ಪಟ್ಟಣ ಪಂಚಾಯಿತಿ ಎದುರು ಬಿಜೆಪಿಯಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದು ಆಶ್ರಯ ಯೋಜನೆಯಡಿ ಹಣ ನೀಡಿದವರಿಗೆ ನಿವೇಶನ ಸಿಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಬಿ.ಎಸ್.ಆಶೀಶ್ ಕುಮಾರ್ ಆರೋಪಿಸಿದರು.
ಶುಕ್ರವಾರ ಪಟ್ಟಣ ಪಂಚಾಯಿತಿ ಎದುರು ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ಆಶ್ರಯ ಯೋಜನೆ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಶಾಸಕರೇ ಹೇಳಿಕೆ ನೀಡಿದ್ದಾರೆ.ಆದ್ದರಿಂದ ಭ್ರಷ್ಟ ಸರ್ಕಾರವನ್ನು ರಾಜ್ಯಪಾಲರು ವಜಾ ಗೊಳಿಸಬೇಕು ಎಂದು ಒತ್ತಾಯಿಸಿದರು.ಪಟ್ಟಣ ಪಂಚಾಯಿತಿಯಲ್ಲಿ ಅರ್ಹ ಫಲಾನುಭವಿಗಳಿಗೆ ನಗರ ವಸತಿ ಯೋಜನೆಯಡಿ ನಿವೇಶನ ಹಂಚಿಕೆಯಾಗಿಲ್ಲ. ಈ ಹಿಂದಿನ ಅವಧಿಯಲ್ಲಿ ಪಾರದರ್ಶಕವಾಗಿ ಪರಿಶೀಲನೆ ಮಾಡಿ ಅಂತಿಮಗೊಳಿಸಲಾಗಿತ್ತು. ಆದರೆ, ಈಗಿನ ಶಾಸಕರು ಮತ್ತು ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ಆಡಳಿತ ಪಕ್ಷದ ಸದಸ್ಯರು ತಮಗೆ ಮನ ಬಂದಂತೆ ಆಶ್ರಯ ಯೋಜನೆಯಡಿ ನಿವೇಶನ ಮತ್ತು ಮನೆಗಳನ್ನು ಹಂಚಲು ಸಿದ್ಧತೆ ಮಾಡಿಕೊಂಡಿದ್ದಾರೆ.ಇದರಿಂದ ಅನೇಕ ವರ್ಷಗಳಿಂದ ಆಶ್ರಯ ಯೋಜನೆಯಡಿ ಮನೆ ಮತ್ತು ನಿವೇಶನಕ್ಕಾಗಿ ಕಾಯುತ್ತಿರುವ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದ್ದು ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು. ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ರೇಖಾ ಮಂಜುನಾಥ, ರೀನಾ ಮೋಹನ್, ಪಪಂ ಮಾಜಿ ಅಧ್ಯಕ್ಷ ಆರ್. ರಾಜಶೇಖರ್, ನಗರ ಬಿಜೆಪಿ ಘಟಕದ ಅಧ್ಯಕ್ಷ ರಾಜೇಂದ್ರ, ಬಿಜೆಪಿ ಮುಖಂಡರಾದ ವೈ.ಎಸ್.ರವಿ, ವಾಲ್ಮೀಕಿ ಶ್ರೀನಿವಾಸ್, ಮಂಜುನಾಥ,ಕೃಷ್ಣಯ್ಯ ಆಚಾರ್,ಅರುಣ್ ಜೈನ್,ಪೌಳ್ ಚರಿಯಾನ್, ಮಂಜುನಾಥ ಲಾಡ್ ಹಾಗೂ ಇತರ ಬಿಜೆಪಿ ಮುಖಂಡರು ಇದ್ದರು. ನಂತರ ಮನವಿ ಪತ್ರವನ್ನು ಪಪಂ ಮುಖ್ಯಾಧಿಕಾರಿ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.