದಲ್ಲಿ ನೆಟ್ಟಿರುವ ಸಸಿಗಳ ಸಂರಕ್ಷಣೆ ಹಾಗೂ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಕೃಷಿ ವಿಜ್ಞಾನ ಕೇಂದ್ರ ವಹಿಸಿಕೊಳ್ಳಲಿದೆ ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಉದಯ್ ಮಾತನಾಡಿ, ಪರಿಸರ ಸಂರಕ್ಷಣೆ ಹಾಗೂ ಕೃಷಿ ಉಳಿವಿಗಾಗಿ ಯೋಜನೆಯ ವತಿಯಿಂದ ಕೃಷಿ ರೈತ ಕ್ಷೇತ್ರ ಪಾಠಶಾಲೆ, ಪರಿಸರ ಜಾಗೃತಿ ಕಾರ್ಯಕ್ರಮಗಳು, ವಿಶೇಷ ಕೃಷಿ ಅಧ್ಯಯನ ಪ್ರವಾಸ, ಕೆರೆ ಪುನಶ್ಚೇತನ, ಕೆರೆಯಂಗಳದಲ್ಲಿ ಗಿಡ ನೆಡುವಿಕೆ ಹಾಗೂ ಸಾಮಾಜಿಕ ಅರಣ್ಯೀಕರಣದಂತಹ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬೆಣ್ಣೆಹಣ್ಣು, ಗೋಡಂಬಿ (ಗೇರು), ಮಾವು, ಪರಂಗಿ, ಸೀಬೆ ಹಾಗೂ ಹಲಸು ಸೇರಿದಂತೆ ಕಾಡಿನ ಹಣ್ಣಿನ ವಿವಿಧ ತಳಿಗಳ ೨೫೦ಕ್ಕೂ ಹೆಚ್ಚು ಸಸಿಗಳನ್ನು ಕೃಷಿ ವಿಜ್ಞಾನ ಕೇಂದ್ರದ ಮೂರು ಎಕರೆ ಪ್ರದೇಶದಲ್ಲಿ ನೆಡಲಾಯಿತು.
ಕಾರ್ಯಕ್ರಮದಲ್ಲಿ ಕೀರ್ತಿ ಶಂಕರ್, ದರ್ಶನ್, ಸಿಂಧು ಹರೀಶ್ , ಮಲ್ಲಿಗಪ್ಪಾಚಾರ್, ಪ್ರಮೋದ್ ಕುಮಾರ್, ರಮ್ಯಾ ಶೆಟ್ಟಿ, ಮೀನಾಕ್ಷಿ ಪ್ರಮೀಳ ಸೇರಿದಂತೆ ಹೊನ್ನವಳ್ಳಿ–ಬಿದರೆಗುಡಿ ಭಾಗದ ೨೦೦ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.