ಕುಷ್ಟಗಿ: ಸಿಸಿ ರಸ್ತೆ ಮಾಡುವುದಾಗಿ ಹೇಳಿ ಅಚ್ಚುಕಟ್ಟಾದ ರಸ್ತೆ ಒಡೆದು ರಸ್ತೆಯಲ್ಲಿ ಕಲ್ಲು ಹಾಕಿ ಹೋಗಿದ್ದಾರೆ. ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.ತಾಲೂಕಿನ ಕೇಸೂರು ಗ್ರಾಮದ ಎರಡನೇ ವಾರ್ಡಿನಲ್ಲಿ ನರೇಗಾ ಯೋಜನೆಯಲ್ಲಿ ಕಳೆದ ತಿಂಗಳು ಸಿಸಿ ರಸ್ತೆ ನಿರ್ಮಾಣಕ್ಕಾಗಿ ಚೆನ್ನಾಗಿದ್ದ ರಸ್ತೆ ಅಗೆದು ಅದರ ಮೇಲೆ ಕಡಿ ಹಾಕಿ ಹೋಗುವ ಮೂಲಕ ಸಿಸಿ ರಸ್ತೆಯ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ರಸ್ತೆಯ ಅಕ್ಕಪಕ್ಕದಲ್ಲಿನ ಮನೆಯ ಸದಸ್ಯರು ಹೊರಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ರಸ್ತೆಯ ಅಕ್ಕಪಕ್ಕದಲ್ಲಿ ವಾಸ ಮಾಡುವ ಕುಟುಂಬಗಳಲ್ಲಿ ವಯೋವೃದ್ಧರು, ಚಿಕ್ಕಮಕ್ಕಳು ವಾಸ ಮಾಡುತ್ತಿದ್ದು, ಅವರು ಸಹಿತ ಸಂಚರಿಸುವ ವೇಳೆ ಕಲ್ಲುಗಳು ತೊಡಕಾಗಿ ಕೆಳಗೆ ಬಿದ್ದು ಗಾಯಗಳಾದ ಉದಾಹರಣೆ ಇವೆ.ಕೂಡಲೇ ಗ್ರಾಪಂ ಪಿಡಿಒ, ಸಂಬಂಧಪಟ್ಟ ಎಂಜಿನಿಯರ್, ಗುತ್ತಿಗೆದಾರರು ಸಿಸಿ ರಸ್ತೆ ಹಾಕಬೇಕು. ಇಲ್ಲವೇ ಹಾಕಿರುವ ಕಡಿ ವಾಪಸ್ ತೆಗೆದುಕೊಂಡು ಹೋಗಿ ಮೊದಲಿನಂತೆ ಇರುವ ರಸ್ತೆಯನ್ನು ಮಾಡಿಕೊಡಬೇಕು ಎಂದು ಹೇಳುತ್ತಾರೆ.ಸಂಚಾರಕ್ಕೆ ತೊಂದರೆ:ಕೇಸೂರು ಗ್ರಾಮದ ಎರಡನೇ ವಾರ್ಡಿನಲ್ಲಿ ಮೂರು ಸ್ಥಳಗಳಲ್ಲಿ ಸಿಸಿ ರಸ್ತೆಯ ಕಾಮಗಾರಿ ನಡೆಸುವುದಕ್ಕಾಗಿ ರಸ್ತೆ ಅಗೆದು ಅದರಲ್ಲಿ ಹಾಕಲಾದ ಕಡಿಗಳ ಮೇಲೆ ಸಿಮೆಂಟ್ ಹಾಕದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಡೆದಾಡಲು ಬಾರದಾಗಿದೆ. ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ.ಈ ರಸ್ತೆಯಲ್ಲಿ ಸರ್ಕಾರಿ ಶಾಲೆ, ಖಾಸಗಿ ಶಾಲೆ, ಅಂಗನವಾಡಿ ಕೇಂದ್ರವಿದೆ. ಕೆಲವು ವಿದ್ಯಾರ್ಥಿಗಳು ಈ ರಸ್ತೆಯ ಮೂಲಕವೇ ಶಾಲೆಗೆ ಹೋಗುತ್ತಿದ್ದಾರೆ. ಕಾಲ್ನಡಿಗೆಯಲ್ಲಿ ಹೋಗಲು ಬಹಳಷ್ಟು ತೊಂದರೆ ಪಡುವಂತಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.ನಮ್ಮ ಓಣಿಯಲ್ಲಿ ಸಿಸಿ ರೋಡ್ ಮಾಡುತ್ತೇವೆ ಅಂತ ಹೇಳಿ ನೆಲ ಅಗೆದು ಕಡಿ ಹಾಕಿ ಹಾಗೆ ಬಿಟ್ಟು ಹೋಗಿದ್ದಾರೆ. ವಾಪಸ್ ರೋಡ್ ಮಾಡೋದಕ್ಕೆ ಬಂದಿಲ್ಲ. ನಾವು ಸಂಚರಿಸಲು ತೊಂದರೆಯಾಗುತ್ತಿದೆ. ಅಧಿಕಾರಿಗಳು ಕೂಡಲೇ ರೋಡ್ ಮಾಡಿಸಬೇಕು. ಇಲ್ಲವೇ ಕಡಿಗಳ ಮೇಲೆ ಮರಂ ಹಾಕಿ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೇಸೂರು ಗ್ರಾಮದ ಮಹಿಳೆಯರು ತಿಳಿಸಿದ್ದಾರೆ.ಕೇಸೂರು ಗ್ರಾಮದಲ್ಲಿ ಸ್ಥಗಿತಗೊಂಡ ಸಿಸಿ ರಸ್ತೆಯ ಕಾಮಗಾರಿ ಕುರಿತು ಸಹಾಯಕ ನಿರ್ದೇಶಕರ ಜೊತೆ ಮಾತಾಡಿಕೊಂಡು ಕಾಮಗಾರಿ ಆರಂಭಿಸಲು ತಿಳಿಸಲಾಗುವುದು ಎನ್ನುತ್ತಾರೆ ಕುಷ್ಟಗಿ ತಾಪಂ ಇಒ ನಿಂಗಪ್ಪ ಎಂ. ಅವರು.ಮೂರು ರಸ್ತೆಗಳ ಪೈಕಿ ಒಂದು ರಸ್ತೆಗೆ ತಕರಾರು ಬಂದಿದೆ. ಕೆಲಸ ನಿಲ್ಲಿಸಲು ಯಾರಿಗೂ ಹೇಳಿಲ್ಲ. ಸಾರ್ವಜನಿಕ ಸಂಚಾರಕ್ಕಾಗಿ ರಸ್ತೆ ಅವಶ್ಯಕವಾಗಿದೆ. ಕಾಮಗಾರಿ ಆರಂಭಿಸಲು ಎಂಜಿನಿಯರ್, ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎನ್ನುತ್ತಾರೆ ಕೇಸೂರು ಗ್ರಾಪಂ ಪಿಡಿಒ ಅಮೀನಸಾಬ ಅಲಾಂದಾರ.