ಟಾರ್‌ ಹಾಕಿದ ಮೂರೇ ತಿಂಗಳಲ್ಲಿ ಕಿತ್ಹೋದ ರಸ್ತೆ!

KannadaprabhaNewsNetwork |  
Published : Jun 28, 2025, 12:24 AM IST
 ಕಾಗವಾಡ  | Kannada Prabha

ಸಾರಾಂಶ

2024ರಲ್ಲಿ ನಬಾರ್ಡ್ ಯೋಜನೆಯಡಿ 4 ಕಿ.ಮೀ ರಸ್ತೆ ಡಾಂಬರೀಕರಣಕ್ಕೆ ₹5 ಕೋಟಿ ಅನುದಾನ ಮಂಜೂರಾಗಿದೆ. ಆದರೆ, ಡಾಂಬರ್‌ ಹಾಕಿದ ಮೂರೇ ತಿಂಗಳಲ್ಲಿ ಕಿತ್ತು ಹೋಗಿದೆ.

ಸಿದ್ದಯ್ಯ ಹಿರೇಮಠ

ಕನ್ನಡಪ್ರಭ ವಾರ್ತೆ ಕಾಗವಾಡ

ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಉಗಾರ- ಬುದ್ರುಕ್- ಶಿರಗುಪ್ಪಿ ಮಾರ್ಗದ ₹5 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಆದರೆ ಡಾಂಬರೀಕರಣ ಮಾಡಿದ ಮೂರೇ ತಿಂಗಳಲ್ಲಿ ರಸ್ತೆ ಎಲ್ಲೆಂದರಲ್ಲಿ ಕಿತ್ತು ಹೋಗಿದೆ. ಈ ಕುರಿತು ಕಾಗವಾಡ ಶಾಸಕ ರಾಜು ಕಾಗೆ ಬಹಿರಂಗವಾಗಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ರಸ್ತೆ ಕಾಮಗಾರಿ ಪಡೆದುಕೊಂಡ ಗುತ್ತಿಗೆದಾರನ ವಿರುದ್ಧ ಕಿಡಿ ಕಾರಿದ್ದಾರೆ.

ಶಾಸಕರ ಜತೆಗೆ ಸಾರ್ವಜನಿಕರು ಕೂಡ ಕಿಡಿಕಾರಿದ್ದಾರೆ. ಮಳೆಗಾಲದಲ್ಲೇ ರಸ್ತೆ ಕಾಮಗಾರಿಯ ನೈಜ ದರ್ಶನವಾಗಿದೆ ಎಂದು ಕಿಡಿಕಾರಲು ಆರಂಭಿಸಿದ್ದಾರೆ. 2024ರಲ್ಲಿ ನಬಾರ್ಡ್ ಯೋಜನೆಯಡಿ 4 ಕಿ.ಮೀ ರಸ್ತೆ ಡಾಂಬರೀಕರಣಕ್ಕೆ ₹5 ಕೋಟಿ ಅನುದಾನ ಮಂಜೂರಾಗಿದೆ. ಆದರೆ, ಡಾಂಬರ್‌ ಹಾಕಿದ ಮೂರೇ ತಿಂಗಳಲ್ಲಿ ಕಿತ್ತು ಹೋಗಿದೆ. ಇದಕ್ಕೆ ಯಾರು ಉತ್ತರಿಸುವವರು? ಯಾಕೆ ಕಳಪೆ ಕಾಮಗಾರಿ ಮಾಡಿದ್ದಾರೆ? ಇದನ್ನು ಮತ್ತೆ ಸರಿಪಡಿಸಲು ಗುತ್ತಿಗೆದಾರನಿಗೆ ಹೇಳಬೇಕಾ? ಅಥವಾ ಅವರನ್ನು ಕಪ್ಟು ಪಟ್ಟಿಗೆ ಸೇರಿಸಬೇಕಾ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ರಸ್ತೆ ಡಾಂಬರ್‌ ಹಾಕುವಾಗ ಖುಷಿ ಪಟ್ಟಿದ್ದ ಜನರು ಮೂರೇ ತಿಂಗಳಿಗೆ ರಸ್ತೆ ಸ್ಥಿತಿ ನೋಡಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರನಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರನಿಗೆ ಸರ್ಕಾರ ಹಣ ಪಾವತಿಸಬಾರದು ಎಂದು ಸ್ಥಳಿಯರು ಒತ್ತಾಯಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಯಾವೊಬ್ಬ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ. ರಸ್ತೆ ಸಂಪೂರ್ಣ ಕಳಪೆ ದರ್ಜೆಯದ್ದಾಗಿದೆ. ಅಧಿಕಾರಿಗಳು ಸಾರ್ವಜನಿಕರ ಆರೋಪಗಳಿಗೆ ಉತ್ತರಿಸದೇ ಬಾಯಿ ಮುಚ್ಚಿಕೊಂಡು ಕುಳಿತು ಕೊಳ್ಳುತ್ತಿರುವುದರಿಂದ ಗುತ್ತಿಗೆದಾರರು ಮಾಡಿದ್ದೇ ಕಾಮಗಾರಿ ಎನ್ನುವಂತಾಗಿದೆ. ದುರಾಸೆಯಿಂದ ಇಂತಹ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಸ್ಥಳೀಯ ಆಕ್ರೋಶ ಹೊರಹಾಕಿದ್ದಾರೆ.

