ಬಿತ್ತನೆಬೀಜ ಗಡಿಗೆ ಒಡೆವ ಆಚರಣೆ ಸಂಪನ್ನ

KannadaprabhaNewsNetwork |  
Published : Jun 17, 2025, 11:48 PM IST
೧7ಜೆಎಲ್ಆರ್ಚಿತ್ರ೧ಎ: ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಕಾರಹುಣ್ಣಿಮೆ ಅಂಗವಾಗಿ ಕರಿಹರಿಯುವ ಸಂಪ್ರದಾಯ ನೆರವೇರಿತು. | Kannada Prabha

ಸಾರಾಂಶ

ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಕಾರಹುಣ್ಣಿಮೆ ಅಂಗವಾಗಿ ಬಿತ್ತನೆ ಬೀಜಗಳನ್ನು ತುಂಬಿದ ಗಡಿಗೆ ಹೊಡೆಯುವ ಸಂಪ್ರದಾಯ ನಡೆಯಿತು.

- ಕಟ್ಟಿಗೆಹಳ್ಳಿಯಲ್ಲಿ ಕಾರಹುಣ್ಣಿಮೆ ನಂತರದ ಸೋಮವಾರವೇ ನಡೆಯುವ ವಿಶಿಷ್ಟ ಸಂಪ್ರದಾಯ

- ಗ್ರಾಮದ ಕರಿಗಲ್ಲಿಗೆ ಅಡ್ಡಲಾಗಿ ದಾಗಡಿ ಬಳ್ಳಿಗೆ ಬೇವಿನ ಸೊಪ್ಪು ಕಟ್ಟಿ ಕುಂಭ ಪ್ರತಿಷ್ಟಾಪನೆ

- ಈ ವರ್ಷ ಸೂರ್ಯಕಾಂತಿ, ಮೆಣಸಿನಕಾಯಿ ಉತ್ತಮ ಬೆಳೆ ಬರುವ ಮುನ್ಸೂಚನೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಕಾರಹುಣ್ಣಿಮೆ ಅಂಗವಾಗಿ ಬಿತ್ತನೆ ಬೀಜಗಳನ್ನು ತುಂಬಿದ ಗಡಿಗೆ ಹೊಡೆಯುವ ಸಂಪ್ರದಾಯ ನಡೆಯಿತು.

ಪ್ರತಿವರ್ಷ ಕಾರಹುಣ್ಣಿಮೆ ನಂತರ ಬರುವ ಸೋಮವಾರದಂದು ಗ್ರಾಮದ ಕರಿಗಲ್ಲಿಗೆ ಅಡ್ಡಲಾಗಿ ದಾಗಡಿ ಬಳ್ಳಿಗೆ ಬೇವಿನ ಸೊಪ್ಪು ಕಟ್ಟಿ ಕುಂಭದಲ್ಲಿ ಬಿತ್ತನೆ ಬೀಜಗಳಾದ ಮೆಕ್ಕೆಜೋಳ, ಸೂರ್ಯಕಾಂತಿ, ಈರುಳ್ಳಿ, ದ್ವಿದಳ ಧಾನ್ಯಗಳು ಸೇರಿದಂತೆ ನಾನಾ ಬಗೆಯ ಬೀಜಗಳನ್ನು ಹಾಕಿ ಪೂಜಿಸಲಾಗುತ್ತದೆ. ಬಳಿಕ ಎತ್ತುಗಳನ್ನು ಹಾಯಿಸಿ ಎಡೆಕುಂಟೆ ಮೂಲಕ ಗಡಿಗೆ ಒಡೆಯಲಾಗುತ್ತದೆ. ಹೀಗೆ ಗಡಿಗೆ ಒಡೆದು ಅದರಲ್ಲಿದ್ದ ಬೀಜಗಳು ಸಿಡಿದರೆ ಮುಂದೆ ಬಿದ್ದ ಬಿತ್ತನೆ ಬೀಜವೇ ಈ ವರ್ಷದ ಅಧಿಕ ಇಳುವರಿ ಮತ್ತು ದರ ಸಿಗುವ ಬೆಳೆ ಎಂದು ನಂಬಲಾಗುತ್ತದೆ.

ಈ ಆಚರಣೆ ತಲತಲಾಂತರದಿಂದ ಇಲ್ಲಿ ನಡೆದುಬಂದಿದೆ. ಅದನ್ನು ಇಂದಿಗೂ ಪ್ರತಿವರ್ಷ ಗ್ರಾಮಸ್ಥರು ಪಾಲಿಸಿಕೊಂಡು ಬಂದಿದ್ದಾರೆ. ಈ ವರ್ಷ ಸೂರ್ಯಕಾಂತಿ, ಮೆಣಸಿನಕಾಯಿ ಉತ್ತಮ ಬೆಳೆ ಬರುವ ಬಗ್ಗೆ ಮುನ್ಸೂಚನೆ ಸಿಕ್ಕಂತಾಗಿದೆ. ಪ್ರಸ್ತುತ ವರ್ಷ ಕರಿ ಧಾನ್ಯಗಳ ಬೆಳೆ ಸಮೃದ್ಧಿಯಾಗಿ ಬರುತ್ತವೆ ಎಂಬುದು ಗ್ರಾಮಸ್ಥರು ನಂಬಿಕೆ.

ಮುಂಜಾನೆ ಎತ್ತುಗಳ ಮೈತೊಳೆದು ಪೂಜೆ ಸಲ್ಲಿಸಿ, ಐತಿಹಾಸಿಕ ಬಸವಣ್ಣನ ದೇವಸ್ಥಾನಕ್ಕೆ ಇಡೀ ಗ್ರಾಮದ ಜನತೆ ಹೋಳಿಗೆ ಎಡೆ ಅರ್ಪಿಸಿದರು. ಅನಂತರ ಸಂಜೆ ಕರಿ ಹರಿಯುವ ಸಂಭ್ರಮ ನಡೆಯುತ್ತದೆ. ಕರಿ ಹರಿಯುವ ಈ ಸಂಪ್ರದಾಯ ನೋಡಲು ತೋರಣಗಟ್ಟೆ, ಅರಿಶಿಣಗುಂಡಿ, ನಿಬಗೂರು ಸೇರಿದಂತೆ ಅನೇಕ ಗ್ರಾಮಗಳ ಜನರು ಬಂದು ವೀಕ್ಷಿಸಿ, ಮೊದಲ ಬಿತ್ತನೆಬೀಜವನ್ನು ನೋಡಿಕೊಂಡು ಬಿತ್ತನೆ ಕಾರ್ಯವನ್ನು ಆರಂಭಿಸುತ್ತಾರೆ.

ಬಿತ್ತನೆಬೀಜಗಳ ಗಡಿಗೆ ಒಡೆಯುವ ಆಚರಣೆ ವೇಳೆ ಗ್ರಾಮದ ಮುಖಂಡರಾದ ಬಸವರಾಜಪ್ಪ, ಎಚ್.ಜಿ, ಮಂಜುನಾಥ್, ಆದರ್ಶ, ಚೇತನ್, ರಾಘು, ಮಂಜುನಾಥ್, ಕೆ.ಎಂ. ಮಂಜುನಾಥ್, ಶಿವಕುಮಾರ್, ಕರಿಬಸವನಗೌಡ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

- - -

-೧7ಜೆಎಲ್ಆರ್ಚಿತ್ರ೧ಎ:

ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿಯಲ್ಲಿ ಕಾರಹುಣ್ಣಿಮೆ ಅಂಗವಾಗಿ ಕರಿಹರಿಯುವ ಸಂಪ್ರದಾಯದ ಬಿತ್ತನೆಬೀಜ ತುಂಬಿದ ಗಡಿಗೆ ಒಡೆಯುವ ಆಚರಣೆ ನೆರವೇರಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...