ಇದರ ಮಧ್ಯೆ ಸೇತುವೆಯೊಂದನ್ನು ನಿರ್ಮಿಸುತ್ತಿದ್ದು ಅದು ಅರ್ಧಕ್ಕೆ ನಿಂತಿದೆ. ಸಾರ್ವಜನಿಕರು ಮಗ್ಗಲಿನ ರಸ್ತೆಯಿಂದ ಹಾದುಹೋಗುವಾಗ ಮಳೆಗಾಲ ಹಿನ್ನೆಲೆಯಲ್ಲಿ ಜಾರಿ ಬೀಳುವಂತಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣಕ್ಕೆ ಬೆಲೆ ಇಲ್ಲದಂತಾಗಿದೆ. ಗುತ್ತಿಗೆದಾರ ಕಳಪೆ ಕಾಮಗಾರಿ ಮಾಡಿದ್ದು, ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರದಿಂದ ರಸ್ತೆ ಕಾಮಗಾರಿಗೆ ಅನುದಾನ ಮಂಜೂರು ಮಾಡಿಸಿಕೊಂಡು ಬಂದರೆ ಗುತ್ತಿಗೆದಾರರು ಈ ರೀತಿ ಕಳಪೆ ಕಾಮಗಾರಿ ಮಾಡಿದ್ದಾರೆ. ರಸ್ತೆಗೆ ತೇಪೆ ಹಚ್ಚದೆ 4 ಕಿ.ಮೀ ಡಾಂಬರೀಕರಣವನ್ನು ಕಿತ್ತು ಮರು ಡಾಂಬರೀಕರಣ ಮಾಡಬೇಕು. ಆ ಗುತ್ತಿಗೆದಾರನಿಗೆ ಬಿಲ್ ಪಾವತಿಯಾಗದಂತೆ ನೋಡಿಕೊಳ್ಳುತ್ತೇನೆ. ಮತ್ತೊಮ್ಮೆ ಡಾಂಬರೀಕರಣ ಮಾಡಿಸಲೂ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.

ರಾಜು ಕಾಗೆ, ಶಾಸಕರು ಕಾಗವಾಡ

ರಸ್ತೆಯ ಕುರಿತು ನನ್ನ ಗಮನಕ್ಕೂ ಬಂದಿದೆ. ನಾನು ಖುದ್ದಾಗಿ ಭೇಟಿ ನೀಡಿ ಕಳಪೆ ಕಾಮಗಾರಿ ಆಗಿದ್ದಲ್ಲಿ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ, ಮಳೆಗಾಲ ಮುಗಿದ ನಂತರ ರಸ್ತೆ ಮರು ಡಾಂಬರೀಕರಣ ಮಾಡಿಸಲಾಗುವುದು.

ಗಿರೀಶ ದೇಸಾಯಿ, ಕಾರ್ಯನಿರ್ವಾಹಕ ಅಭಿಯಂತರರು, ಪಿಡಬ್ಲ್ಯೂಡಿ ಚಿಕ್ಕೋಡಿ

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು